ADVERTISEMENT

ಶಹಾಪುರ: ಒಳಚರಂಡಿ ಕಾಮಗಾರಿಗೆ ಹಸಿರು ನಿಶಾನೆ

ನಗರದ ಬಹು ದಿನದ ಬೇಡಿಕೆ

ಟಿ.ನಾಗೇಂದ್ರ
Published 12 ಜುಲೈ 2025, 6:37 IST
Last Updated 12 ಜುಲೈ 2025, 6:37 IST
ಶಹಾಪುರ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಬಳಿ ಸರ್ಕಾರಿ ಜಾಗದ ಪ್ರದೇಶವನ್ನು ಒಳ ಚರಂಡಿ ಮಂಡಳಿ ನಿಗಮದ ಎಂಜಿನಿಯರ್ ಶಂಕರಗೌಡ ಪಾಟೀಲ ಪರಿಶೀಲಿಸಿದರು
ಶಹಾಪುರ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಬಳಿ ಸರ್ಕಾರಿ ಜಾಗದ ಪ್ರದೇಶವನ್ನು ಒಳ ಚರಂಡಿ ಮಂಡಳಿ ನಿಗಮದ ಎಂಜಿನಿಯರ್ ಶಂಕರಗೌಡ ಪಾಟೀಲ ಪರಿಶೀಲಿಸಿದರು   

ಶಹಾಪುರ: ನಗರದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿದೆ.

ಈಗಾಗಲೇ ನಗರದ ವಿವಿಧ ಕಡೆ ಕಾಮಗಾರಿ ಸ್ಥಳ ಪರಿಶೀಲನೆ ನಡೆದಿದ್ದು, ನಿರೀಕ್ಷೆಯಂತೆ ನಿಗದಿತ ಅವಧಿಯಲ್ಲಿ ಕೆಲಸ ಆರಂಭಗೊಂಡರೆ ಮುಂದಿನ ಮೂರು ವರ್ಷದಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

ಸರ್ಕಾರದ ಮೇಲೆ ಒತ್ತಡ ತಂದು ₹ 292.98 ಕೋಟಿ ಮೊತ್ತದ ಅನುದಾನವನ್ನು ಪಡೆದುಕೊಂಡು ಅಗತ್ಯವಾದ ತಾಂತ್ರಿಕ ಕೆಲಸ ನಿರ್ವಹಿಸಿದೆ. ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿ ಬೆಂಗಳೂರಿನ ಖಾಸಗಿ ಕಂಪನಿಯ ವ್ಯಕ್ತಿಯು ಕಾಮಗಾರಿ ಪಡೆದುಕೊಂಡಿದ್ದಾರೆ.

ADVERTISEMENT

ಕೆಲ ದಿನದಲ್ಲಿ ಕೆಲಸವು ಆರಂಭಗೊಳ್ಳಲಿದೆ. ಅಲ್ಲದೆ ಈಗಾಗಲೇ ₹ 68.87ಕೋಟಿ ಮೊತ್ತದ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮುಕ್ತಾಯದ ಹಂತದಲ್ಲಿ ಇದೆ. ಇವೆರಡು ಕಾಮಗಾರಿ ಮುಕ್ತಾಯವಾದರೆ ನಗರಕ್ಕೆ ಬಹುದೊಡ್ಡ ಯೋಜನೆ ಅನುಷ್ಠಾನಗೊಂಡಂತೆ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾಹಿತಿ ತಿಳಿಸಿದರು.

ನಗರದ 31 ವಾರ್ಡ್‌ಗಳಲ್ಲಿನ 13,500 ಮನೆಗಳಿಗೆ ಒಳಚರಂಡಿಯ ಪೈಪ್‌ಲೈನ್‌ ಜೋಡಣೆ ಕಾರ್ಯ ಮಾಡಲಾಗುತ್ತದೆ. ನಗರ ವ್ಯಾಪ್ತಿಯ 210 ಕಿ.ಮೀ ಒಳಚರಂಡಿಯ ಕೊಳವೆ ಮಾರ್ಗ ನಿರ್ಮಾಣವಾಗಲಿದೆ. ಕೆಲ ದಿನದಲ್ಲಿ ಕೆಲಸ ಆರಂಭಿಸಲಾಗುವುದು. ಕಾಮಗಾರಿ ನಿರ್ಮಾಣದ ಮುಕ್ತಾಯದ ಅವಧಿ 3 ವರ್ಷದ್ದಾಗಿದೆ ಎಂದು ಒಳಚರಂಡಿ ನಿಗಮದ ಎಇಇ ಶಂಕರಗೌಡ ಪಾಟೀಲ ಮಾಹಿತಿ ನೀಡಿದರು.

ತಾಲ್ಲೂಕಿನ ಬೆನಕಹಳ್ಳಿ ಗ್ರಾಮದ ಪ್ರದೇಶಕ್ಕೆ ಈಚೆಗೆ ಒಳಚರಂಡಿ ನಿಗಮದ ಎಇಇ ಶಂಕರಗೌಡ ಪಾಟೀಲ, ಉಪವಿಭಾಗ ಅಧಿಕಾರಿ ಹಂಪಣ್ಣ ಸಜ್ಜನ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್ ಅವರ ನೇತೃತ್ವದ ತಂಡವು ಭೇಟಿ ನೀಡಿ ಸೂಕ್ತ ಸ್ಥಳ ಆಯ್ಕೆ ಬಗ್ಗೆ ಪರಿಶೀಲನೆ ನಡೆಸಿತು.

ನಗರಕ್ಕೆ ಒಳಚರಂಡಿ ಕಾಮಗಾರಿ ನಿರ್ಮಾಣದ ಕನಸು ನನಸಾಗಿದೆ. ದೊಡ್ಡ ಮೊತ್ತದ ಅನುದಾನವನ್ನು ಸರ್ಕಾರ ನೀಡಿದಕ್ಕೆ ಅಭಿನಂದಿಸುವೆ. ಶೀಘ್ರದಲ್ಲಿ ಕಾಮಗಾರಿ ಚಾಲನೆಗೆ ಅಡಿಗಲ್ಲು ಹಾಕಲಾಗುವುದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಬೆಂಗಳೂರಿನ ಖಾಸಗಿ ಕಂಪನಿಗೆ ಕಾಮಗಾರಿ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಈಗಾಗಲೇ ಕಾರ್ಯಾದೇಶ ನೀಡಿದೆ. ಇನ್ನೂ ಒಂದು ತಿಂಗಳಲ್ಲಿ ಕೆಲಸ ಆರಂಭಿಸಲಾಗುವುದು
ಶಂಕರಣಗೌಡ ಪಾಟೀಲ ಎಇಇ ಒಳಚರಂಡಿ ಮಂಡಳಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.