ADVERTISEMENT

ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

₹1.1 ಕೋಟಿ ವೆಚ್ಚದಲ್ಲಿ ಆದಿ ದೇವತೆ ಅಂಬಾ ಮಹೇಶ್ವರಿಯ ದೇವಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:01 IST
Last Updated 9 ಫೆಬ್ರುವರಿ 2026, 8:01 IST
ವಡಗೇರಾ ಪಟ್ಟಣದಲ್ಲಿ ಭಕ್ತರ ದೇಣಿಗೆಯಿಂದ ಕಲ್ಲಿನಲ್ಲಿ ನಿರ್ಮಾಣ ಗೊಂಡ ದೇವಿಯ ಗುಡಿ
ವಡಗೇರಾ ಪಟ್ಟಣದಲ್ಲಿ ಭಕ್ತರ ದೇಣಿಗೆಯಿಂದ ಕಲ್ಲಿನಲ್ಲಿ ನಿರ್ಮಾಣ ಗೊಂಡ ದೇವಿಯ ಗುಡಿ   

ವಡಗೇರಾ: ಸರ್ಕಾರದ ಅನುದಾನವಿಲ್ಲದೆ ಕೇವಲ ಭಕ್ತರೇ ಸೇರಿಕೊಂಡು ಪಟ್ಟಣದಲ್ಲಿ ನೂತನವಾದ ಆದಿ ದೇವತೆ ಅಂಬಾ ಮಹೇಶ್ವರಿಯ ಭವ್ಯ ದೇವಸ್ಥಾನವನ್ನು ₹1.1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.  ಈ ಮೂಲಕ ಗತ ಕಾಲದ ವೈಭವವನ್ನು ವರ್ತಮಾನ ಕಾಲದಲ್ಲಿ ತಿಳಿಸಲು ಅಂಬಾ ಮಹೇಶ್ವರಿಯ ದೇವಾಲಯವು ಲೋಕಾರ್ಪಣೆ ಗೊಂಡಿದೆ.

ಹಿನ್ನೆಲೆ: ಕಳೆದ 75 ವರ್ಷಗಳ ಹಿಂದೆ ಪಟ್ಟಣದ ವಿಶ್ವಕರ್ಮ ಬಡಾವಣೆಯಲ್ಲಿ ದೇವಿಯ ಚಿಕ್ಕ ಗುಡಿಯನ್ನು ಕಟ್ಟಲಾಗಿತ್ತು. ಇದಕ್ಕೆ ಶಹಾಪುರ ತಾಲ್ಲೂಕಿನ ದೊಡ್ಡ ಸಗರದ ಕುಪ್ಪಣ್ಣ ವಿಶ್ವಕರ್ಮ ಎಂಬ ಶಿಲ್ಪಿ ಮಡ್ಡಿ ಗಿಡದ ಕಟ್ಟಿಗೆಯಿಂದ ದೇವಿಯ ಮೂರ್ತಿಯನ್ನು ಸಿದ್ದಪಡಿಸಿದ್ದರು. ದೇವಿಗೆ 10 ಕೈಗಳು, 1 ತ್ರಿಶೂಲ, 1 ಖಡ್ಗ, ಶಂಖ ಹಾಗೂ ಚಕ್ರಗಳನ್ನು ಇವೆ. ಇಂದಿಗೂ ಇದೇ ಮೂರ್ತಿ ದೇವಾಲಯದ ಒಳಗಡೆ ಇದೆ. ಈ ಮೂರ್ತಿಯನ್ನೆ ಭಕ್ತರು ಪೂಜಿಸುತ್ತಾರೆ.

18 ತಿಂಗಳಲ್ಲಿ ಪೂರ್ಣ: ಆದೋನಿಯ ವೆಂಕಟೇಶ ಹಾಗೂ 10 ಜನ ಕಾರ್ಮಿಕರು ಕೂಡಿಕೊಂಡು ಕೇವಲ 18 ತಿಂಗಳಲ್ಲಿ ಅಂಭಾ ಮಹೇಶ್ವರಿ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ADVERTISEMENT

14 ಕಂಬಗಳು: ದೇವಾಲಯದ ಒಳಗಡೆ ಒಟ್ಟು 14 ಕಂಬಗಳಿದ್ದು ಮುಂದಿನ 4 ಕಂಬಗಳಲ್ಲಿ ಸಿಂಹದ ಚಿತ್ರವನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ. ಅಲ್ಲದೇ ಇನ್ನುಳಿದ 10 ಕಂಬಗಳಲ್ಲಿ ತ್ರಿಶೂಲ, ಕಮಲದ ಹೂವು ಸೇರಿದಂತೆ ದೇವಿಯ ಅಷ್ಟಾಂಗ ಚಿತ್ರವನ್ನು ಬಿಡಿಸಲಾಗಿದೆ.

