ADVERTISEMENT

ಅನವಶ್ಯಕ ಓಡಾಟ; ವಾಹನ ಜಪ್ತಿ

ನಗರದ ಪ್ರಮುಖ ವೃತ್ತಗಳ ರಸ್ತೆ ಒನ್‌ ವೇ ಆಗಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 15:22 IST
Last Updated 11 ಏಪ್ರಿಲ್ 2020, 15:22 IST
ಯಾದಗಿರಿಯ ಶಾಸ್ತ್ರಿ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಡಿವೈಎಸ್‌ಪಿ ಹಾಗೂ ನಗರ ಠಾಣೆ ಪಿಎಸ್‌ಐ ನೇತೃತ್ವದಲ್ಲಿ ಬೈಕ್‌ಗಳನ್ನು ಜಪ್ತಿ ಮಾಡಲಾಯಿತು
ಯಾದಗಿರಿಯ ಶಾಸ್ತ್ರಿ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಡಿವೈಎಸ್‌ಪಿ ಹಾಗೂ ನಗರ ಠಾಣೆ ಪಿಎಸ್‌ಐ ನೇತೃತ್ವದಲ್ಲಿ ಬೈಕ್‌ಗಳನ್ನು ಜಪ್ತಿ ಮಾಡಲಾಯಿತು   

ಯಾದಗಿರಿ: ಲಾಕ್‌ಡೌನ್‌ ಜಾರಿ ಇದ್ದರೂ ಬೈಕ್‌ ಸವಾರರ ಓಡಾಟ ಕಡಿಮೆ ಆಗಿಲ್ಲ. ಇದರಿಂದ ನಗರದ ಪ್ರಮುಖ ವೃತ್ತಗಳ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿಒನ್‌ ವೇ ಮಾಡಿ ಅನಾವಶ್ಯಕವಾಗಿ ತಿರುಗಾಡುವ ಬೈಕ್‌ ಸವಾರರ ವಾಹನ ಜಪ್ತಿ ಮಾಡಿ ತಿರುಗಾಟಕ್ಕೆ ಬ್ರೇಕ್‌ ಹಾಕಿದ್ದಾರೆ.

ಬೆಳಿಗ್ಗೆ 4 ಗಂಟೆಗೆಯಿಂದ ಸಂಜೆ 4 ಗಂಟೆಗೆ ವರೆಗೆ ತರಕಾರಿ, ದಿನಸಿ ಅಂಗಡಿ ತೆಗೆದಿದ್ದು, ಆ ನಂತರ ಓಡಾಟ ನಡೆಸುವವರ ಬೈಕ್‌ ಜಪ್ತಿ ಮಾಡಿ ಸವಾರರಿಗೆ ಶಾಕ್‌ ನೀಡುತ್ತಿದ್ದಾರೆ ಪೊಲೀಸರು.

ಪದವಿ ಮಹಾವಿದ್ಯಾಲಯ, ಹೊಸಳ್ಳಿ ಕ್ರಾಸ್‌, ಶಾಸ್ತ್ರಿ, ಸುಭಾಷ ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸರನ್ನು ನಿಯೋಜನೆ ಮಾಡಿ ಲಾಕ್‌ಡೌನ್‌ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ADVERTISEMENT

ಯುವಕರು ಹೆಚ್ಚಾಗಿ ಬೈಕ್‌ಗಳ ಮೇಲೆ ತಿರುಗಾಡುತ್ತಿರುವುದರಿಂದ ಬೈಕ್‌ ಜಪ್ತಿಯೊಂದೇ ಮಾರ್ಗವೆಂದೆ ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಕೊರೊನಾ ಸೋಂಕು ಎಲ್ಲಿಂದ ಹರಡುತ್ತಿದೆ ಎನ್ನುವುದು ತಿಳಿದು ಬರುವುದಿಲ್ಲ. ಹೀಗಾಗಿ ಮನೆಯಲ್ಲಿ ಸುರಕ್ಷಿತವಾಗಿ ಇರಲು ಸರ್ಕಾರ ಸೂಚಿಸಿದೆ. ಆದರೂ ಇದನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಹೀಗಾಗಿ ಎಚ್ಚರಿಕೆಯ ಜೊತೆಗೆ ಬೈಕ್‌ ಜಪ್ತಿ ಮಾಡುತ್ತಿದ್ದೇವೆ ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ.

