ADVERTISEMENT

ಯಾದಗಿರಿ | ಗುಂಡಿಮಯ ರಸ್ತೆ, ಸಂಚಾರ ಅಯೋಮಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:41 IST
Last Updated 15 ಅಕ್ಟೋಬರ್ 2025, 7:41 IST
<div class="paragraphs"><p>ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ– ಮೈಲಾಪುರ ನಡುವಿನ ರಸ್ತೆಯ ದುಸ್ಥಿತಿ</p></div>

ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ– ಮೈಲಾಪುರ ನಡುವಿನ ರಸ್ತೆಯ ದುಸ್ಥಿತಿ

   

ಯಾದಗಿರಿ: ರಸ್ತೆಯ ತುಂಬಾ ಗುಂಡಿಗಳು, ಮಳೆಯಾದರೆ ಕೆಸರಿನ ಗದ್ದೆಯಂತೆ ಬದಲಾವಣೆ, ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಮತ್ತು ಅತಿ ಭಾರದ ಸರಕು ವಾಹನಗಳ ಓಡಾಟದಿಂದ ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು, ಮುಖಗವಸು ಧರಿಸಿಕೊಂಡು ಓಡಾಡುವ ಬೈಕ್ ಸವಾರರು...

ಇವು ಜಿಲ್ಲೆಯ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು. ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸತತ ಮಳೆ, ಅವೈಜ್ಞಾನಿಕ ಕಾಮಗಾರಿ, ಸಕಾಲಕ್ಕೆ ಕೈಗೊಳ್ಳದ ದುರಸ್ತಿಯಿಂದಾಗಿ ರಸ್ತೆಗಳ ಗುಂಡಿಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ.

ADVERTISEMENT

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾಮುಖ್ಯ ಹಾಗೂ ಗ್ರಾಮೀಣ ರಸ್ತೆಗಳು ವಾಣಿಜ್ಯ ಚಟುವಟಿಕೆ ಮತ್ತು ಜನರ ಸಂ‍ಪರ್ಕಕ್ಕೆ ಜೀವಾಳ. ಆದರೆ, ಕೆಲವು ಕಡೆಗಳಲ್ಲಿ ಮೊಳಕಾಲುದ್ದ ಗುಂಡಿಗಳಿದ್ದರೆ, ಮತ್ತೆ ಕೆಲವೆಡೆ ಇಡೀ ರಸ್ತೆಯೇ ಕೊರಕಲು ಬಿದ್ದಿದೆ. ಮಳೆಯಾದರೆ ರಸ್ತೆಯಾವುದು, ತಗ್ಗು ಯಾವುದು ಎಂಬುದು ಗೊತ್ತಾಗದೆ ಬೈಕ್ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸಾಕಷ್ಟು ನಿದರ್ಶನಗಳಿವೆ.

ಕೊರಕಲು ಬಿದ್ದ ರಸ್ತೆಗಳ ಅಕ್ಕಪಕ್ಕದಲ್ಲಿ ಕುರುಚಲು ಗಿಡಗಳು, ಜಾಲಿ ಗಿಡಗಳು ಬೆಳೆದಿವೆ. ಎದುರಿಗೆ ವಾಹನಗಳು ಬಂದರೆ ಬೈಕ್ ಸವಾರ, ಎತ್ತಿನ ಬಂಡಿಯ ರೈತರು ಮುಳ್ಳು ಕಂಟಿಯಲ್ಲಿ ನಿಂತುಕೊಂಡು ದಾರಿ ಮಾಡಿಕೊಡಬೇಕಿದೆ. ವರ್ಷಗಳಿಂದ ಗುಂಡಿಬಿದ್ದು ಶಾಶ್ವತ ಪರಿಹಾರ ಕಾಣದ ರಸ್ತೆಗಳಿಗೆ ಸತತ ಮಳೆ ಹಾಗೂ ಭೀಮಾ ನದಿಯ ನೆರೆಯು ಇನ್ನಷ್ಟು ಹಾನಿಗೊಳಿಸಿದೆ. 

ವಡಗೇರಾ– ಬೆಂಡೆಬೆಂಬಳಿ, ಹತ್ತಿಕುಣಿ, ಶಹಾಪುರ ರಸ್ತೆ, ನಾಯ್ಕಲ್– ಕುರಕುಂದಾ– ಖಾನಪುರ, ವಡಗೇರಾ– ಕುರಕುಂದಾ, ಹೊಸಹಳ್ಳಿ, ವರ್ಕನಳ್ಳಿ ಸೇರಿದಂತೆ ಹಲವೆಡೆಯ ರಸ್ತೆಗಳು ಗುಂಡಿಗಳಿಂದ ಮುಕ್ತಿ ಪಡೆಯಲು ಕಾದಿವೆ.  

‘ಸೇಡಂ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ಮಾಡಿದರೂ ದುರಸ್ತಿ ಮಾಡಲಿಲ್ಲ. ಕೆಲವಡೆ ತಾತ್ಕಾಲಿಕವಾಗಿ ಮುರುಮ್ ಹಾಕಿ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಗುಂಡಿಗಳಿಂದಾಗಿ ವಾಹನ ಬಾಳಿಕೆ ಅವಧಿ ಕಡಿಮೆ ಆಗುತ್ತಿದೆ. ಪದೇ ಪದೇ ದುರಸ್ತಿಗೂ ಬರುತ್ತಿವೆ. ತಗ್ಗಿಗೆ ಬಿದ್ದು ಟೈರ್‌ಗಳು ಸಹ ಒಡೆಯುತ್ತಿವೆ’ ಎನ್ನುತ್ತಾರೆ ಗಿರಿನಾಡು ವಾಹನ ಚಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಶರಣ ನಾರಾಯಣಪೇಟ್‌.

