ADVERTISEMENT

ಯಾದಗಿರಿಯಲ್ಲಿ ಕೇಂದ್ರ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ: ಜಿಲ್ಲೆಗಿಲ್ಲ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:45 IST
Last Updated 2 ಫೆಬ್ರುವರಿ 2026, 2:45 IST
<div class="paragraphs"><p>ಸಂಸತ್‌ನಲ್ಲಿ  ನಿರ್ಮಲಾ ಸೀತಾರಾಮನ್&nbsp;ಬಜೆಟ್ ಭಾಷಣ</p></div>

ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ

   

– ಪಿಟಿಐ ಚಿತ್ರ

ಯಾದಗಿರಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೃಷಿ ಪ್ರಧಾನವಾದ, ನೀರಾವರಿ ಸಮೃದ್ಧಿ, ವಲಸಿಗ ಕಾರ್ಮಿಕರು ಹೆಚ್ಚಾಗಿರುವ ಯಾದಗಿರಿಯ ನಿರೀಕ್ಷೆಗಳು ಸಾಕಾರವಾಗಿಲ್ಲ.

ADVERTISEMENT

92 ವರ್ಷಗಳಷ್ಟು ಹಳೆಯದಾದ ವಿಜಯಪುರದ ಆಲಮಟ್ಟಿ ಮತ್ತು ಯಾದಗಿರಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಸಿಕ್ಕಿಲ್ಲ. ಶೇಂಗಾ ಕ್ಲಸ್ಟರ್ ಅಭಿವೃದ್ಧಿ ಸ್ಥಾಪನೆ, ಹತ್ತಿ ಟೆಕ್ಸ್‌ಟೈಲ್ ಕಾರ್ಖಾನೆ ಸ್ಥಾಪಿಸಿ, ದೊಡ್ಡ ಪ್ರಮಾಣದಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆ ನಿರ್ಮಾಣ, ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ರೈಲು ಫಿಯೆಟ್ ಬೋಗಿ ಕಾರ್ಖಾನೆಯನ್ನು ಮೇಲ್ದರ್ಜೆಗೆ ಏರಿಸುವಂತಹ ಬೇಡಿಕೆಗಳಿದ್ದವು. 

ಕೇಂದ್ರ ಬಜೆಟ್‌ನಲ್ಲಿಲಕ್ಷಾಧಿಪತಿ ದೀದಿ (ಲಖ್‌ಪತಿ ದೀದಿ) ಯೋಜನೆಯ ವಿಸ್ತರಣೆ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ವಸತಿ ಗೃಹಗಳು, ಸಾಲ ಆಧಾರಿತ ಸಬ್ಸಿಡಿ ಕಾರ್ಯಕ್ರಮದ ಮೂಲಕ ಪಶುಸಂಗೋಪನಾ ಉದ್ಯಮಗಳ ಆಧುನೀಕರಣ, ಎಂಎಸ್‌ಎಂಇಗಳಿಗೆ ₹ 10 ಸಾವಿರ ಕೋಟಿ ನಿಧಿ, ಮಹಿಳಾ ಸಬಲೀಕರಣದ ಶೀ ಮಾರ್ಟ್ಸ್‌ ಯೋಜನೆ ಆಶಾದಾಯಕವಾಗಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ಗೆ ಪ್ರತಿಕ್ರಿಯೆಗಳು ಇಂತಿವೆ.

