ADVERTISEMENT

ಶಹಾಪುರ: ರಸ್ತೆ ನಿರ್ಮಿಸಿದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ

ವಿಭೂತಿಹಳ್ಳಿ ಗ್ರಾಮದಲ್ಲಿ ಭುಗಿಲೆದ್ದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:16 IST
Last Updated 11 ಜುಲೈ 2025, 7:16 IST
ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಗುರುವಾರ ಡಿಸಿ ಹರ್ಷಲ್ ಭೊಯಲ್ ನಾರಾಯಣರಾವ ಭೇಟಿ ನೀಡಿದರು. ಸಿಇಒ ಲವೀಶ್ ಒರಡಿಯಾ, ಎಸ್ಪಿ ಪೃಥಿಕ ಶಂಕರ ಉಪಸ್ಥಿತರಿದ್ದರು
ಶಹಾಪುರ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಗುರುವಾರ ಡಿಸಿ ಹರ್ಷಲ್ ಭೊಯಲ್ ನಾರಾಯಣರಾವ ಭೇಟಿ ನೀಡಿದರು. ಸಿಇಒ ಲವೀಶ್ ಒರಡಿಯಾ, ಎಸ್ಪಿ ಪೃಥಿಕ ಶಂಕರ ಉಪಸ್ಥಿತರಿದ್ದರು   

ಶಹಾಪುರ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಿಂದ ದಲಿತರ ಬಡಾವಣೆಗೆ ಹೊಸ ರಸ್ತೆ ನಿರ್ಮಾಣದ ಸ್ಥಳಕ್ಕೆ ಗುರುವಾರ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು. ರಸ್ತೆ ನಿರ್ಮಾಣವು ದಲಿತ-ಕುರುಬ ಸಮುದಾಯದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಗ್ರಾಮದಲ್ಲಿ 30 ದಲಿತರ ಮನೆಗಳಿವೆ. ಗ್ರಾಮದ ಕುರುಬ ಸಮುದಾಯದ ಮಹಿಳೆಯರು ರಸ್ತೆ ನಿರ್ಮಾಣದ ಜಾಗದಲ್ಲಿ ಬಯಲು ಶೌಚ ಮಾಡುತ್ತಾರೆ. ಮಳೆ ಬಂದರೆ ನಮ್ಮ ಬಡಾವಣೆಯ ತುಂಬಾ ಹೊಲಸು ತುಂಬಿಕೊಳ್ಳುತ್ತದೆ. ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತೆ ಆಗಿದೆ. ರಸ್ತೆ ನಿರ್ಮಾಣ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಜಿಲ್ಲಾಧಿಕಾರಿ ದಲಿತರ ಬಡಾವಣೆಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗರು ಅವಲತ್ತುಕೊಂಡರು.

ಹಲವಾರು ವರ್ಷದಿಂದ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುತ್ತಿದ್ದೇವೆ. ರಸ್ತೆ ನಿರ್ಮಾಣದ ಹೆಸರಿನಲ್ಲಿ ಒಡೆದು ಹಾಕಿದ್ದಾರೆ. ರಾತ್ರಿ ಸಮಯದಲ್ಲಿ ಇದೇ ಗುಡ್ಡದಲ್ಲಿ ನಾವೆಲ್ಲರೂ ಶೌಚಕ್ಕೆ ತೆರಳುತ್ತೇವೆ. ಕುಡಿಯಲು ನೀರು ಇಲ್ಲದಾಗ ಶೌಚಾಲಯ ಬಳಕೆಗೆ ಎಲ್ಲಿಂದ ತರಬೇಕು ನೀರು ಎಂದು ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ADVERTISEMENT

ಜಿಲ್ಲಾಧಿಕಾರಿ ಹರ್ಷಲ್ ಭೊಯಲ್ ನಾರಾಯಣರಾವ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ ಶಂಕರ, ಡಿವೈಎಸ್ಪಿ ಜಾವೇದ ಇನಾಂದಾರ, ಸಿಡಿಪಿಒ ಮಲ್ಲಣ್ಣ ದೇಸಾಯಿ, ಪಿ.ಐ ಎಸ್.ಎಂ. ಪಾಟೀಲ, ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಹಾಜರಿದ್ದರು.

