ADVERTISEMENT

ಸುರಪುರದ ಇತಿಹಾಸ ಪ್ರಸಿದ್ಧ ‘ಹಾಲೋಕುಳಿ’ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:17 IST
Last Updated 17 ಆಗಸ್ಟ್ 2025, 7:17 IST
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ದೇಗುಲ
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ದೇಗುಲ   

ಸುರಪುರ: ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು 222 ವರ್ಷಗಳ ಕಾಲ ಅಭೂತಪೂರ್ವ ಆಡಳಿತ ನೀಡಿದ ಇಲ್ಲಿನ ಗೋಸಲ ರಾಜರು ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನ ಜಾತ್ರೆ ಆ.17ರಂದು ಕೃಷ್ಣ ಜನ್ಮಾಷ್ಟಮಿಯೊಂದಿಗೆ ಆರಂಭವಾಗುತ್ತದೆ.

ಕ್ರಿ.ಶ. 1710ರಲ್ಲಿ ರಾಜಾ ಪಿತಾಂಬರ ಬಹಿರಿ ಪಿಡ್ಡನಾಯಕ ದೇಗುಲ ಕಟ್ಟಿಸಿದ ಎಂಬ ಐತಿಹ್ಯವಿದೆ. ಕಳೆದ ಮೂರು ಶತಮಾನಗಳಿಂದ ಜಾತ್ರೆ ನಡೆದುಕೊಂಡು ಬಂದಿರುವುದು ವಿಶೇಷ. ದೇಶದಲ್ಲಿ ವಿರಳವಾಗಿ ಕಂಡುಬರುವ ಸ್ತಂಭಾರೋಹಣ ಜಾತ್ರೆಯ ವಿಶೇಷ.

ಪುರಾತನ ದೇವಸ್ಥಾನ ಇಂದಿಗೂ ಸುಸ್ಥಿಯಲ್ಲಿರುವುದು ಅಂದಿನ ಗುಣಮಟ್ಟದ ಕಾಮಗಾರಿಗೆ ಸಾಕ್ಷಿ. 52 ಮೆಟ್ಟಿಲುಗಳ ಆಕರ್ಷಕ ದೇವಸ್ಥಾನ, ಭಕ್ತಿ ಭಾವ ಸೂಸುವ ಮೂರ್ತಿಗಳು, ಗರ್ಭಗುಡಿಯ ಎರಡು ಪಕ್ಕದಲ್ಲಿ ಆಳ್ವಾರರ ಚಿಕ್ಕ ಪ್ರತಿಮೆಗಳು, 64 ಕಂಬಗಳ ಆಕರ್ಷಕ ನವರಂಗ, ದೇಗುಲದ ಮೇಲಿನ ಕೆತ್ತನೆ ಜನರನ್ನು ಸೆಳೆಯುತ್ತದೆ.

ADVERTISEMENT

ರಾಜರು ತಿರುಮಲ ತಿಮ್ಮಪ್ಪನ ಭಕ್ತರು. ತಿರುಮಲಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ ಶ್ರೇಯಸ್ಸು. ಒಮ್ಮೆ ಅರಸನ ಕನಸಿನಲ್ಲಿ ವೆಂಕಟೇಶ್ವರ ದರ್ಶನ ನೀಡಿದ. ನೀವು ತಿರುಮಲಕ್ಕೆ ಬರುವುದು ಬೇಡ. ಇಲ್ಲಿಯೇ ಮಂದಿರ ನಿರ್ಮಿಸು ಎಂದು ಆಶೀರ್ವದಿಸಿದ. ಅಂದಿನಿಂದ ಅರಸನ ಪ್ರತಿನಿಧಿಗಳು ತಿರುಮಲಕ್ಕೆ ಅರಮನೆಯ ‘ಮುಡಿಪು’ ತೆಗೆದುಕೊಂಡು ಹೋಗುವ ಪದ್ಧತಿ ಇದೆ.