‘ಎಂಎಸ್‌ಎಂಇಗಳಿಗೆ ₹ 10 ಸಾವಿರ ಕೋಟಿ ಕೊಟ್ಟಿರುವುದು ಸಣ್ಣ ಉದ್ಯಮಗಳಿಗೆ ಅನುಕೂಲವಾಗಲಿದೆ. ರೈತರಿಗೆ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಕೊಡುವುದರಿಂದ ರೈತರಿಗೆ ಅಪಾಯ ಕಡಿಮೆಯಾಗಲಿದೆ. ಮಳೆ ಬರುವ ಮುನ್ಸೂಚನೆ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ, ಬೇಡಿಕೆಯ ತಿಳಿವಳಿಕೆ ಮೂಡಿ, ಕೃಷಿ ಕ್ಷೇತ್ರದಲ್ಲಿ ಬದಲಾವಾಣೆಯಾಗಲಿದೆ. ಬಜೆಟ್‌ನಲ್ಲಿ ಘೋಷಿಸಿದ ಕೆಲವು ಯೋಜನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ, ಅನುದಾನ ಕಲ್ಪಿಸುವ ಜವಾಬ್ದಾರಿ ಆಡಳಿತ ಯಂತ್ರದ ಮೇಲಿದೆ’ ಎನ್ನುತ್ತಾರೆ ವ್ಯವಹಾರ ಸಲಹೆಗಾರ ಸಂತೋಷ ಜವಳಿ.

ಸಾರ್ವಜನಿಕ ಶಿಕ್ಷಣ ನಾಶ: ‘ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ವಂಚನೆಯ ನೀಲಿನಕ್ಷೆಯಂತಿದೆ. ಆಧುನೀಕರಣದ ಸೋಗಿನಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರವು ಹಿಂದೆ ಸರಿಯುವ ಮತ್ತು ಆಕ್ರಮಣಕಾರಿ ಖಾಸಗೀಕರಣದ ದುಷ್ಟ ಕಾರ್ಯಸೂಚಿಯನ್ನು ಮರೆಮಾಚುತ್ತಿದೆ’ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ದೂರಿದ್ದಾರೆ.

ನಿರಾಶಾದಾಯಕ ಬಜೆಟ್

‘ಯಾದಗಿರಿ ಜಿಲ್ಲೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ ರಾಜ್ಯಕ್ಕೂ ಯಾವುದೇ ಹೊಸ ಘೋಷಣೆ ಇಲ್ಲದ ನಿರಾಶಾದಾಯಕ ಬಜೆಟ್ ಇದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬೇಸರ ವ್ಯಕ್ತಪಡಿಸಿದರು.

‘ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕ ಆರೋಗ್ಯ ಮೂಲಸೌಕರ್ಯಗಳಿಂದ ಹಿಂದುಳಿದಿದೆ. ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಕೆಕೆಆರ್‌ಡಿಬಿಗೆ ₹ 5000 ಕೋಟಿ ಅನುದಾನ ಕೊಡುತ್ತಿದೆ. ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ₹ 5000 ಕೋಟಿ‌ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎಂದರು. ಯುವಕರಿಗೆ ಉದ್ಯೋಗ ಬಡವರ ಮಹಿಳೆಯರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಯಾವುದೇ ಯೋಜನೆಗಳಿಲ್ಲ. ಕರ್ನಾಟಕಕ್ಕೆ ಎಳ್ಳು ಕಾಳಿನಷ್ಟು ಉಪಯೋಗವಿಲ್ಲ’ ಎಂದು ಹೇಳಿದರು.