ಯಥಾಸ್ಥಿತಿ ಕಾಪಾಡಲು ಆದೇಶ: ಗ್ರಾಮದಲ್ಲಿ ದಲಿತರ ಬಡಾವಣೆಗೆ ಹೊಸ ರಸ್ತೆ ನಿರ್ಮಾಣದ ಕಾರ್ಯವನ್ನು ನಾಲ್ಕು ವಾರ ಯಥಾಸ್ಥಿತಿ (ಸ್ಟೆಟೆಸ್ಕೊ) ಕಾಪಾಡಬೇಕು ಎಂದು ಕಲಬುರಗಿ ಹೈಕೋರ್ಟ್ ಸಂಚಾರಿ ಪೀಠವು ಆದೇಶ ನೀಡಿದೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಡಿಸಿ ಅವರ ಗಮನಕ್ಕೆ ತಂದರು.

ಶಹಾಪುರ ಠಾಣೆಯ ಮುಂದೆ ಗುರುವಾರ ಕುರುಬ ಸಮುದಾಯದ ಮುಖಂಡರು ಧರಣಿ ನಡೆಸಿದರು
ನಿಮ್ಮ ಸಮಸ್ಯೆ ಗಮನಕ್ಕೆ ಬಂದಿದ್ದರಿಂದ ಖುದ್ದಾಗ ಭೇಟಿ ನೀಡಿರುವೆ. ಶಾಂತಿಯುತವಾಗಿ ಎಲ್ಲ ಸಮಸ್ಯೆಯನ್ನು ಬಗೆಹರಿಸೋಣ. ಎಲ್ಲರೂ ಶಾಂತಿ ಕಾಪಾಡಬೇಕು
ಹರ್ಷಲ್ ಭೊಯಲ್ ನಾರಾಯಣರಾವ್ ಜಿಲ್ಲಾಧಿಕಾರಿ
ಯಾರು ಭಯ ಭೀತಿಯಾಗಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್‌ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಆಧಾರದ ಮೇಲೆ ದೂರು ದಾಖಲಿಸಿದೆ.
ಪೃತ್ವಿಕ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ರಸ್ತೆ ನಿರ್ಮಾಣದ ನೆಪದಲ್ಲಿ ಸಾರ್ವಜನಿಕ ಶೌಚಾಲಯವನ್ನು ಒಡೆದು ಹಾಕಿರುವುದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕಾಗಿತ್ತು. ಇದರ ಬಗ್ಗೆ ಗಮನಿಸಲಾಗುವುದು
ಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿ ಸಿಇಒ

ಠಾಣೆ ಮುಂದೆ ಕುರುಬ ಸಮುದಾಯದವರ ಧರಣಿ:

ವಿಭೂತಿಹಳ್ಳಿ ಗ್ರಾಮದ ಮಹಿಳೆಯರ ಮೇಲೆ ಅನವಶ್ಯಕವಾಗಿ ದಲಿತ ದೌರ್ಜನ್ಯ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿರುವುದನ್ನು ಖಂಡಿಸಿ ಗುರುವಾರ ಗ್ರಾಮದ ಕುರುಬ ಸಮಾಜದ ಜನತೆ ಹಾಗೂ ಮಹಿಳೆಯರು ಠಾಣೆಯ ಮುಂದೆ ಧರಣಿ ನಡೆಸಿದರು. ನಮಗೆ ರಸ್ತೆ ನೆಪದಲ್ಲಿ ನಮಗೂ ಸಾಕಷ್ಟು ದಲಿತರು ತೊಂದರೆ ನೀಡಿದ್ದಾರೆ. ದೂರು ದಾಖಲಿಸುವಂತೆ ಪಟ್ಟು ಹಿಡಿದಿದ್ದಾರೆ. ಎಸ್ಪಿ ಅವರು ಸೂಚನೆ ನೀಡುವ ತನಕ ನಾವು ಯಾವುದೇ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಠಾಣೆಯ ಪಿ.ಐ ಎಸ್.ಎಂ ಪಾಟೀಲ ಸ್ಪಷ್ಟಪಡಿಸಿದ್ದರಿಂದ ಗ್ರಾಮದ ಜನತೆ ಧರಣಿ ಮುಂದುವರಿಸಿದ್ದಾರೆ.

ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌:

ವಿಭೂತಿಹಳ್ಳಿ ಗ್ರಾಮದಲ್ಲಿ ರಸ್ತೆ ವಿವಾದ ಜಟಿಲವಾಗುತ್ತಿದ್ದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದೆ. ಈಗಾಗಲೇ ಒಂದು ವ್ಯಾನ್ ಹಾಗೂ 15 ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಿದೆ. ಯಾರಾದರು ತೊಂದರೆ ನೀಡಿದರೆ ಕರೆ ಮಾಡಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಎಸ್ಪಿ ಪೃತ್ವಿಕ ಶಂಕರ್ ಅಲ್ಲಿ ನೆರದ ದಲಿತರಿಗೆ ಅಭಯ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.