ADVERTISEMENT

ಮೂವರು ವಿಚಾರಣಾಧೀನ ಕೈದಿಗಳಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 11:12 IST
Last Updated 17 ಏಪ್ರಿಲ್ 2021, 11:12 IST

ಸುರಪುರ: ‘ನಗರದ ಉಪ ಕಾರಾಗೃಹ ಕೇಂದ್ರದ 3 ಜನ ವಿಚಾರಣಾಧೀನ ಕೈದಿಗಳಲ್ಲಿ ಶುಕ್ರವಾರ ಕೋವಿಡ್ ದೃಢಪಟ್ಟಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ತಿಳಿಸಿದ್ದಾರೆ.

‘ಕೋವಿಡ್ ಎರಡನೇ ಅಲೆಯಲ್ಲಿ ಹುಣಸಗಿ ಮತ್ತು ಸುರಪುರ ತಾಲ್ಲೂಕಿನಲ್ಲಿ ಇದುವರೆಗೂ 75 ಪ್ರಕರಣ ಕಾಣಿಸಿಕೊಂಡಿವೆ. 19 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದ 52 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರಗಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ’ ಎಂದು ತಿಳಿಸಿದರು.

‘ಸೋಂಕಿತರ ಐಸೋಲೇಷನ್‌ಗೆ ತಾಲ್ಲೂಕು ಆಸ್ಪತ್ರೆಯಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ, ಆರೋಗ್ಯ ಉಪ ಕೇಂದ್ರ, ಅಂಗನವಾಡಿಗಳಲ್ಲಿ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇದುವರೆಗೂ 35 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಎರಡನೇ ಲಸಿಕೆ ಪಡೆದುಕೊಳ್ಳುವವರು ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಕಾರಾಗೃಹದಲ್ಲಿ 46 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಈ ಪೈಕಿ ಸೋಂಕಿತ 3 ಜನ ಕೈದಿಗಳನ್ನು ಪ್ರತ್ಯೇಕವಾಗಿ ಬೇರೆ ಸೆಲ್‍ನಲ್ಲಿ ಇಡಲಾಗಿದೆ. ಅವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ಅಗತ್ಯಬಿದ್ದಲ್ಲಿ ಕಾರಾಗೃಹದ ಮೇಲಧಿಕಾರಿಗಳ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಕಾರಾಗೃಹ ಅಧೀಕ್ಷಕ ಅರುಣಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.