ADVERTISEMENT

ಅಭಿವೃದ್ಧಿ ಕಾಣದ ಕೊಡಾಲ ಗ್ರಾಮ

ಡಾಂಬರು ಕಾಣದ ರಸ್ತೆ; ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 14:13 IST
Last Updated 27 ಜುಲೈ 2020, 14:13 IST
ವಡಗೇರಾ ತಾಲ್ಲೂಕಿನ ಕೊಡಾಲ್ ಗ್ರಾಮದ ರಸ್ತೆ ಡಾಂಬರು ಕಾಣದೆ ಹದಗೆಟ್ಟಿರುವುದು
ವಡಗೇರಾ ತಾಲ್ಲೂಕಿನ ಕೊಡಾಲ್ ಗ್ರಾಮದ ರಸ್ತೆ ಡಾಂಬರು ಕಾಣದೆ ಹದಗೆಟ್ಟಿರುವುದು   

ವಡಗೇರಾ: ಸಮರ್ಪಕವಾದ ರಸ್ತೆ ನಿರ್ಮಿಸದಿರುವುದರಿಂದ ನಾವು ತಗ್ಗು ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಮಾಡುವಂತಾಗಿದೆ. ನಮ್ಮ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಕೊಡಾಲ ಗ್ರಾಮಸ್ಥರು.

ತಾಲ್ಲೂಕಿನ ಕೊಡಾಲ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. 1,500 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ ಎನ್ನುವುದು ಈ ಗ್ರಾಮದ ನಿವಾಸಿಗಳ ಆರೋಪ.

ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮತ್ತು ಕೊಳಚೆ ನೀರು ರಸ್ತೆ ಮೆಲೆ ಹರಿದು ಗ್ರಾಮವನ್ನು ಗಲೀಜು ಮಾಡಿದೆ. ಕೆಲವು ಓಣಿಗಳಲ್ಲಿ ಸಿಸಿ ರಸ್ತೆ ಇಲ್ಲದೆ ನಮಗೆ ಓಡಾಡಲು ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥ ಧರ್ಮಣ್ಣಗೌಡ ಹೇಳಿದರು.

ADVERTISEMENT

ಈ ಊರಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಾಲೆ ಇದೆ. ಸರಿಸುಮಾರು 300 ವಿದ್ಯಾರ್ಥಿಗಳು ಇದ್ದಾರೆ. ಆದರೆ, ಶಿಕ್ಷಕರು ಮಾತ್ರ ಒಬ್ಬರೇ ಇದ್ದಾರೆ. ಇದರಿಂದ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆಗೆ ಕಾಂಪೌಂಡ್‌ ಇಲ್ಲ. ಶಾಲೆಯ ಜಾಗದ ಸಮಸ್ಯೆಯನ್ನು ಬೇಗ ಇತ್ಯರ್ಥ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾಮಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಗ್ರಾಮದಿಂದ ಮುಖ್ಯ ರಸ್ತೆ ನಾಲ್ಕು ಕಿ.ಮೀ ದೂರದಲ್ಲಿದೆ. ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಪಟ್ಟಣಕ್ಕೆ ಶಿಕ್ಷಣ ಕಲಿಯಲು ಹೋಗುವಂತ ಪರಿಸ್ಥಿತಿ ಇದೆ. ಆದ್ದರಿಂದ ರಸ್ತೆಯನ್ನು ಸುಧಾರಣೆ ಮಾಡಿ ಬಸ್ ಸಂಚಾರ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

***

ಶಿಕ್ಷಕರ ಕೊರತೆ ನಮ್ಮ ಊರಿನ ಪ್ರಮುಖ ಸಮಸ್ಯೆಯಾಗಿದೆ. ಒಬ್ಬ ಶಿಕ್ಷಕ ಮಾತ್ರ ಇದ್ದಾರೆ. ಹೆಚ್ಚು ಶಿಕ್ಷಕರನ್ನು ಶೀಘ್ರವೇ ನೇಮಿಸಬೇಕು
ನಬಿಸಾಬ ಕೊಡಾಲ, ಗ್ರಾಮಸ್ಥ

***

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಸುಧಾರಣೆ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
ಸೋಮಣ್ಣ ಜಾಲಹಳ್ಳಿ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.