ADVERTISEMENT

‘ಮೌಖಿಕ ಮಾಧ್ಯಮಗಳಾಗಿದ್ದ ವಚನಗಳು’

‘ಶರಣ ಸಾಹಿತ್ಯದಲ್ಲಿ ಮಾಧ್ಯಮದ ಪರಿಕಲ್ಪನೆ’ ಕುರಿತು ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 15:38 IST
Last Updated 29 ಆಗಸ್ಟ್ 2024, 15:38 IST
ಯಾದಗಿರಿಯ ಕಸಾಪ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನ ಹಾಗೂ ಲಿಂ.ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109 ನೇ ಜಯಂತಿ ಮಹೋತ್ಸವದಲ್ಲಿ ಪತ್ರಕರ್ತ ನಾಗಪ್ಪ ಮಾಲಿಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು
ಯಾದಗಿರಿಯ ಕಸಾಪ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನ ಹಾಗೂ ಲಿಂ.ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109 ನೇ ಜಯಂತಿ ಮಹೋತ್ಸವದಲ್ಲಿ ಪತ್ರಕರ್ತ ನಾಗಪ್ಪ ಮಾಲಿಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು    

ಯಾದಗಿರಿ: ‘12ನೇ ಶತಮಾನದಲ್ಲಿ ವಚನಗಳು ಮೌಖಿಕ ಮಾಧ್ಯಮವಾಗಿದ್ದವು. ಸತ್ಯದ ಮಾರ್ಗದಲ್ಲಿ ನಡೆಯುವಂತೆ ಜನ ಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಹೇಳಿದ್ದು ಮೌಖಿಕ ಮಾಧ್ಯಮ. ಅದುವೇ ವಚನ’ ಎಂದು ಕಲಬುರಗಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಹೇಳಿದರು.

ನಗರದ ಕಸಾಪ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನ ಹಾಗೂ ಲಿಂ.ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿಯಲ್ಲಿ ‘ಶರಣ ಸಾಹಿತ್ಯದಲ್ಲಿ ಮಾಧ್ಯಮದ ಪರಿಕಲ್ಪನೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ವಚನಗಳು ಸಾಮಾನ್ಯ ಜನರ ಧ್ವನಿಯಾಗಿದೆ. ಈಗ ಮಾಧ್ಯಮಗಳು ಜನ ಧ್ವನಿಯಾಗಿ ಕೆಲಸ ಮಾಡುತ್ತಿವೆ. ವಚನಗಳು ಸತ್ಯ ಹೇಳುತ್ತವೆ. ಮನ ಮಿಡಿಯುವ ಕೆಲಸ ಮಾಡಿ ತಿದ್ದಿ, ಬುದ್ದಿ ಹೇಳುತ್ತಿದ್ದವು. ಈಗಲೂ ಮಾಧ್ಯಮಗಳು ಜನರಿಗೆ ಮಾಹಿತಿಯನ್ನು ತಲುಪಿಸುತ್ತಿವೆ ಎಂದು ಹೇಳಿದರು.

ADVERTISEMENT

ಯಾದಗಿರಿ ಪ್ರಧಾನ ಅಂಚೆ ಕಚೇರಿ ಪ್ರಧಾನ ಅಂಚೆ ಪಾಲಕ ಕುಪೇಂದ್ರ ವಠಾರ ಮಾತನಾಡಿ, ‘ಕೃಷ್ಣ ಜನ್ಮಾಷ್ಟಮಿ ಆಚರಿಸಿ ಮೊಸರು ಗಡಿಗೆಯನ್ನು ಒಡೆಯಲು ತಾಮುಂದು ನಾಮುಂದು ಎಂದು ಯುವಕರು ಉತ್ಸಾಹ ತೋರಿದರು. ಆದರೆ, ದಲಿತರು ಕುತ್ತಿಗೆಗೆ ಗಡಿಗೆಯನ್ನು ಹಾಕಿಕೊಂಡು ತಿರುಗಾಡುವ ಪರಿಸ್ಥಿತಿ ಇತ್ತು. ಸುತ್ತೂರು ಶ್ರೀಗಳು ಸೇರಿದಂತೆ ಸ್ವಾಮೀಜಿಗಳು ಅಸಂಖ್ಯಾತ ದಲಿತರಿಗೆ ಜಾಗೃತಿ ಮೂಡಿಸಿ ಹೊಸ ಜೀವನ ಕಟ್ಟಿಕೊಳ್ಳಲು ನೆರವು ನೀಡಿದ್ದಾರೆ’ ಎಂದು ಹೇಳಿದರು. ‌

ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ರಾಜ್ಯ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಸಾಪ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಹುಣಸಗಿ ತಾಲ್ಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ನಾಗಪ್ಪ ಮಾಲಿಪಾಟೀಲ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಯಡಿಯೂರ ಸಿರಿ ಸಂಗೀತ ಪಾಠಶಾಲೆ ಅವರಿಂದ ವಚನ ಗಾಯನ ನಡೆಯಿತು. ಭೀಮರಾಯ ಲಿಂಗೇರಿ ನಿರೂಪಿಸಿದರೆ, ಸವರಾಜ ಅರಳಿ ಮೋಟ್ನಳ್ಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ಅಯ್ಯಣ್ಣ ಹುಂಡೇಕಾರ, ಸಿ.ಎಂ.ಪಟ್ಟೆದರ್, ಆರ್.ಮಹಾದೇವಪ್ಪ ಗೌಡ ಅಬ್ಬೆತುಮಕೂರ, ಸೋಮಶೇಖರ್ ಮಣ್ಣೂರ, ಸ್ವಾಮಿದೇವ ದಾಸನಕೇರಿ, ಎಸ್.ಎಸ್.ನಾಯಕ, ಬಬಸವಂತ್ರಾಯ ಗೌಡ ಮಾಲಿಪಾಟೀಲ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಪ್ರಶಾಂತ ಆಯಾರಕರ್, ಗಾಳೆಪ್ಪ ಪೂಜಾರಿ ಸೇರಿದಂತೆ ಎಲ್ಲ ತಾಲ್ಲೂಕಿನ ಶಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.