ಗೋಸಲ ವಂಶಸ್ಥರು: ರಾಜರು ವೈಷ್ಣವ ಮತಾವಲಂಬಿಗಳು. ಗೋವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಗೋವು ವಧೆ ನಡೆಯುತ್ತಿದ್ದರೆ ತಕ್ಷಣ ತಮ್ಮ ಸೈನಿಕರನ್ನು ಕಳಿಸಿ ಗೋವುಗಳನ್ನು ವಶಪಡಿಸಿಕೊಂಡು ಅವುಗಳಿಗೆ ಆಶ್ರಯ ನೀಡುತ್ತಿದ್ದರು. ಒಮ್ಮೆ ರಾಜಾ ಮೊಂಡುಗೈ ವೆಂಕಟಪ್ಪನಾಯಕ ಪುದುಚೇರಿ ಕದನ ಗೆದ್ದು ಬರುತ್ತಿದ್ದಾಗ ಹೈದರಾಬಾದ್‌ ನಿಜಾಮನ ಪ್ರಾಂತದಲ್ಲಿ ನಡೆಯುತ್ತಿದ್ದ ಸಹಸ್ರಾರು ಗೋವಧೆ ನಿಲ್ಲಿಸಿ ಸುರಪುರಕ್ಕೆ ತಂದು ರಕ್ಷಣೆ ಮಾಡಿದ. ಹೀಗೆ ಇಲ್ಲಿನ ಅರಸರು ಗೋವುಗಳನ್ನು ರಕ್ಷಿಸುತ್ತಿದ್ದರಿಂದ ‘ಗೋಸಲ’ರು ಎಂಬ ಹೆಸರಿನಿಂದ ಪ್ರಸಿದ್ಧರಾದರು.

ಅರಸರ ಕಾಲದಲ್ಲಿ ಗೋಸಂಪತ್ತು ಅಧಿಕವಾಗಿತ್ತು. ಜಾತ್ರೆ ಸಮಯದಲ್ಲಿ ಓಕುಳಿ ಆಡುವುದು ವಿಶೇಷ. ಇದಕ್ಕಾಗಿಯೇ ವಿಶೇಷವಾದ ಚರ್ಮದ ಪಿಚಗಾರಿ ತಯಾರಿಸಲಾಗಿರುತ್ತದೆ. ಚೀಲದಲ್ಲಿ ಹಾಲು ತುಂಬಿಕೊಂಡು ಜಾತ್ರೆಗೆ ಆಗಮಿಸಿದ ಜನರಿಗೆ ಸಿಂಪಡಿಸುತ್ತಿದ್ದರು. ಹೀಗಾಗಿ ಜಾತ್ರೆಗೆ ‘ಹಾಲೋಕುಳಿ’ ಎಂಬ ಹೆಸರು. ಈಗ ಹಾಲಿನ ಬದಲಿಗೆ ಪುಷ್ಕರಣಿಯ ನೀರನ್ನು ಬಳಸಲಾಗುತ್ತದೆ.

ವಿಶಿಷ್ಟ ಸ್ತಂಭಾರೋಹಣ: ದೇಗುಲದ ಅವರಣದಲ್ಲಿ 50 ಅಡಿ ಎತ್ತರದ 5 ಕಂಬಗಳನ್ನು ನೆಡು ಹಾಕಲಾಗಿರುತ್ತದೆ. ಕಂಬಕ್ಕೆ ಬೆಣ್ಣೆಬಾಳ, ಅರದಾಳ ಇತರ ಜಾರುವ ಪದಾರ್ಥಗಳನ್ನು ಲೇಪಿಸಲಾಗಿರುತ್ತದೆ. ಕಂಬದ ಮೇಲೆ ಕಟ್ಟಿರುವ ಚಿಕ್ಕ ಮಂಟಪದಲ್ಲಿ ವ್ಯಕ್ತಿಯೊಬ್ಬ ಕುಳಿತಿರುತ್ತಾನೆ. ಕಂಬದ ತುದಿಗೆ ಹಣ್ಣಿನ ಹೋಳುಗಳನ್ನು ಕಟ್ಟಲಾಗಿರುತ್ತದೆ.
ದೇಗುಲದಲ್ಲಿ ಪೂಜೆ ಸಲ್ಲಿಸಿ ರಾಜಪ್ರತಿನಿಧಿ ನಾಣ್ಯ ಚಿಮ್ಮಿಸಿ ಸ್ತಂಭಾರೋಹಣಕ್ಕೆ ಚಾಲನೆ ನೀಡುತ್ತಾರೆ. ನಿರ್ದಿಷ್ಟ ಜನರು ಕಂಬ ಹತ್ತಲು ಆರಂಭಿಸುತ್ತಾರೆ. ಕೆಳಗಿನಿಂದ ಪಿಚಗಾರಿ ಮೂಲಕ ಮತ್ತು ಮೇಲಿನಿಂದ ಆರೋಹಿಗಳ ಮೇಲೆ ನೀರು ಹಾಕಲಾಗುತ್ತದೆ. ಇದರಿಂದ ಆರೋಹಿಗಳು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ಮನರಂಜನೆ ನೀಡುತ್ತದೆ.
ಕೊನೆಗೆ ಒಬ್ಬರ ಸಹಾಯದಿಂದ ಮತ್ತೊಬ್ಬರು ಕಂಬ ಹತ್ತಿ ತುದಿಯಲ್ಲಿರುವ ಹಣ್ಣಿನ ಹೋಳುಗಳನ್ನು ಹರಿಯುತ್ತಾರೆ. ಈ ದೃಶ್ಯ ನೋಡಲು ಸಹಸ್ರಾರು ಜನರು ಸೇರಿರುತ್ತಾರೆ. ಹೋ ಎಂದು ಕಿರುಚಿ, ಕರತಾಡನ ಮಾಡಿ ಜಯಘೋಷ ಮಾಡಿ ಹುರಿದುಂಬಿಸುತ್ತಾರೆ. ಕಂಬ ಹರಿದ ಆರೋಹಿಗಳನ್ನು ಸನ್ಮಾನಿಸಲಾಗುತ್ತದೆ.

