ADVERTISEMENT

ಯಾದಗಿರಿ: ಸ್ನಾನ ಗೃಹ, ಜಾನುವಾರು ಮೇವು ಸಂಗ್ರಹ ಕೋಣೆಯಾದ ವೈಯಕ್ತಿಕ ಶೌಚಾಲಯಗಳು

ದಾಖಲೆಗಳಲ್ಲಿ ಮಾತ್ರ ಶೌಚಾಲಯ ನಿರ್ಮಾಣ

ಬಿ.ಜಿ.ಪ್ರವೀಣಕುಮಾರ
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಳಕೆ ಮಾಡದೆ ಬಿಡಲಾಗಿದೆಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಳಕೆ ಮಾಡದೆ ಬಿಡಲಾಗಿದೆಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿದ ಬಹುತೇಕ ವೈಯಕ್ತಿಕ ಶೌಚಾಲಯಗಳು ಸ್ನಾನಗೃಹ ಇಲ್ಲವೆ ಜಾನುವಾರುಗಳಿಗೆ ಮೇವು ಸಂಗ್ರಹಿಸುವ ಸ್ಥಳವಾಗಿ ಪರಿವರ್ತನೆಯಾಗಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಾಟಾಚಾರಕ್ಕೆ ಬಿಲ್ ಪಡೆಯುವ ಉದ್ದೇಶದಿಂದ ಹಲವು ಕಡೆ ನಿರ್ಮಿಸಿ ನಂತರ ಕಿತ್ತು ಹಾಕಿದ್ದಾರೆ. ದಾಖಲೆಯಲ್ಲಿ ಮಾತ್ರ ಉತ್ತಮ ಗುರಿ ಸಾಧನೆಯಾಗಿದೆ.

2012ರಲ್ಲಿ ಜಿಲ್ಲೆಯಲ್ಲಿ 1,23,717 ಶೌಚಾಲಯ ಇರುವ ಮತ್ತು ಇಲ್ಲದಿರುವ ಮನೆಗಳನ್ನು ಗುರುತಿಸಲಾಗಿತ್ತು. ಆನಂತರ ಪ್ರತಿ ವರ್ಷ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. 2018–19ನೇ ಸಾಲಿನಲ್ಲಿ ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಹೆಸರಿಗೆ ಮಾತ್ರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಬಳಕೆ ಮಾತ್ರ ಆಗುತ್ತಿಲ್ಲ.

ADVERTISEMENT

2013–14ನೇ ಸಾಲಿನಲ್ಲಿ 106, 2014–15ರಲ್ಲಿ 4,761, 2015–16ರಲ್ಲಿ 8,331, 2017–18ರಲ್ಲಿ 27,156, 2018–19ರಲ್ಲಿ 51,326 ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ದಾಖಲೆಗಳು ಹೇಳುತ್ತವೆ.

ಸಮುದಾಯ ಶೌಚಾಲಯಗಳನ್ನು ಯಾದಗಿರಿ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 24 ನಿರ್ಮಿಸಲಾಗಿದೆ. ನೀರಿನ ಕೊರತೆಯಿಂದ ಅವುಗಳು ಬಳಕೆಗೆ ಯೋಗ್ಯವಿಲ್ಲದಂತೆ ಆಗಿವೆ.

ಹೆಸರಿಗಷ್ಟೇ ಘೋಷಣೆ:

ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಆದರೆ, ಇದು ಹೆಸರಿಗೆ ಮಾತ್ರ ಎನ್ನುವಂತೆ ಆಗಿದೆ. ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಆದರೆ, ಸಹಾಯಧನಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರೇ ಮುಂದೆ ನಿಂತು ಮಾಡಿಸಿದ್ದಾರೆ. ಆದರೆ, ಅವುಗಳನ್ನು ಬಳಕೆ ಮಾಡದೆ, ಬೇರೆ ಯಾವುದೋ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ.

ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ತಿಪ್ಪೆ ಗುಂಡಿ ಬಳಿ ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿ ಬಳಕೆ ಮಾಡಿರುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ. ಆದರಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.

2021–2022ರ ಸಾಲಿನಲ್ಲಿ 8 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. 7,684 ಕೆಲಸದ ಆದೇಶ ನೀಡಿದ್ದು, 316 ಬಾಕಿ ಉಳಿದಿವೆ. ಶೇ 72.50 ಪ್ರಗತಿ ಸಾಧಿಸಲಾಗಿದೆ.

‘ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹಾಗೂ ಜಾಗದ ಕೊರತೆ ಇದೆ. ಇಕ್ಕಟ್ಟಾದ ಜಾಗದಲ್ಲಿ ನಿರ್ಮಿಸಿದರೆ ಪಕ್ಕದ ಮನೆಯವರು ಕೆಟ್ಟ ವಾಸನೆ ಬರುತ್ತದೆ ಎಂದು ತಕರಾರು ತೆಗೆಯುತ್ತಾರೆ. ಆಗ ಅನಿವಾರ್ಯವಾಗಿ ಕಿತ್ತು ಹಾಕಿದ್ದೇವೆ. ಅದರಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಆಗುತ್ತದೆ. ಅಧಿಕ ನೀರು ಶೌಚಾಲಯಕ್ಕೆ ಬಳಸಿದರೆ ವಾಸನೆ ಬರುವುದಿಲ್ಲ. ಇಲ್ಲದೆ ಹೋದರೆ ದುರ್ವಾಸನೆಯಿಂದ ಸಾಕಾಗಿ ಹೋಗುತ್ತದೆ’ ಎನ್ನುತ್ತಾರೆ ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಮಹಿಳೆ ಒಬ್ಬರು.

‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಆಗಿದ್ದ ಸ್ವಚ್ಛ ಭಾರತ ಅಭಿಯಾನ ನಿರೀಕ್ಷೆಯಷ್ಟು ಯಶಸ್ವಿ ಕಾಣದೆ ನೆಲಕಚ್ಚಿದೆ. ಅಲ್ಲದೆ ಹಳ್ಳಿ ಜನತೆಯು ವೈಯಕ್ತಿಕ ಶೌಚಾಲಯ ಉಪಯೋಗಿಸಬೇಕು ಎಂಬ ಅರಿವು ಹಾಗೂ ಜಾಗೃತಿಯ ಕೊರತೆಯು ಕಾಣುತ್ತದೆ. ಇನ್ನಷ್ಟು ಪ್ರಚಾರ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಅನುದಾನ ನೀಡಬೇಕು’ ಎನ್ನುತ್ತಾರೆ ಅಧಿಕಾರಿ ಒಬ್ಬರು.

‘ಬಯಲು ಶೌಚಾಲಯ ಮುಕ್ತ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರಿಲ್ಲ. ಇದು ಶೌಚಾಲಯಗಳ ನಿರ್ವಹಣೆಗೆ ಮೂಲ ಸಮಸ್ಯೆ ಆಗಿದೆ. ಗ್ರಾಮದ ಎರಡು ಬದಿಯಲ್ಲಿ ಶೌಚ ಮಾಡಿರುತ್ತಾರೆ. ವೈಯಕ್ತಿಕವಾಗಿ ನಿರ್ಮಿಸಿಕೊಂಡ ಶೌಚಾಲಯಗಳನ್ನು ಕೋಳಿ ಗೂಡು, ಕಟ್ಟಿಗೆ ಇಡುವುದು ಮಾಡುತ್ತಿದ್ದಾರೆ. ಇದರಿಂದ ಸ್ವಚ್ಛ ಭಾರತ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿಲ್ಲ’ ಎನ್ನುತ್ತಾರೆ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ.

ಗ್ರಾಮೀಣ ಶೌಚಾಲಯ ಸ್ಥಿತಿಗಳ ಬಗ್ಗೆ ಮಾಹಿತಿ ಪಡೆಯಲು ಜಿ.ಪಂ ನೂತನ ಸಿಇಒ ಅಮರೇಶ ಮತ್ತು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್‌.ರಾಠೋಡ ಅವರು ಮೊಬೈಲ್‌ಸಂಪರ್ಕಕ್ಕೆ ಸಿಗಲಿಲ್ಲ.

ವಡಗೇರಾ ತಾಲ್ಲೂಕಿನ ಅನಕಸೂಗುರು ಗ್ರಾಮದಲ್ಲಿ ಬಳಕೆಯಾಗದೇ ಪಾಳು ಬಿದ್ದಿರುವ ಶೌಚಾಲಯ

ಹಣ ದುರುಪಯೋಗವೇ ಹೆಚ್ಚು

ಸುರಪುರ: ಸರ್ಕಾರ ವಿವಿಧ ಯೋಜನೆಗಳ ಮೂಲಕ ಬಯಲು ಶೌಚ ಮುಕ್ತಕ್ಕಾಗಿ ಪ್ರಯತ್ನ ನಡೆಸಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದು ಸಾಧ್ಯವಾಗದಿರುವುದಕ್ಕೆ ಸುರಪುರ ತಾಲ್ಲೂಕು ಸಾಕ್ಷಿ.

ಸರ್ಕಾರ 2014ರಲ್ಲಿ ಸ್ವಚ್ಛ ಭಾರತ್‌ ಮಿಷನ್ ಅಡಿ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಪರಿಶಿಷ್ಟರಿಗೆ ₹15 ಸಾವಿರ, ಇತರರಿಗೆ ₹ 12 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ, ಹಲವು ಫಲಾನುಭವಿಗಳು ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಪ್ರಗತಿಪರರ ಆರೋಪ.

ಸ್ವಚ್ಛ ಭಾರತ್‌ ಮಿಷನ್ ಪ್ರಕಾರ ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೇ 72 ರಷ್ಟು ವೈಯಕ್ತಿಕ ಶೌಚಾಲಯ ನಿರ್ಮಾಣವಾಗಿವೆ ಎಂಬ ಮಾಹಿತಿ ಇದೆ. ಆದರೆ, ವಾಸ್ತವವಾಗಿ ಶೇ 50 ರಷ್ಟು ಪ್ರಗತಿಯೂ ಇಲ್ಲ ಎನ್ನುತ್ತಾರೆ ಮುಖಂಡರು.

