ಸುರಪುರ: ಯುರಿಯಾ ಖರೀದಿಸಲು ರೈತರು ಪ್ರತಿನಿತ್ಯ ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯ ನಿತ್ಯ ಕಂಡು ಬರುತ್ತಿದೆ.
ಯುರಿಯಾ ಈ ಅಂಗಡಿಯಲ್ಲಿ ದೊರಕುತ್ತಿದೆ ಎಂಬ ವದಂತಿ ಹರಡುತ್ತಿದ್ದಂತೆ ರೈತರು ತಂಡೋಪತಂಡವಾಗಿ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ಒಂದು ಅಂಗಡಿಯಲ್ಲಿ ಒಂದು ಲೋಡ್ ಯುರಿಯಾ ದೊರೆತರೆ ದೊಡ್ಡದು. ಹೀಗಾಗಿ ರೈತರ ನೂಕುನುಗ್ಗಲು ಉಂಟಾಗುತ್ತಿದೆ. ರೈತರ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.
ಬುಧವಾರ ನಗರದ ವೇಣುಗೋಪಾಲಸ್ವಾಮಿ ರಸ್ತೆಯ ಅಂಗಡಿಯೊಂದರ ಮುಂದೆ ರೈತರ ಗುಂಪು ಹೆಚ್ಚಾಗಿತ್ತು. ಗೊಬ್ಬರ ನನಗೆ ಬೇಕು ತನಗೆ ಬೇಕು ಎಂದು ಗಲಾಟೆ ಆರಂಭವಾಯಿತು. ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ರೈತನೊಬ್ಬನಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.
ಹತ್ತಿ, ತೊಗರಿ, ಶೇಂಗಾ, ಹೆಸರು, ಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳೆದು ನಿಂತಿದ್ದು, ಯುರಿಯಾ ಗೊಬ್ಬರ ಹಾಕಬೇಕಾಗಿದೆ. ಹಾಕದಿದ್ದರೆ ಇಳುವರಿ ಕುಂಠಿತವಾಗುತ್ತದೆ ಎನ್ನುತ್ತಾರೆ ರೈತರು.
ಒಬ್ಬ ರೈತನಿಗೆ ಎರಡು ಚೀಲ ಮಾತ್ರ ಯುರಿಯಾ ಕೊಡಲಾಗುತ್ತಿದೆ. ಬೆಲೆಯೂ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸುತ್ತಾರೆ.
ರೈತರ ಸಂಖ್ಯೆ ಹೆಚ್ಚಿರುವ ಅಂಗಡಿಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ರಸಗೊಬ್ಬರಗಳ ಬದಲಿಗೆ ನ್ಯಾನೋ ಗೊಬ್ಬರಗಳನ್ನು ಬಳಿಸಿ. ಇದರಿಂದ ಬೆಲೆಯೂ ಕಡಿಮೆ, ಇಳುವರಿ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಹೇಳುವ ತಿಳಿವಳಿಕೆಯನ್ನು ರೈತರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.