ಗರ್ಭಗುಡಿ ಸುಂದರ ಕೆತ್ತನೆ: ಗರ್ಭಗುಡಿಯ ದ್ವಾರ ಬಾಗಿಲಿಗೆ ದೇವಿಯ ಮೂರ್ತಿಯನ್ನು ಕೆತ್ತಲಾಗಿದೆ. ಅಲ್ಲದೇ ಗರ್ಭಗುಡಿಯ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಅಂಬಾಮಹೇಶ್ವರಿಯ ಚಿತ್ರ, ಉತ್ತರಕ್ಕೆ ಮಾರಿಕಾಂಬಾದೇವಿ ಹಾಗೂ ದಕ್ಷಿಣಕ್ಕೆ ಕಾಳಿಕಾದೇವಿಯ ಗುಡಿಯ ಮೇಲ್ಭಾಗದ ನಾಲ್ಕು ಮೂಲೆಗಳಲ್ಲಿ ಅಂಬಾಮಹೇಶ್ವರಿ, ಕಾಳಿಕಾದೇವಿ, ಸರಸ್ವತಿ ಹಾಗೂ ನಾಗದೇವತೆಯ ಚಿತ್ರಗಳನ್ನು ಅದ್ಬುತವಾಗಿ ಕೆತ್ತಲಾಗಿದೆ.

ಒಂದೇ ಕಲ್ಲಿನ ಹಾಲಗಂಭ: ದೇವಸ್ಥಾನದ ಮುಂಬಾಗದಲ್ಲಿ 37 ಅಡಿ ಎತ್ತರದ ಒಂದೇ ಕಲ್ಲಿನ ಹಾಲಗಂಭ ನಿರ್ಮಿಸಲಾಗಿದೆ. ಈ ಹಾಲಗಂಭ ನಿರ್ಮಾಣಕ್ಕೆ ಪಟ್ಟಣದ ಮಹಿಳೆಯರು ನೀಡಿದ ದೇಣಿಗೆಯನ್ನು ಮಾತ್ರ ಬಳಸಲಾಗಿದೆ.

ವಡಗೇರಾ ಅಂಬಾಮಹೇಶ್ವರಿ ದೇವಾಲಯದ ಒಳಗಡೆ ಇರುವ ದೇವಿಯ ಮೂರ್ತಿ
ಪಟ್ಟಣದ ಹಿರಿಯರಾದ ಸಂಗಪ್ಪಗೌಡ ಬಸವಂತ್ರಾಯಗೌಡ ರಾಘವೇಂದ್ರ ಕುಲಕರ್ಣಿ ಮೊದಲು ದೇವಿಯ ಗುಡಿಯ ಸ್ಥಾಪನೆ ಮಾಡಿದರು. ನಂತರ ಬಸನಗೌಡ ಬೋರಡ್ಡಿ ಗೌಡಪ್ಪಗೌಡ ಬೋರಡ್ಡಿ ಇದನ್ನು ಮುoದುವರೆಸಿಕೊಂಡು ಹೋದರು. ಇಂದು ಭಕ್ತರ ದೇಣಿಗೆಯಿಂದ ಭವ್ಯವಾದ ದೇವಾಲಯ ನಿರ್ಮಾಣ ಮಾಡಲಾಗಿದೆ
ಮೋನಪ್ಪ ವಿಶ್ವಕರ್ಮ ಹಿರಿಯರು

ಇಂದಿನಿಂದ ದೇವಿಯ ಜಾತ್ರೆ ಆರಂಭ

ಪ್ರತಿ 3 ವರ್ಷಕ್ಕೊಮ್ಮೆ ಜರುಗುವ ಅಂಬಾಮಹೇಶ್ವರಿ ದೇವಿ ಜಾತ್ರೆಯು ಫೆ.9 ರಂದು ಆರಂಭವಾಗಲಿದೆ. ಸೋಮವಾರ ಸಂಜೆ ದೇವಸ್ಥಾನ ಆವರಣದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಂಗಳವಾರ ಬೆಳಿಗ್ಗೆ 7 ಗಂಟೆಗೆ ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಡೊಳ್ಳು ಸಕಲ ಮಂಗಲ ವಾದ್ಯಗಳೊಂದಿಗೆ ದೇವಿಯ ಮೂರ್ತಿಯನ್ನು ಗಂಗಾಸ್ನಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಗಂಗಾಸ್ನಾನದ ನಂತರ ಭವ್ಯ ಮೆರಣಿಗೆ ಮೂಲಕ ದೇವಿಯ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಗುತ್ತದೆ. ನಂತರ ದೇವಸ್ಥಾನದ ಆವಣದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕುಂಭ ಗಿಟ್ಟಿ ಆಹ್ವಾನ ಮಾಡಲಾಗುತ್ತದೆ. ನಂತರ ದೇವಿಗೆ ಸೀರೆ ಮುತ್ತುಗಳಿಂದ ಸಿಂಗರಿಸಿ ಇಳೆ ಕುಟುಂಬಗಳಿಂದ ದೇವಿಗೆ ನೈವೇದ್ಯ ಸಮರ್ಪಿಸಿ ಸಾರ್ವಜನಿಕರಿಗೆ ನೈವೇದ್ಯ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಫೆ 11 ರಂದು ಸಂಜೆ ದೇವಿಯ ಮೂತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.