ADVERTISEMENT

ಹುಣಸಗಿ | ಅಧಿಕ ಮಳೆ, ಮಂಜು ಕವಿದ ವಾತವರಣ: ರೈತರಿಗೆ ತೊಗರಿ ಇಳುವರಿ ಕುಸಿತದ ಭೀತಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 7:31 IST
Last Updated 24 ನವೆಂಬರ್ 2025, 7:31 IST
ಹುಣಸಗಿ ತಾಲ್ಲೂಕಿನ ಗುಂಡಲಗೇರಾ ಗ್ರಾಮದಲ್ಲಿ ಮಂಜಿನಿಂದಾಗಿ ತೊಗರಿ ಹೂಗಳು ಉದುರಿದ ತೊಗರಿ
ಹುಣಸಗಿ ತಾಲ್ಲೂಕಿನ ಗುಂಡಲಗೇರಾ ಗ್ರಾಮದಲ್ಲಿ ಮಂಜಿನಿಂದಾಗಿ ತೊಗರಿ ಹೂಗಳು ಉದುರಿದ ತೊಗರಿ   

ಹುಣಸಗಿ: ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಅಧಿಕ ಮಳೆ ಹಾಗೂ ದೀಪಾವಳಿಯ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಮಂಜು ಕವಿದ ವಾತಾವರಣದಿಂದಾಗಿ ತಾಲ್ಲೂಕಿನಲ್ಲಿ ಬೆಳೆದಿರುವ ತೊಗರಿ ಬೆಳೆಗೆ ಮಾರಕವಾಗಿದೆ.

ಮುಂಗಾರು ಆರಂಭದ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ರೈತರು ತೊಗರಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ಅಕ್ಟೋಬರ್‌ನಲ್ಲಿ ಮಳೆಯಿಂದಾಗಿ ತೊಗರಿ ಗಿಡಗಳು ಎತ್ತರವಾಗಿ ಬೆಳೆದಿವೆ. ಆದರೆ ಕಾಪು ಕೊಂಡಿ ಉದುರಿಹೋಗಿವೆ ಎಂದು ರೈತರು ಹೇಳುತ್ತಾರೆ.

‘ಹುಣಸಗಿ ವಲಯದ ಗ್ರಾಮೀಣ ಭಾಗದಲ್ಲಿ 9,300 ಎಕರೆ ಹಾಗೂ ತಾಲ್ಲೂಕಿನ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 16,000 ಎಕರೆ ಪ್ರದೇಶದಲ್ಲಿ ರೈತರು ವಿವಿಧ ತಳಿಯ ತೊಗರಿ ಬಿತ್ತನೆ ಮಾಡಿಕೊಂಡಿದ್ದರು. ಆದರೆ ಬಹುತೇಕ ಹೂ ಉದುರಿ ಬಿದ್ದಿರುವುದು ಸ್ಥಳ ಪರಿಶೀಲನೆ ಮಾಡಿದಾಗ ಗಮನಕ್ಕೆ ಬಂದಿದೆ’ ಎಂದು ಕೃಷಿ ಅಧಿಕಾರಿ ದೀಪಾ ದೊರೆ ಮಾಹಿತಿ ನೀಡಿದರು.

ADVERTISEMENT

‘8 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದೇವು. ಇಂದಿಗೂ ತೊಗರಿ ಗಿಡ ಹಚ್ಚ ಹಸಿರು ಇದ್ದರೂ ಕೂಡ ಫಲ ಇಲ್ಲ. ಇದರಿಂದಾಗಿ ತೊಗರಿ ಮತ್ತೆ ಸಾಲದ ಸುಳಿಗೆ ಸಿಲುಕವಂತೆ ಮಾಡಿದೆ’ ಎಂದು ಗುಂಡಲಗೇರಾ ಗ್ರಾಮದ ಶಾಂತಗೌಡ ಕವಿತಾಳ, ಮಾರಲಬಾವಿ ಗ್ರಾಮದ ಸಾಯಬಣ್ಣ ಹಾಗೂ ಪಿರೋಜಿ ಸುಬೇದಾರ ನೊಂದು ನುಡಿದರು.

