ADVERTISEMENT

ಶಹಾಪುರ: ವಾಲ್ಯೂಮೆಟ್ರಿಕ್ ಗೇಟ್; ಕಳಪೆ ಸಾಮಗ್ರಿ

ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸುತ್ತಿಲ್ಲ: ರೈತರ ಆರೋಪ

ಟಿ.ನಾಗೇಂದ್ರ
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಬಳಿ ಸಿದ್ಧಪಡಿಸುತ್ತಿರುವ ವಾಲ್ಯೂಮೆಟ್ರಿಕ್‌ ಗೇಟ್ ಕಾಮಗಾರಿ
ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಬಳಿ ಸಿದ್ಧಪಡಿಸುತ್ತಿರುವ ವಾಲ್ಯೂಮೆಟ್ರಿಕ್‌ ಗೇಟ್ ಕಾಮಗಾರಿ   

ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ನಾರಾಯಣಪುರ ಹಾಗೂ ಭೀಮರಾಯನಗುಡಿ ವ್ಯಾಪ್ತಿಯ ಸುಮಾರು ₹1,035 ಕೋಟಿ ವೆಚ್ಚದಲ್ಲಿ ಕಾಲುವೆಗಳಿಗೆ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಆದರೆ ಅಂದಾಜು ಪಟ್ಟಿಯಂತೆ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಲಿದೆ.

ಮುಖ್ಯ ಕಾಲುವೆ, ಶಾಖಾ ಕಾಲುವೆ, ವಿತರಣಾ ಕಾಲುವೆ, ಲ್ಯಾಟರಲ್‌ಗಳಿಗೆ ಗೇಟ್ ಅಳವಡಿಸಲು ಆಸ್ಟ್ರೇಲಿಯಾ ಮೂಲದ ಮೇಧಾ ಹಾಗೂ ಸರ್ವೋ ಡ್ರೈವ್ ಕಂಪನಿ ಟೆಂಡರ್ ಪಡೆದುಕೊಂಡಿದೆ. ಗೇಟ್ ಸಿದ್ಧಪಡಿಸುವ ಕಚ್ಚಾ ಸಾಮಗ್ರಿ ಗುಣಮಟ್ಟದಿಂದ ಕೂಡಿಲ್ಲ. ಅಂದಾಜುಪಟ್ಟಿಯಂತೆ ಕೆಲಸ ನಿರ್ವಹಿಸುತ್ತಿಲ್ಲ. ಉಪ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡಿದ್ದಾರೆ. ಗೇಟ್ ಅಳವಡಿಕೆಯಲ್ಲಿಯೂ ಸಾಕಷ್ಟು ಲೋಪದೋಷ ಕಂಡು ಬಂದಿವೆ. ಇದರ ಬಗ್ಗೆ ಗೇಟ್ ಸಿದ್ಧಪಡಿಸುವ ಸ್ಥಳಕ್ಕೆ ತೆರಳಿ ನೋಡಿದಾಗ ಕಂಡು ಬಂದಿತು ಎಂದು ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸಿದರು.

ಅಲ್ಲದೆ ಎಡದಂಡೆ ಮುಖ್ಯ ಕಾಲುವೆ ಸೇರಿದಂತೆ ಸುಮಾರು 4,000ಕ್ಕೂ ಹೆಚ್ಚು ಗಣಕೀಕೃತ ಗೇಟ್‌ಗಳನ್ನು ಅಳವಡಿಸಿ ನಿಯಂತ್ರಣ ಕೊಠಡಿಯಿಂದ ನಿರ್ವಹಣೆ ಮಾಡುವ ವ್ಯವಸ್ಥೆ ಇದೆ. ಆದರೆ ಇದರ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಅಲ್ಲದೆ ಕಾಲುವೆ ಜಾಲದ ವ್ಯಾಪ್ತಿಯ ರೈತರಿಗೆ ತರಬೇತಿ ನೀಡಿಲ್ಲ. ತರಾತುರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಹೊರಟಿರುವುದು ರೈತರಿಗೆ ಅನುಮಾನ ಹೆಚ್ಚಿಸಿದೆ ಎಂದು ಅವರು ತಿಳಿಸಿದರು.

ADVERTISEMENT

ಕಾಮಗಾರಿ ಅನುಷ್ಠಾನದ ಬಗ್ಗೆ ನಿಗಮದ ಕಚೇರಿಗೆ ತೆರಳಿ ಎಂಜಿನಿಯರ್ ಅವರನ್ನು ವಿಚಾರಿಸಿದರೆ ನಾಳೆ ಬಾ ಎಂಬ ಉತ್ತರ ನೀಡುತ್ತಾರೆ. ದಾಖಲೆ ನೀಡುವಂತೆ ಮನವಿ ಸಲ್ಲಿಸಿದರೆ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ನಾರಾಯಣಪುರ ಕಚೇರಿಗೆ ತೆರಳಿ ಪಡೆಯುವಂತೆ ರೈತರಿಗೆ ಸತಾಯಿಸುತ್ತಾರೆ. ರೈತರ ಹೆಸರಿನಲ್ಲಿ ಇಷ್ಟೊಂದು ಹಣ ವೆಚ್ಚ ಮಾಡುತ್ತಿರುವಾಗ ಅನುದಾನ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.