ಸುರಪುರ ವ್ಯಾಪ್ತಿಯಲ್ಲಿ ಈಗಾಗಲೇ ಕೆಲಸಗಳು ಆರಂಭವಾಗಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಮಾಡಿ ತ್ವರಿತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು
ಪರಶುರಾಮ, ಯಾದಗಿರಿ ಪಿಡಬ್ಲ್ಯುಡಿ ಇಇ

ಯಾದಗಿರಿ ತಾಲ್ಲೂಕಿನಲ್ಲಿ ಕಿತ್ತು ಹೋದ ರಸ್ತೆಯ ಡಾಂಬರ್

ಮಳೆ ನೆರೆ:

75 ಕಿ.ಮೀ ರಸ್ತೆಗೆ ಹಾನಿ ಪ್ರಸಕ್ತ ವರ್ಷದ ಸತತ ಮಳೆ ಹಾಗೂ ಪ್ರವಾಹದಿಂದಾಗಿ 5.66 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 69.31 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಸೇರಿ 75 ಕಿ.ಮೀ. ರಸ್ತೆಗೆ ಹಾನಿಯಾಗಿದೆ. ಹಾನಿಯ ಅಂದಾಜು ₹ 28.85 ಕೋಟಿಯಷ್ಟಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ರಾಜ್ಯ ಹೆದ್ದಾರಿಯ 13 ಜಿಲ್ಲಾ ಮುಖ್ಯರಸ್ತೆಯ 29 ಸೇತುವೆಗಳು ಸೇರಿ ಒಟ್ಟು 42 ಸೇತುವೆಗಳಿಗೆ ಹಾನಿಯಾಗಿದೆ. ಇದು ಕೂಡ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

937 ಕಿ.ಮೀ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯ!

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ 937 ಕಿ.ಮೀ. ವ್ಯಾಪ್ತಿಯಲ್ಲಿ ಗುಂಡಿಗಳು ಬಿದ್ದಿವೆ ಎಂಬುದು ಲೋಕೋಪಯೋಗಿ ಇಲಾಖೆ ನೀಡಿದ ಅಂಕಿಅಂಶಗಳಿಂದ ಗೊತ್ತಾಗಿದೆ. ರಾಜ್ಯ ಹೆದ್ದಾರಿ ಪೈಕಿ ಯಾದಗಿರಿ ಉಪವಿಭಾಗದಲ್ಲಿ 73.25 ಕಿ.ಮೀ. ಶಹಾಪುರ ಉಪವಿಭಾಗದಲ್ಲಿ 124 ಕಿ.ಮೀ. ಹಾಗೂ ಸುರಪುರ ಉಪವಿಭಾಗದಲ್ಲಿ 191 ಕಿ.ಮೀ. ಸೇರಿ ಒಟ್ಟು 389 ಕಿ.ಮೀ. ರಸ್ತೆಗಳಲ್ಲಿ ತಗ್ಗುಗಳಿವೆ. ಜಿಲ್ಲಾ ಮುಖ್ಯರಸ್ತೆಯ ಪೈಕಿ ಯಾದಗಿರಿಯಲ್ಲಿ 184 ಕಿ.ಮೀ. ಶಹಾಪುರದಲ್ಲಿ 109 ಕಿ.ಮೀ. ಹಾಗೂ ಸುರಪುರ ಉಪವಿಭಾಗದಲ್ಲಿನ 254 ಕಿ.ಮೀ. ಸೇರಿ ಒಟ್ಟು 548 ಕಿ.ಮೀ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕಿದೆ. ರಸ್ತೆಗಳ ಗುಂಡಿಗಳಿಗಾಗಿ ₹ 9.50 ಕೋಟಿ ಅನುದಾನ ಮೀಸಲಿಟ್ಟು 101 ಕಾಮಕಾರಿಗಳನ್ನು ಗುರುತಿಸಲಾಗಿದೆ. 44 ಟೆಂಡರ್‌ಗಳು ಪರಿಶೀಲನೆಯ ಹಂತದಲ್ಲಿದ್ದು 57 ಟೆಂಡರ್‌ಗಳಿಗೆ ಅನುಮತಿ ಪತ್ರ ಕೊಡಲಾಗಿದೆ ಎನ್ನುತ್ತಾರೆ ಪಿಡಬ್ಲ್ಯುಡಿ ಅಧಿಕಾರಿಗಳು.

ಯಾದಗಿರಿ ಜಿಲ್ಲೆಯ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಜನಪ್ರತಿನಿಧಿಗಳು ಅಧಿಕಾರಿಗಳು ನಿತ್ಯ ಓಡಾಡುವ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಗಳಿಂದ ಆವೃತವಾಗಿವೆ. ಸುಗಮವಾಗಿ ಓಡಾಡಲಾಗದಷ್ಟು ಮಟ್ಟಿಗೆ ಹಾಳಾಗಿದ್ದರ ಬಗ್ಗೆ ಸಾರ್ವಜನಿಕರು ವಾಹನಗಳ ಚಾಲಕ– ಮಾಲೀಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಹ ರಸ್ತೆಗಳ ಚಿತ್ರಣ ತೆರೆದಿಡಲು ‘ಪ್ರಜಾವಾಣಿ’ ವಿಶೇಷ ವರದಿಗಳ ಸರಣಿಯನ್ನು ಇಂದಿನಿಂದ ಪ್ರಕಟಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.