ADVERTISEMENT

ಹಿಂದೂ ಮುಸ್ಲಿಂ ಭಾವೈಕ್ಯದ ತಿಂಥಣಿಯಲ್ಲಿ ಸಡಗರದ ಮೌನೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:41 IST
Last Updated 2 ಫೆಬ್ರುವರಿ 2026, 2:41 IST
ಕಕ್ಕೇರಾ ಪಟ್ಟಣದ ಸಮೀಪದ ತಿಂಥಣಿ ಮೌನೇಶ್ವರ ರಥವು ಭಕ್ತರ ಜಯಘೋಷಗಳ ಮಧ್ಯೆ ಭಾನುವಾರ ಸಂಜೆ ಸಡಗರದಿಂದ ಜರುಗಿತು  ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಕಕ್ಕೇರಾ ಪಟ್ಟಣದ ಸಮೀಪದ ತಿಂಥಣಿ ಮೌನೇಶ್ವರ ರಥವು ಭಕ್ತರ ಜಯಘೋಷಗಳ ಮಧ್ಯೆ ಭಾನುವಾರ ಸಂಜೆ ಸಡಗರದಿಂದ ಜರುಗಿತು  ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ   

ಕಕ್ಕೇರಾ: ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿಯ ಜಗದ್ಗುರು ಮೌನೇಶ್ವರ ರಥವು ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಜಯಘೋಷಗಳ ಹಾಗೂ ವಾದ್ಯಮೇಳಗಳ ಜೊತೆ ಸಡಗರದಿಂದ ಜರುಗಿತು.

ಭಕ್ತರ ‘ಎಕ ಲಾಕ್ ಐಂಸಿ ಹಜಾರ್ ಪಾಚೋಪೀರ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್ ಕಾಶೀಪತಿ ಗಂಗಾಧರ ಹರಹರ ಮಹಾದೇವ...ಎಂಬ ಮಂತ್ರಘೋಷಗಳು ಮೊಳಗಿದವು. ಭಾವೈಕ್ಯತೆಯ ಸಂಕೇತ ಸಾರುವ ಕೇಸರಿ ಮತ್ತು ಹಸಿರು ಸಂಕೇತದ ಧ್ವಜಗಳನ್ನು ಹೊತ್ತ ರಥಕ್ಕೆ ಭಕ್ತರು ಉತ್ತತ್ತಿ, ಬಾಳೇಹಣ್ಣು ಹಾರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.

ಭಕ್ತರ ಹರ್ಷೋದ್ಗಾರ, ಕರಡಾತನ ಮುಗಿಲು ಮುಟ್ಟಿತ್ತು. ಭಕ್ತರು ಬೆಟ್ಟ-ಗುಡ್ಡಗಳ ಮೇಲೆ ನಿಂತು ದೂರದಿಂದಲೇ ರಥೋತ್ಸವವನ್ನು ಕಣ್ಣುತುಂಬಿಕೊಂಡರು, ರಥವು ಸುಗಮವಾಗಿ ಪಾದಗಟ್ಟಿ ತಲುಪಿ ಸ್ಥಳಕ್ಕೆ ಬಂದು ಸುಗಮವಾಗಿ ತಲುಪಿತು.

ADVERTISEMENT

ಮೌನೇಶ್ವರ ಸ್ವಾಮಿಜೀ, ತಹಶೀಲ್ದಾರ ಹೆಚ್ ಎ, ಸರಕಾವಸ್, ಉಪತಹಶೀಲ್ದಾರ್‌ ರೇವಪ್ಪ ತೆಗ್ಗಿನಮನಿ, ದೇವಸ್ಥಾನದ ಮೇಲ್ವಿಚಾರಕ ಶಿವಾನಂದ ಹಿರೇಮಠ, ಚಿನ್ನಪ್ಪ ಗುಡಗುಂಟಿ, ಗಂಗಾಧರನಾಯಕ, ರತ್ನರಾಜ ಶಾಲಿಮನಿ, ಮೌನೇಶ ಬೋವಿ, ರಾಮಣ್ಣ ಸುಬೇದಾರ, ಮಾನಯ್ಯಗೌಡ ದಳಪತಿ, ಭೀಮಣ್ಣ ಕವಲ್ದಾರ್, ಮಲ್ಲಿಕಾರ್ಜುನ ಸಾಹುಕಾರ, ಸಂಜೀವನಾಯಕ ಕವಲ್ದಾರ, ಭೈರಣ್ಣ ಅಂಬಿಗರ, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಸಂಘಗಳ ಪದಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೇರಿದಂತೆ ಅನೇಕರು ಹಾಜರಿದ್ದರು.

ಜಿಲ್ಲಾ ವರಿಷ್ಠಾಧಿಕಾರಿ ಪೃಥ್ವಿ ಶಂಕರ್ ನೇತೃತ್ವದಲ್ಲಿ ಡಿವೈಎಸ್‌ಪಿ ಜಾವಿದ್ ಇನಾಂದಾರ್ ಅವರು ಪೊಲೀಸ ಬಿಗಿಬಂದೋಬಸ್ತ್‌ ಕಲ್ಪಿಸಿದರು. ನದಿತೀರ ಹಾಗೂ ದೇವಸ್ಥಾನದ ಹೊರ ಮತ್ತು ಒಳಗೆ ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು.

ಟ್ರಾಫಿಕ್ ಜಾಮ್: ಇಂದಿನ ರಥೋತ್ಸವಕ್ಕೆ ಹಾಗೂ ನಾಳೆ ಜರುಗುವ ಧೂಳಗಾಯಿ ಕಾರ್ಯಕ್ರಮಕ್ಕೆ ರಾಜ್ಯವಲ್ಲದೇ ಹೊರರಾಜ್ಯಗಳಿಂದ ಭಕ್ತಸಮೂಹ ತಂಡೋಪತಂಡವಾಗಿ, ಪಾದಯಾತ್ರೆ ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸುತ್ತಿದ್ದರಿಂದ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೋಲಿಸ್ ಇಲಾಖೆ, ಕಂದಾಯ, ಗ್ರಾಮ ಪಂ, ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.

ಇಂದು ಧೂಳಗಾಯಿ, ಗುಹಾಪ್ರವೇಶ: ಇಂದು ಬೆಳಿಗ್ಗೆಯಿಂದ ಸಂಜೆವರೆಗೆ ಭಕ್ತರಿಂದ ಧೂಳಗಾಯಿ ಸಮರ್ಪಣೆ ನಡೆಯಲಿದೆ. ನಂತರ ಸಂಜೆ ಮೌನೇಶ್ವರರು ಗುಹಾಪ್ರವೇಶಗೊಳ್ಳುವ ಮೂಲಕ ಜಾತ್ರೆ ಸಂಪನ್ನವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.