
ಸುರಪುರ: ‘ನಾಲ್ಕು ಬಾರಿ ಶಾಸಕರಾಗಿ ಜನಸೇವೆಯನ್ನು ಮಾಡಿದ ರಾಜಾ ವೆಂಕಟಪ್ಪನಾಯಕ ಅವರು ಜಾತಿ, ಮತ, ಪಂಥವೆನ್ನದೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದರು. ಸರಳ ಸಜ್ಜನ ರಾಜಕಾರಣಿಯಾಗಿದ್ದ ಅವರು ಜನರ ನೋವು ನಲಿವುಗಳಲ್ಲಿ ಪಾಲ್ಗೊಳುತ್ತಿದ್ದರು. ನೇರ ನಡೆ ನುಡಿಗೆ ಹೆಸರಾಗಿದ್ದರು’ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದನಾಯಕ ಹೇಳಿದರು.
ಇಲ್ಲಿಯ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‍ನಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಏರ್ಪಡಿಸಿದ್ದ ರಾಜಾ ವೆಂಕಟಪ್ಪನಾಯಕರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ‘ಸುರಪುರ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ್ದರು. ನಂತರ ಮಾಜಿ ಸಚಿವ ರಾಜಾ ಮದನಗೋಪಾಲನಾಯಕರ ಜೊತೆಗೆ ಗರುಡಾದ್ರಿ ಕಲಾ ಮಂದಿರದಲ್ಲಿ ಜರುಗಿದ ಯಾದಗಿರಿ ಜಿಲ್ಲಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೂ ಕಾರಣೀಭೂತರಾಗಿದ್ದರು’ ಎಂದು ಸ್ಮರಿಸಿದರು.
ಉದ್ಯಮಿ ಕಿಶೋರಚಂದ ಜೈನ್, ಸಾಹಿತಿಗಳಾದ ಶ್ರೀನಿವಾಸ ಜಾಲವಾದಿ, ನಬಿಲಾಲ್ ಮಕಾನದಾರ, ವಕೀಲರಾದ ಮಲ್ಲಿಕಾರ್ಜುನಯ್ಯ ಹಿರೇಮಠ, ಜಯಲಲಿತಾ ಪಾಟೀಲ ಮಾತನಾಡಿದರು.
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.
ರಾಜಾ ಪಾಮನಾಯಕ, ಬಸವರಾಜ ಜಮದ್ರಖಾನಿ, ರಾಮನಗೌಡ ಸುಬೇದಾರ, ಉದಯಸಿಂಗ, ಗೋವರ್ಧನ ಝಂವ್ಹಾರ, ಪ್ರಕಾಶ ಸಜ್ಜನ್, ಗೋಪಾಲದಾಸ ಲಡ್ಡಾ, ಪ್ರಕಾಶ ಗುತ್ತೇದಾರ್, ಸೋಮನಾಥ ಡೊಣ್ಣಿಗೇರಾ, ಮಂಜುನಾಥ ಗುಳಗಿ, ಎಸ್.ಎನ್. ಪಾಟೀಲ, ಡಾ. ಎಂ.ಎಸ್. ಕನಕರೆಡ್ಡಿ, ಸುಭಾಸ ಬೋಡಾ, ಚಂದ್ರಕಾಂತ ಮಡಿಕಾಂಬೆ, ಶ್ರೀನಿವಾಸ ರಫಗಾರ ಸೇರಿ ಅನೇಕ ಸಾಹಿತಿಗಳು, ಶಿಕ್ಷಕರು, ಕ್ಲಬ್ ಮತ್ತು ಕಸಾಪ ಸದಸ್ಯರು ಹಾಜರಿದ್ದರು.
ದೇವು ಹೆಬ್ಬಾಳ ನಿರೂಪಿಸಿದರು. ಶ್ರೀಶೈಲ ಯಂಕಂಚಿ ಸ್ವಾಗತಿಸಿದರು. ಎಚ್.ವೈ. ರಾಠೋಡ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.