ಕೆಲವು ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಯೋಜನೆಗಳಲ್ಲಿ ಸುಸಜ್ಜಿತ ಸಮುದಾಯ ಶೌಚಾಲಯ ನಿರ್ಮಿಸಿದರೂ ಜನರು ಉಪಯೋಗಿಸುತ್ತಿಲ್ಲ. ಗ್ರಾಮೀಣರಿಗೆ ಬಯಲು ಶೌಚಕ್ಕೆ ಹೋಗದಿರುವಂತೆ ವ್ಯಾಪಕ ತಿಳಿವಳಿಕೆ ನೀಡುವ ಅಗತ್ಯವಿದೆ ಎನ್ನುತ್ತಾರೆ ಮುಖಂಡರು.

ಬಿಲ್‌ಗಾಗಿ ಶೌಚಾಲಯ ನಿರ್ಮಾಣ

ವಡಗೇರಾ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ಶೌಚಾಲಯಗಳು ಬಳಕೆಯಾಗದೆ ಹಾಳಾಗುತ್ತಿವೆ. ಯೋಜನೆ ಕೇವಲ ಹಣ ಎತ್ತುವ ಸಲುವಾಗಿ ಶೌಚಾಲಯ ನಿರ್ಮಿಸಿದಂತಿದೆ ಎಂದು ಸಾರ್ವಜನಿಕರು ಮಾತನಾಡುತ್ತಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯಲು ನೀರೇ ಸರಿಯಾಗಿ ಕೊಡುವುದಿಲ್ಲ. ಇನ್ನು ಶೌಚಾಲಯಗಳು ಬಳಸುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕೇಂದ್ರ ಸರ್ಕಾರ ಬಹಿರ್ದೆಸೆ ಮುಕ್ತ ಗ್ರಾಮ ಮಾಡಲು ಯೋಜನೆಯನ್ನು ಜಾರಿಗೆ ತಂದಿದೆ.

ಆದರೆ, ಗ್ರಾಮ ಪಂಚಾಯಿತಿ ಆಡಳಿತವು ಯೋಜನೆಯನ್ನು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳಿಂದ ಬೇಕಾಬಿಟ್ಟಿ ಶೌಚಾಲಯ ನಿರ್ಮಿಸಿ ಪಾವತಿಸಿ ಕೊಂಡಿದ್ದಾರೆ.

ತೋರಿಕೆಗೆ ಮಾತ್ರ ಶೌಚಾಲಯ

ಹುಣಸಗಿ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ತಿಳಿವಳಿಕೆ ಕೊರತೆ ಹಾಗೂ ಸರಿಯಾಗಿ ಅವುಗಳನ್ನು ನಿರ್ಮಿಸದೇ ಇರುವುದರಿಂದ ಬಳಕೆಯಾಗುತ್ತಿಲ್ಲ.

ಪ್ರಸಕ್ತ ಅವಧಿಯಲ್ಲಿ ಶಾಸಕ ರಾಜೂಗೌಡ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಯಾವುದೇ ಸನ್ಮಾನ ಸ್ವೀಕರಿಸದೇ ಬಯಲು ಶೌಚ ಮುಕ್ತ ಕ್ಷೇತ್ರ ಮಾಡುವವರೆಗೂ ಸನ್ಮಾನ ಸ್ವೀಕರಿಸುವದಿಲ್ಲ ಎಂದು ಹೇಳಿದ್ದರು.

ಆ ಸಂದರ್ಭದಲ್ಲಿ ಗ್ರಾಮದಲ್ಲಿ ಆಸಕ್ತಿಯಿಂದ ನಿರ್ಮಿಸಲಾಯಿತು. ಆದರೆ, ಗುಣಮಟ್ಟದ ಕಾಮಗಾರಿ ನಿರ್ವಹಿಸದೇ ಇದ್ದರಿಂದ ಶೌಚಾಲಯಗಳು ಕೇವಲ ತೋರಿಕೆಗೆ ಅಷ್ಟೇ ಎನ್ನುವಂತಾಗಿದೆ.

ಅಲ್ಲದೆ ಅವುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಗ್ರಾಮ ಪಂಚಾಯಿತಿಗಳು ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಜುಮ್ಮಣ್ಣ ಬಲಶೆಟ್ಟಿಹಾಳ ಹೇಳುತ್ತಾರೆ.

ಬಹುತೇಕ ಗ್ರಾಮಗಳಲ್ಲಿ ಮಹಿಳಾ ಸಂಘಟನೆಗಳು ಸಾಮೂಹಿಕ ಶೌಚಾಲಯ ಬೇಡಿಕೆ ಇಡುತ್ತಿದ್ದಾರೆ.ಆದರೆ, ವೈಯಕ್ತಿಕ ಶೌಚಾಲಯಗಳ ನಿರ್ವಹಣೆಯಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ ಎನ್ನುವಂತಾಗಿದೆ.

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ದೇವೀಂದ್ರಪ್ಪ ಬಿ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.