ADVERTISEMENT

ಯಾದಗಿರಿ | ‘ಮಹಾತ್ಮರು ಒಂದು ಜಾತಿಗೆ ಸೀಮಿತವಲ್ಲ’

ನಾಗರಬಂಡ ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಅನಾವರಣ; ಶಾಸಕ ಕಂದಕೂರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 5:13 IST
Last Updated 21 ಅಕ್ಟೋಬರ್ 2025, 5:13 IST
ಯಾದಗಿರಿ ತಾಲ್ಲೂಕಿನ ನಾಗರಬಂಡ ಗ್ರಾಮದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮೀಜಿ ಸೇರಿ ಹಲವರು ಪಾಲ್ಗೊಂಡಿದ್ದರು
ಯಾದಗಿರಿ ತಾಲ್ಲೂಕಿನ ನಾಗರಬಂಡ ಗ್ರಾಮದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮೀಜಿ ಸೇರಿ ಹಲವರು ಪಾಲ್ಗೊಂಡಿದ್ದರು   

ಯಾದಗಿರಿ: ‘ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅವರು ಎಲ್ಲಾ ಜನಾಂಗಕ್ಕೂ ಆದರ್ಶವಾಗಿದ್ದಾರೆ’ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ತಾಲ್ಲೂಕಿನ ನಾಗರಬಂಡ ಗ್ರಾಮದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಮಹಾತ್ಮರ ಮೂರ್ತಿಗಳ ಪ್ರತಿಷ್ಠಾಪನೆಯು ಎಲ್ಲೆಡೆ ನಡೆಯುತ್ತಿದೆ. ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಅವರ ತತ್ವಾದರ್ಶಗಳನ್ನು ಪಾಲನೆ ಮಾಡುವುದು ಇಂದಿನ ಅಗತ್ಯವಿದೆ. ದೇವರ ಹೆಸರಲ್ಲಿ ದುಂದುವೆಚ್ಚ ಮಾಡಿ ಸಾಲಗಾರರಾಗದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವತ್ತ ಗಮನ ಹರಿಸಬೇಕು’ ಎಂದರು.

ADVERTISEMENT

‘ಹೊಟ್ಟೆಪಾಡಿಗಾಗಿ ಬೆಂಗಳೂರು, ಹೈದರಾಬಾದ್, ಮುಂಬೈನಂತಹ ಮಹಾನಗರಗಳಿಗೆ ಹೋಗಿ ದುಡಿಯುವ ಶ್ರಮಿಕರು ಸಹ ದೇವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವುದು ಬೇಸರದ ಸಂಗತಿ. ದೇವರ ಆರಾಧನೆ ಮಾಡಿ. ಆದರೆ, ಸಾಲ ಶೂಲ ಮಾಡಿಕೊಂಡು ಕುಟುಂಬವನ್ನು ಆರ್ಥಿಕವಾಗಿ ಹಾಳು ಮಾಡಿಕೊಳ್ಳಬಾರದು. ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಯುವಕರು ಜೀವನ ರೂಪಿಸಿಕೊಳ್ಳಬೇಕಾದ ವಯಸ್ಸಲ್ಲಿ ದುಶ್ಚಟಗಳಿಗೆ ಒಳಗಾಗಿ, ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.

ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮೀಜಿ ಮಾತನಾಡಿ, ‘ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ಶ್ರೇಷ್ಠ ಗುರು ವಾಲ್ಮೀಕಿ ಮಹರ್ಷಿ ಆಗಿದ್ದಾರೆ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಾತಿನಲ್ಲಿ ಬದಲಾವಣೆ ಆಗದೆ ಕೃತಿಯಲ್ಲೂ ಬದಲಾಗಬೇಕು. ಶಿಕ್ಷಣ ಪಡೆದು ವಿದ್ಯಾವಂತರಾಗಿ ವಿಚಾರಶೀಲರಾಗಬೇಕು. ಸರ್ವ ಸಮಾಜದ ಬಂಧುಗಳ ಜತೆಗೆ ಸಹಬಾಳ್ವೆ ಜೀವನ ಸಾಗಿಸಿ, ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಯಾರನ್ನು ವೈಯಕ್ತಿಕವಾಗಿ ವಿರೋಧಿಸಬಾರದು’ ಎಂದರು.

ಪತ್ರಕರ್ತ ಎಸ್.ಎಸ್ ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಹಣಮೇಗೌಡ ಬೀರನಕಲ್, ಸುದರ್ಶನ ನಾಯಕ ವರ್ಕನಳ್ಳಿ, ಮರೆಪ್ಪ ನಾಯಕ ಮಗ್ದಂಪುರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಭೀಮರಾಯ ಠಾಣಗುಂದಿ, ರವಿಗೌಡ ಕಾರಡ್ಡಿ ಮಲ್ಹಾರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಮಹಿಪಾಲರಡ್ಡಿ ಮಲ್ಹಾರ, ಸಿದ್ದಲಿಂಗರೆಡ್ಡಿಗೌಡ, ಸುಭಾಷ ನಾಯಕ ಹೆಡಗಿಮದ್ರಾ, ಮಲ್ಲಮ್ಮ ಕೋಮಾರ, ಪಿಎಸ್ಐ ಭೀಮರಾಯ ನಾಯಕ, ಭೀಮರಾಯ ಹೊಸಮನಿ, ದೇವಿಂದ್ರ ನಾಯಕ ಕೂಡ್ಲೂರು, ಬಸರೆಡ್ಡಿಗೌಡ ಹೆಗ್ಗಣಗೇರಾ, ರವೀಂದ್ರ ಮಲ್ಲೋರ, ಲಕ್ಷ್ಮಣ ನಾಯಕ ಕೂಡ್ಲೂರು, ಮಲ್ಲೇಶ ನಾಯಕ, ಸಾಹೇಬಗೌಡ ಗೌಡಗೇರಾ, ಆಂಜನೇಯ ಮಲ್ಹಾರ ಉಪಸ್ಥಿತರಿದ್ದರು.

ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ನಮಗೆಲ್ಲ ಸ್ಪೂರ್ತಿಯಾಗಿದ್ದು ಅವರ ಮಾರ್ಗದರ್ಶನದಲ್ಲಿ ನಡೆಯೋಣ. ಸೈದಾಪುರದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಬದ್ಧನಾಗಿರುವೆ. ಸಮಾಜದ ಮುಖಂಡರು ನಿವೇಶನ ಕಲ್ಪಿಸಿಕೊಡಬೇಕು

-ಶರಣಗೌಡ ಕಂದಕೂರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.