ADVERTISEMENT

ಅಗತ್ಯ ನೀರು ಪೂರೈಸಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 18:02 IST
Last Updated 10 ಜೂನ್ 2021, 18:02 IST
ಶಹಾಪುರ ನಗರದ ಹೊರವಲಯದ ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು
ಶಹಾಪುರ ನಗರದ ಹೊರವಲಯದ ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹವಾಗಿರುವುದು   

ಶಹಾಪುರ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ನಾರಾಯಣಪೂರ ಎಡದಂಡೆ ಮುಖ್ಯಕಾಲುವೆ (ಎನ್‌ಎಲ್‌ಬಿಸಿ) ಮೂಲಕ ಶಹಾಪುರ ಶಾಖಾ ಕಾಲುವೆಗೆ (ಎಸ್‌ಬಿಸಿ) ನೀರು ಹರಿಸಿದ್ದರಿಂದ ನಗರದ ಫಿಲ್ಡರ್ ಬೆಡ್ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ‌

ಆದರೆ ಸದ್ಯಕ್ಕೆ ನಗರದಲ್ಲಿ ಮೂರು ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ನಗರದ ಜನತೆ ತೊಂದರೆ ಅನುಭವಿಸುತ್ತಿದ್ದು ದಿನ ಬಿಟ್ಟು ದಿನ ನೀರು ಪೂರೈಯಿಸಬೇಕು ಎಂದು ನಗರದ ಜನತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಕೆರೆಯಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ಆದರೆ ನಿರ್ವಹಣೆಯ ಸಮಸ್ಯೆಯಿಂದ ತೊಂದರೆಯಾಗುತ್ತಲಿದೆ. ನಗರಸಭೆಯ ಸಿಬ್ಬಂದಿ ಇಲ್ಲದ ಸಬೂಬು ಹೇಳಿ ನೀರು ಸರಬರಾಜು ಮಾಡುವಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದಾರೆ ಎಂದು ನಗರದ ನಿವಾಸಿ ಸುನಿಲ ಆರೋಪಿಸಿದರು.

ADVERTISEMENT

ಅಲ್ಲದೆ ಕೆರೆಯಲ್ಲಿ ಹೆಚ್ಚು ದಿನದಿಂದ ನೀರು ಸಂಗ್ರಹವಾಗಿದ್ದರಿಂದ ದುರ್ವಾಸನೆ ಬರುತ್ತಲಿದೆ. ನೀರಿನಲ್ಲಿ ಬ್ಲಿಚಿಂಗ್ ಪೌಡರ್ ಹಾಕುತ್ತಿಲ್ಲ. ನೀರು ಶುದ್ಧಿಕರಿಸುವ ಘಟಕ ಕೆಟ್ಟು ನಿಂತು ಹಲವು ವರ್ಷ ಆಗಿವೆ. ಈಗ ಮಳೆಗಾಲ ಆರಂಭವಾಗಿದೆ. ಇಂತಹ ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ನಗರದ ನಿವಾಸಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಅವರು ಫಿಲ್ಟರ್ ಬೆಡ್ ಕೆರೆಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಗರಸಭೆಯ ಸಿಬ್ಬಂದಿಗೆ ತಾಕೀತು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.