ಬಜೆಟ್‌ನಲ್ಲಿ ಬರೀ ಅಂಕಿಸಂಖ್ಯೆಗಳಿದ್ದು ಕರ್ನಾಟಕಕ್ಕೆ ಯಾವುದೇ ಉಪಯೋಗವಿಲ್ಲ. ರಾಜ್ಯದ ಕೈಗಾರಿಕೆ ನೀರಾವರಿ ಕೃಷಿ ‌ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಆದ್ಯತೆ ಕೊಡದ ಒಣ ಅಂಕಿಅಂಶಗಳನ್ನು ಮಂಡಿಸಲಾಗಿದೆ. ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ
–ಬಸರೆಡ್ಡಿ ಅನಪುರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಪರ ಹಾಗೂ ದೂರದೃಷ್ಟಿ ಹೊಂದಿರುವ ಬಜೆಟ್‌ ಇದು. ಬೆಂಗಳೂರಿಗೆ ಹೈಸ್ಪೀಡ್ ರೈಲ್ವೆ ಕಾರಿಡಾರ್ ಸಿಕ್ಕಿದೆ. ಕೆಲ ಅಪರೂಪದ ಕಾಯಿಲೆ 17 ಕ್ಯಾನ್ಸರ್‌ ಔಷಧಿ ಸೇರಿ ಹಲವು ವಸ್ತುಗಳ ಬೆಲೆ ಇಳಿಸಿದ್ದು ಜನರಿಗೆ ವರವಾಗಲಿದೆ
–ಬಸವರಾಜ ವಿಭೂತಿಹಳ್ಳಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ 
ಕೇಂದ್ರ ಸರ್ಕಾರದ ಬಜೆಟ್ ಅಭಿವೃದ್ಧಿ ವಿರೋಧಿಯಾಗಿದ್ದು ಬಡವರ ಪರವಾದ ಪೂರಕ ಯೋಜನೆಗಳಿಲ್ಲ. ಆರ್ಥಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವಂತಹ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ
–ಸ್ಯಾಮ್ಸನ್ ಮಾಳಿಕೇರಿ ಕಾಂಗ್ರೆಸ್ ವಕ್ತಾರ
ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಳವಾಗುತ್ತಿದ್ದು ಭೌತಿಕ ಬೆಳವಣಿಗೆ ಅಷ್ಟೆ ಅಲ್ಲದೆ ದೇಶದ ಗುಣಾತ್ಮಕ ಆರ್ಥಿಕ ಸಾಮಾಜಿಕ ಬೆಳವಣಿಗೆಯನ್ನೂ ತೋರಿಸುತ್ತಿದೆ
–ಹಣಮಂತ ಇಟಗಿ ಬಿಜೆಪಿ ಜಿಲ್ಲಾ ವಕ್ತಾರ
ಕೇಂದ್ರದ ಬಜೆಟ್‌ನಲ್ಲಿ ಸರ್ವರಿಗೂ ಸಮಬಾಳು ಸಮಪಾಲಿದೆ. ಶಿಕ್ಷಣ ಆರೋಗ್ಯ ಕ್ರೀಡೆ ವ್ಯಾಪಾರ ಕೃಷಿ ಸಣ್ಣ ಕೈಗಾರಿಕೆ ಸೇರಿದಂತೆ ದೇಶದ ಸಮಸ್ತ ಜನತೆಗೆ ಅನುಕೂಲವಾಗುವ ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಮಂಡನೆಯಾಗಿದೆ
–ಮಹೇಶರೆಡ್ಡಿ ಮುದ್ನಾಳ ಬಿಜೆಪಿ ಮುಖಂಡ
ಕೇಂದ್ರ ಬಜೆಟ್ ಜನಸಾಮಾನ್ಯರ ಆಶೋತ್ತರ ರೈತರು ಯುವಕರು ಹಾಗೂ ಮಹಿಳೆಯರ ಸಬಲೀಕರಣ ಉದ್ಯಮಿಗಳ ಗುರಿಗಳನ್ನು ಒಗ್ಗೂಡಿಸಿದ ಸಮಗ್ರ ಅಭಿವೃದ್ಧಿಯ ಬಜೆಟ್ ಆಗಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಶಕ್ತಿ ನೀಡಲಿದೆ
–ಶರಣಭೂಪಾಲ ರೆಡ್ಡಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ
ಭಾಷಣಕ್ಕಿಂತ ಕಾರ್ಯ ಜನಪ್ರಿಯತೆಗಿಂತ ಸುಧಾರಣೆ ತತ್ವದೊಂದಿಗೆ ರೂಪುಗೊಂಡ ಬಜೆಟ್‌ನಲ್ಲಿ ರೈತರು ಯುವಕರು ಮಹಿಳೆಯರು ಎಂಎಸ್‌ಎಂಇ ಮಧ್ಯಮ ವರ್ಗ ಮತ್ತು ವಂಚಿತರಿಗೆ ಅಭಿವೃದ್ಧಿಯ ಲಾಭಗಳು ತಲುಪುವಂಥ ಯೋಜನೆಗಳಿವೆ
–ಶ್ರೀಧರ ಸಾಹುಕಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.