‘ಆರಂಭದಲ್ಲಿ ಎತ್ತರದಲ್ಲಿ ಗಿಡ ಬೆಳೆದಿದ್ದರಿಂದಾಗಿ ಟ್ರಾಕ್ಟರ್‌ ಮೂಲಕ ಕೀಟನಾಶಕ ಸಿಂಪರಣೆ ಮಾಡಲಾಗಿತ್ತು. ಆದರೆ ಕಳೆದ 15 ದಿನಗಳ ಹಿಂದೆ ಮಂಜಿನಿಂದ ಎಲ್ಲ ಹೂವು ಉದುರಿದ್ದು ಗಿಡದ ಕೊನೆ ಭಾಗದಲ್ಲಿ ಮಾತ್ರ ಅಲ್ಪ ತೊಗರಿ ಹಿಡಿದುಕೊಂಡಿದ್ದು, ಎಕರೆಗೆ ಕೇವಲ 2 ಕ್ವಿಂಟಲ್‌ ಮಾತ್ರ ಬರುವ ನಿರಿಕ್ಷೆ ಇದೆ’ ಎನ್ನುತ್ತಾರೆ ರೈತರು.

‘ಕಳೆದ ವರ್ಷ ಎಕರೆಗೆ 8 ಕ್ವಿಂಟಲ್‌ ತೊಗರಿ ಬೆಳೆದಿದ್ದೇವು. ಆದರೆ ಈ ಬಾರಿ ಮಾಡಿದ ಖರ್ಚು ಕೂಡಾ ಬರುವ ಅನುಮಾನವಿದೆ’ ಎಂದು ರಾಜನಕೋಳುರು ಗ್ರಾಮದ ಯಂಕನಗೌಡ ವಠಾರ, ನೀಲಕಂಠ ವಡಗೇರಿ ಹೇಳಿದರು.

ಇದೇ ಸ್ಥಿತಿ ತಾಲ್ಲೂಕಿನ ಮಂಜಲಾಪುರ, ಶ್ರೀನಿವಾಸಪುರ, ಕನಗಂಡನಹಳ್ಳಿ, ಕೊಡೇಕಲ್ಲ, ಬಪ್ಪರಗಿ, ಹೊರಟ್ಟಿ, ಮದಲಿಂಗನಾಳ, ಮಾರಲಬಾವಿ ಸೇರಿದಂತೆ ಇತರ ಗ್ರಾಮದಲ್ಲಿದೆ.

ಹುಣಸಗಿ ತಾಲ್ಲೂಕಿನ ಮಾರಲಬಾವಿ ಗ್ರಾಮದಲ್ಲಿ ತೊಗರಿ ಹೂಗಳು ಉದುರಿದ ತೊಗರಿ
ಹೂವು ಉದುರುವಿಕೆಗೆ ತಡೆಗೆ ಕೃಷಿ ಇಲಾಖೆ ಸಲಹೆ
‘ತೊಗರಿ ಹೂವು ಉದರದಂತೆ ಕಾಪಾಡಿಕೊಳ್ಳಲು ಹಾಗೂ ಫಲ ಕಾಳು ವೃದ್ಧಿಯಾಗಲು ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿಯಲ್ಲಿ ಪಲ್ಸ್ ಮ್ಯಾಜಿಕ್ ಎಂಬ ಔಷಧಿ ಲಭ್ಯವಿದೆ. ಇದನ್ನು ಎಕರೆಗೆ 2 ಕೆಜಿ ಪಾಕೆಟ್ ಸಿಂಪಡಣೆ ಮಾಡುವುದರಿಂದ ಅಥವಾ ಪ್ಲಾನೋಫಿಕ್ಸ್ ಔಷಧಿಯನ್ನು ಒಂದು ಟ್ಯಾಂಕಿಗೆ 6 ರಿಂದ 10 ಮಿಲಿ ಲೀ ಹಾಕಿ ಸಿಂಪರಣೆ ಮಾಡುವುದರಿಂದ ಹೂ ಉದುರುವುದು ಹತೋಟಿಗೆ ಬರುತ್ತದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ್ ರೈತರಿಗೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.