ನಂತರ ಭಕ್ತರು ದೇವರ ದರ್ಶನ ಪಡೆದು ತಮ್ಮ ಮಕ್ಕಳನ್ನು ಆಟಿಕೆಗಳಲ್ಲಿ ಕೂಡಿಸಿ, ಆಟಿಕೆ ವಸ್ತು, ಮಿಠಾಯಿ, ಬಳೆ ಕೊಡಿಸಿ ಸಂಭ್ರಮಿಸುತ್ತಾರೆ. ನವದಂಪತಿಗಳು ಸ್ತಂಭಾರೋಹಣ ವೀಕ್ಷಿಸಿದರೆ ಸಂತಾನವಾಗುತ್ತದೆ ಎಂಬ ಪ್ರತೀತಿ ಇದೆ.

ನಮ್ಮ ಪೂರ್ವಿಕರು ಕೃಷ್ಣನ ಅನನ್ಯ ಭಕ್ತರು. ಆರಾಧ್ಯ ದೈವ ವೇಣುಗೋಪಾಲನ ಜಾತ್ರೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುವುದು ನಮ್ಮ ಪರಂಪರೆ
ರಾಜಾ ಕೃಷ್ಣಪ್ಪನಾಯಕ, ಪ್ರಸ್ತುತ ಅರಸರು
ಜಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದರಿಂದ ಹೆಚ್ಚಿನ ಪುರೋಹಿತರ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಶ್ರದ್ಧೆ ಭಕ್ತಿ ಸ್ವಚ್ಛತೆ ಕಾಪಾಡಬೇಕು
ಆಂಜನೇಯಚಾರ್ಯಲು, ಪ್ರಧಾನ ಅರ್ಚಕ

ಕಾರ್ಯಕ್ರಮಗಳ ವಿವರ ಹೀಗಿದೆ

ಆ.17ರಂದು ಕೃಷ್ಣ ಜನ್ಮಾಷ್ಟಮಿ ಆಚರಣೆ ಬೆಳಿಗ್ಗೆ 5ಕ್ಕೆ ಸುಪ್ರಭಾತ ಪಂಚಾಮೃತಾಭಿಷೇಕ ಅಲಂಕಾರ ದರ್ಶನ ಸಂಜೆ ಉಯ್ಯಾಲ ಸೇವೆ ರಾತ್ರಿ ತೀರ್ಥ ವಿನಿಯೋಗ. ಆ.18ರಂದು ಸಂಜೆ 5 ಗಂಟೆಗೆ ದೇವರಸ್ತಂಭಾರೋಹಣ. ಆ.19ರಂದು ಬೆಳಿಗ್ಗೆ 11 ಗಂಟೆಗೆ ದೇಗುಲದ ಆವರಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಗಳು. ಸಂಜೆ 5 ಗಂಟೆಗೆ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ರಣಗಂಭಾರೋಹಣ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.