ADVERTISEMENT

ಯಾದಗಿರಿ: ಹತ್ತಿ ಬಿಡಿಸಿ ಬರುವಾಗ ಟ್ರ್ಯಾಕ್ಟರ್‌ ಪಲ್ಟಿ, ಇಬ್ಬರು ಮಹಿಳೆಯರು ಸಾವು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 12:45 IST
Last Updated 21 ಡಿಸೆಂಬರ್ 2021, 12:45 IST
ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ‌ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ‌ ಗಾಯಾಳುಗಳ ಆರೋಗ್ಯ ವಿಚಾರಿಸಿದರು.   

ಯಾದಗಿರಿ: ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮದ ಹೊರವಲಯದ ಕೆರೆ ತಿರುವಿನಲ್ಲಿ ಟ್ರ್ಯಾಕ್ಟರ್‌ ಪಲ್ಟಿಯಾಗಿ ಇಬ್ಬರು ಕೂಲಿಕಾರ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಮಂಗಳವಾರ ಸಂಭವಿಸಿದೆ.

ಪರವೀನ್ ಬೇಗಂ (32) ಹಾಗೂ ಮಾನಮ್ಮ (28) ಮೃತಪಟ್ಟ ಮಹಿಳೆಯರು.

ಬೆಳಿಗ್ಗೆ ಹತ್ತಿ ಬಿಡಿಸಿ ಮನೆಗೆ ಹಿಂತಿರುವ ವೇಳೆ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ADVERTISEMENT

‘ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 15 ಜನರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಕಲಬುರಗಿಯ ಜಿಮ್ಸ್‌ಗೆ ಶಿಫಾರಸು ಮಾಡಲಾಗುವುದು. ಉಳಿದವರಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಟ್ರ್ಯಾಕ್ಟರ್‌ನಲ್ಲಿ ಅಧಿಕ ಪ್ರಯಾಣಿಕರನ್ನು ಕರೆಯೊಯ್ಯುವುದು ಘಟನೆಗೆ ಕಾರಣವಾಗಿದೆ. ಟ್ರ್ಯಾಕ್ಟರ್‌ ಮಾಲಿಕ, ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕ ಪ್ರಯಾಣಿಕರನ್ನು ಕರೆದೊಯ್ಯುವ ಕುರಿತು ಪೊಲೀಸ್‌, ಆರ್‌ಟಿಒ ಅಧಿಕಾರಿಗಳಿಗೆ ನಿಯಂತ್ರಣಕ್ಕೆ ಸೂಚಿಸಲಾಗುವುದು’ ಎಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ತಿಳಿಸಿದರು.

‘ಕೆರೆಯ ತಿರುವಿನಲ್ಲಿ ಟ್ರ್ಯಾಕ್ಟರ್‌ ವೇಗವಾಗಿ ಚಾಲನೆ ಮಾಡಿದ್ದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಪರಾರಿಯಾಗಿದ್ದಾರೆ’ ಎಂದು ವಡಗೇರಾ ಠಾಣೆಯ ಪಿಎಸ್‌ಐ ಸಿದ್ದರಾಯ ಬಳೂರ್ಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.