ಶನಿವಾರ ಬೆಳಿಗ್ಗೆ ಶಾಸ್ತ್ರಿ ವೃತ್ತದಲ್ಲಿ ಕಾರ್ಯಾಚರಣೆಗೆ ಇಳಿದ ಡಿವೈಎಸ್‌ಪಿ ಯು.ಶರಣಪ್ಪ ಹಾಗೂ ನಗರ ಠಾಣೆ ಪಿಎಸ್‌ಐ ಸೌಮ್ಯಾ ಹಲವಾರು ಯುವಕರ ಬೈಕ್‌ ಜಪ್ತಿ ಮಾಡಿ ಅನಾವಶ್ಯವಾಗಿ ಓಡಾಡದಂತೆ ಎಚ್ಚರಿಕೆ ನೀಡಿದರು.

‘ಶಾಸ್ತ್ರಿ ವೃತ್ತದಲ್ಲಿ 45 ಬೈಕ್‌ಗಳನ್ನು ಶನಿವಾರ ಜಪ್ತಿ ಮಾಡಲಾಯಿತು. ಆಸ್ಪತ್ರೆ, ಅವಶ್ಯ ಸಾಮಗ್ರಿ ಖರೀದಿಸುವವರಿಗೆ ಬಿಡಲಾಗಿದೆ. ನಗರದ ಬೇರೆ ಬೇರೆ ವೃತ್ತಗಳಲ್ಲಿಯೂ ಜಪ್ತಿ ಕಾರ್ಯಾಚರಣೆ ಮುಂದುವರೆದಿದೆ. ಸಾರ್ವಜನಿಕರು ಸುಮ್ಮನೆ ಓಡಾಡದೇ ಮನೆಯಲ್ಲಿ ಇರಬೇಕು ಎಂದು ನಗರ ಠಾಣೆ ಪಿಎಸ್‌ಐ ಸೌಮ್ಯಾ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಲಾಕ್‌ಡೌನ್‌ ಮಾಡಿರುವುದು ಯಾರೂಮನೆಯಿಂದ ಅನಾವಶ್ಯವಾಗಿ ಹೊರಗಡೆ ಬಾರಬಾರದು ಎನ್ನುವ ಕಾರಣಕ್ಕಾಗಿ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು
-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ

***

ದಿನಸಿ ವಸ್ತುಗಳನ್ನು ಒಮ್ಮೆಲೆ ಖರೀದಿ ಮಾಡಿ. ಅನಗತ್ಯವಾಗಿ ರಸ್ತೆಗೆ ಬಂದರೆ ಪೊಲೀಸರು ವಾಹನ ಜಪ್ತಿ ಮಾಡುತ್ತಾರೆ. ಜಪ್ತಿ ಮಾಡುವುದು ಪೊಲೀಸರ ಕೆಲಸವಲ್ಲ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಜಪ್ತಿ ಮಾಡುತ್ತಾರೆ
-ಋಷಿಕೇಶ ಭಗವಾನ್‌ ಸೋನವಣೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಅನಾವಶ್ಯವಾಗಿ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳುವುದು ಸರಿ. ಆದರೆ, ಗುರುತಿನ ಚೀಟಿ ತೋರಿಸಿದರೂ ನಮ್ಮ ಕೆಲಸಕ್ಕೆ ಪೊಲೀಸರು ಬಿಡುತ್ತಿಲ್ಲ. ಮನೆಯಿಂದ ಯಾರೂ ಹೊರಬರದಂತೆ ಮಾಡಿ. ಆಗ ಸರಿಯಾಗುತ್ತದೆ
-ದೇವೇಂದ್ರಪ್ಪ ಕಪೂರಿ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.