ವಡಗೇರಾ: ‘ಕಲ್ಯಾಣ ಕರ್ನಾಟಕ ಭಾಗದ 16 ತಾಲ್ಲೂಕುಗಳಲ್ಲಿ ಪ್ರಜಾಸೌಧ ಕಾಮಗಾರಿ ಆರಂಭವಾಗಿದ್ದು, ಜಿಲ್ಲೆಯಲ್ಲಿ 4 ಪ್ರಜಾಸೌಧಗಳ ಕಾಮಗಾರಿಗೆ ಅಡಿಗಲ್ಲು ಹಾಕಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಪಟ್ಟಣದ ಸರ್ವೆ ನಂಬರ್ 581ರಲ್ಲಿ ಸುಮಾರು ₹8.60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪ್ರಜಾಸೌಧ ಕಾಮಗಾರಿಗೆ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ಅದಕ್ಕಾಗಿಯೇ ಸರ್ಕಾರ ಪಂಚ ಗ್ಯಾರಂಟಿಗಳನ್ನು ನಿಲ್ಲಿಸದೆ ಮುಂದುವರಿಸಿದ್ದು, ಜನರಿಗೆ ಕೊಟ್ಟ ಭಾಷೆಯಂತೆ ನಡೆದುಕೊಂಡಿದ್ದೇವೆ’ ಎಂದರು.
‘ಕಲ್ಯಾಣ ಕರ್ನಾಟದ ಅಭಿವೃದ್ಧಿಗೆ ₹5,000 ಕೋಟಿ ಅನುದಾನದ ಜತೆಗೆ ಪ್ರತಿ ಶಾಸಕರಿಗೆ ₹15 ಕೋಟಿ ಮತ್ತು ವಿಶೇಷ ಅನುದಾನದಡಿ ₹50 ಕೋಟಿ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದರು.
ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ,‘ಜನರ ಅಲೆದಾಟ ತಪ್ಪಿಸಲು, ಒಂದೇ ಸೂರಿನಡಿ ಜನರಿಗೆ ಕೆಲಸಗಳು ಸುಗಮವಾಗಲಿ ಎಂದು ಪ್ರಜಾಸೌಧ ನಿರ್ಮಿಸಲಾಗುತ್ತಿದೆ’ ಎಂದರು.
‘ಪಟ್ಟಣದ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 50 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದ್ದು. ಆಸ್ಪತ್ರೆ ಪಕ್ಕದಲ್ಲಿ ನೂತನ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಉಪ ನೋಂದಣಿ, ಬಿಇಒ ಹಾಗೂ ಇನ್ನಿತರಕಚೇರಿಗಳು ಆರಂಭವಾಗಲಿದೆ’ ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿ,‘ಶರಣಬಸಪ್ಪ ದರ್ಶನಾಪುರ ಅವರು ಜಿಲ್ಲೆಗೆ ಸಚಿವರಾಗಿ ಸಿಕ್ಕಿರುವುದು ಪುಣ್ಯ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಕರ್ನಾಟಕ ಗೃಹ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ ಭಂಡಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ್, ತಹಶೀಲ್ದಾರ್ ಮಂಗಳಾ.ಎಂ, ಇಒ ಮಲ್ಲಿಕಾರ್ಜುನ ಸಂಗ್ವಾರ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸುಗೌಡ ಬಿಳ್ಹಾರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ ಏಕಬೊಂಟೆ ಇದ್ದರು.
ವಡಗೇರಾದಲ್ಲಿ ಶೀಘ್ರದಲ್ಲಿಯೇ ಉಪ ನೋಂದಣಿ ಕಚೇರಿ ಪ್ರಾರಂಭಗೊಳ್ಳಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕಾಲೇಜೂ ಆರಂಭವಾಗುತ್ತದೆಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.