ADVERTISEMENT

ಶುದ್ಧ ನೀರಿನ ಘಟಕಗಳಿದ್ದರೂ ತಪ್ಪದ ನೀರಿನ ಬವಣೆ

ಗೌಡಗೇರಾ: ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದ ಗ್ರಾ.ಪಂ ಸದಸ್ಯರು, ಅಧಿಕಾರಿಗಳು; ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2021, 5:04 IST
Last Updated 6 ಮೇ 2021, 5:04 IST
ಗೌಡಗೇರಾದಲ್ಲಿ ಶುದ್ಧ ನೀರಿನ ಘಟಕ ಕಾರ್ಯ ಆರಂಭಿಸದೇ ನಿಂತಿರುವುದು
ಗೌಡಗೇರಾದಲ್ಲಿ ಶುದ್ಧ ನೀರಿನ ಘಟಕ ಕಾರ್ಯ ಆರಂಭಿಸದೇ ನಿಂತಿರುವುದು   

ಗೌಡಗೇರಾ(ಸೈದಾಪುರ): ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ, ಅವು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಜನರು ಕುಡಿಯುವ ನೀರಿಗಾಗಿ ಪರದಡುವಂತಾಗಿದೆ.

ಕಿಲ್ಲನಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌಡಗೇರಾ ಗ್ರಾಮದಲ್ಲಿ 1,400 ಜನಸಂಖ್ಯೆಯಿದೆ. ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸುವ ಸಲುವಾಗಿ ಎರಡು ವರ್ಷಗಳ ಹಿಂದೆ ಎರಡು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಯಿತು. ಆದರೆ ಅವು ಕಾರ್ಯಾರಂಭ ಮಾಡದ ಕಾರಣ ಜನರಿಗೆ ಶುದ್ಧ ನೀರು ಮರೀಚಿಕೆಯಾಗಿಯೆ ಉಳಿದಿದೆ.

ಗ್ರಾಮದಲ್ಲಿ ಒಟ್ಟು ನಾಲ್ಕು ಕೈ ಪಂಪ್‌ಗಳಿದ್ದು, ಅದರಲ್ಲಿ ಕೇವಲ ಒಂದರಲ್ಲಿ ಮಾತ್ರ ಕುಡಿಯಲು ಯೋಗ್ಯವಾದ ನೀರು ದೊರೆಯುತ್ತದೆ. ಇನ್ನುಳಿದ ಮೂರು ಕೊಳವೆ ಬಾವಿಗಳಲ್ಲಿ ಕೇವಲ ದಿನ ಬಳಕೆಗೆ ಉಪಯೋಗುವಂತಹ ನೀರು ಬರುತ್ತವೆ. ಒಂದು ವೇಳೆ ಅದು ಕೆಟ್ಟು ನಿಂತರೆ ಜನರಿಗೆ ಕುಡಿಯಲು ಶುದ್ಧ ನೀರು ದೂರದ ಮಾತು ಎನ್ನುವಂತಾಗಿದೆ. ಇದರಿಂದಾಗಿ ರಣ ಬೇಸಿಗೆಯಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಮದ ಹೊರ ವಲಯದಲ್ಲಿರುವ ಮೈಲಾರಲಿಂಗೇಶ್ವರ ಮಠದ ಹತ್ತಿರವಿರುವ ಕೈ ಪಂಪ್‌ನಿಂದ ನೀರು ಪಡೆಯಲು ತೆರಳುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮಸ್ಥರ ಬಗ್ಗೆ ದಿವ್ಯ ನಿರ್ಲಕ್ಷ್ಯ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕಪಡಿಸುತ್ತಾರೆ ಇಲ್ಲಿನ ಜನರು.

ADVERTISEMENT

ಪ್ರತಿ ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಪ್ರತಿ ಹಳ್ಳಿಗೂ ಕೂಡ ಶುದ್ಧ ನೀರಿನ ಘಟಕವನ್ನು ನಿರ್ಮಿಸುತ್ತಿದೆ. ಆದರೆ ಈ ಗ್ರಾಮದಲ್ಲಿ ನಿರ್ಮಿಸಿದ 2 ಶುದ್ಧ ನೀರಿನ ಘಟಕಗಳು ಉದ್ಘಾಟನೆಯಾಗದೇ ವಸ್ತು ಸಂಗ್ರಹಾಲಯದಲ್ಲಿ ಇಟ್ಟ ಮಾದರಿಗಳಾಗಿವೆ.

ಸಂಬಂಧಪಟ್ಟವರು ಆದಷ್ಟು ಬೇಗ ಹಾಳಾದ ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.

*
ಟಾಟಾ ಕಂಪನಿಯವರು ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಆರಂಭಿಸುವಂತೆ ಮನವಿ ಸಲ್ಲಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅದನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು.
-ರಾಜು ಮೇಟಿ, ಪಿಡಿಒ, ಕಿಲ್ಲನಕೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.