ADVERTISEMENT

ಯಾದಗಿರಿ ಜಿಲ್ಲೆಯ 39 ಗ್ರಾಮಗಳಲ್ಲಿ ಜಲಕ್ಷಾಮ

39 ಗ್ರಾಮಗಳಿಗೆ 50 ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು

ಬಿ.ಜಿ.ಪ್ರವೀಣಕುಮಾರ
Published 9 ಮೇ 2025, 8:20 IST
Last Updated 9 ಮೇ 2025, 8:20 IST
ವಡಗೇರಾ ತಾಲ್ಲೂಕಿನ ಗಡ್ಡೆಸೂಗೂರ ಗ್ರಾಮದಲ್ಲಿ ಜನರು ಕೈ ಪಂಪ್ ಮೂಲಕ ನೀರು ತೆಗೆದುಕೊಂಡು ಹೋಗುತ್ತಿರುವುದು
ವಡಗೇರಾ ತಾಲ್ಲೂಕಿನ ಗಡ್ಡೆಸೂಗೂರ ಗ್ರಾಮದಲ್ಲಿ ಜನರು ಕೈ ಪಂಪ್ ಮೂಲಕ ನೀರು ತೆಗೆದುಕೊಂಡು ಹೋಗುತ್ತಿರುವುದು   

ಯಾದಗಿರಿ:‌ ಬಿರು ಬೇಸಿಗೆಯಲ್ಲಿ ಗಿರಿ ಜಿಲ್ಲೆಯ 39 ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗಿದೆ.

ಸರ್ಕಾರಿ ಜಲಮೂಲಗಳು ಕಡಿಮೆ ಆಗಿರುವುದರಿಂದ ಖಾಸಗಿ ಕೊಳವೆಬಾವಿಗಳ ಮೊರೆ ಹೋಗಲಾಗಿದೆ. ಜಿಲ್ಲೆಯ 39 ಗ್ರಾಮಗಳಿಗೆ 50 ಖಾಸಗಿ ಕೊಳವೆ ಬಾವಿ ಹಾಗೂ ಒಂದು ತೆರೆದ ಬಾವಿಯನ್ನು ಬಾಡಿಗೆ ಪಡೆದು ಗ್ರಾಮೀಣ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಮಾರ್ಚ್‌ ತಿಂಗಳಲ್ಲಿ 22 ಹಳ್ಳಿಗಳು, ಏಪ್ರಿಲ್‌ 31 ಹಳ್ಳಿಗಳು, ಮೇ ತಿಂಗಳಲ್ಲಿ 38 ಸೇರಿದಂತೆ ಒಟ್ಟಾರೆ 91 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳೆಂದು ಅಂದಾಜಿಸಲಾಗಿತ್ತು. ಈಗ ಬೇಸಿಗೆ ತೀವ್ರತೆ ಜನತೆಯನ್ನು ಕಾಡುತ್ತಿದೆ.

ADVERTISEMENT

ಬೇಸಿಗೆ ಆರಂಭದಲ್ಲಿ ಜಿಲ್ಲೆಯ ಸುರಪುರ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಟ್ಯಾಂಕರ್‌, 9 ಕಡೆ ಬಾಡಿಗೆ ಕೊಳವೆಬಾವಿ ಮೂಲಕ ಕುಡಿಯುವ ಸರಬರಾಜು ಮಾಡಲಾಗುತ್ತಿತ್ತು. ಆದರೆ, ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚಳವಾಗಿದೆ.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿಗಾಗಿ ಕೊಡ ಹಿಡಿದು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ. ಕೊಳವೆಬಾವಿಯಲ್ಲಿ ನೀರು ಬಾರದ ಕಾರಣ ಕೆಲ ಕಡೆ ಕಂಪ್‌ನಿಂದ ನೀರು ಪಡೆಯಲಾಗುತ್ತಿದೆ. ಈ ಹಿಂದೇ ಕೈಪಂಪ್‌ ಕೊಳವೆಬಾವಿಯನ್ನು ಕೇಳುವವರೇ ಇಲ್ಲದಂತಾಗಿತ್ತು. ಈಗ ಆ ನೀರು ಬಳಕೆಗೆ ಉಪಯೋಗವಾಗುತ್ತಿದೆ.

ಅಂತರ್ಜಲ ಕುಸಿತ: ಜಿಲ್ಲೆಯಲ್ಲಿ ಸೂರ್ಯನ ಪ್ರತಾಪ ಏರುಗತಿಯಲ್ಲಿದೆ. ಇದರಿಂದ ಕೊಳವೆ ಬಾವಿಗಳ ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ. ಹಲವೆಡೆ ಗ್ರಾಮೀಣ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತಾಗಿದೆ.

ಕೆಲ ದಿನಗಳ ಹಿಂದೆ ಜಿಲ್ಲೆಯ ಹಲವೆಡೆ ಸಮರ್ಪಕ ನೀರು ಸರಬರಾಜಿಗಾಗಿ ಪ್ರತಿಭಟನೆ ಮಾಡಲಾಗಿತ್ತು. ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡ್ಡೆಸೂಗೂರದಲ್ಲಿ ಹೊಳೆಯ ನೀರಿಗೆ ಅಳವಡಿಸಲಾಗಿದ್ದ, ಪೈಪ್‌ಲೈನ್ ಹೊಡೆದು ಜನರೇ ಹೊಸ ಸಂಪರ್ಕ ಪಡೆದುಕೊಂಡಿದ್ದ ಘಟನೆ ನಡೆದಿತ್ತು.

ಪ್ರತಿ ವರ್ಷದಂತೆ ಈ ಬಾರಿಯೂ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದಿಂದ ಸಂಗ್ರಹಿಸಲಾಗಿದ್ದು, 91 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಅಂದಾಜಿಸಲಾಗಿತ್ತು.

ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ನೀರು ಹೊತ್ತು ತರುತ್ತಿರುವ ಗ್ರಾಮಸ್ಥರು
ಸದ್ಯ 18 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆ ಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆಗೆ ಸಹಾಯವಾಣಿಯೂ ಆರಂಭಿಸಲಾಗಿದೆ.
–ಮಹಾದೇವ ಬಾಬಳಗಿ, ಕಾರ್ಯನಿರ್ವಾಹಕ ಅಧಿಕಾರಿ ಯಾದಗಿರಿ ತಾಲ್ಲೂಕು ಪಂಚಾಯಿತಿ
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಗ್ರಾಮದ ಪಂಚಾಯಿತಿಗೆ ಮುಳ್ಳುಬೇಲಿ ಹಚ್ಚಿ ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆ ಹರಿಸಿಲ್ಲ. ಇಂಥವರಿಂದ ನಾವು ಸಮಸ್ಯೆ ಎದುರಿಸುತ್ತಿದ್ದೇವೆ.
– ಶಾಂತಮ್ಮ ನಾಟೇಕರ್, ಹಾಲಗೇರಾ ನಿವಾಸಿ

ಗುರುಮಠಕಲ್‌ ಮತಕ್ಷೇತ್ರದಲ್ಲಿ 18 ಗ್ರಾಮ

ಗುರುಮಠಕಲ್‌ ಮತಕ್ಷೇತ್ರ ವ್ಯಾಪ್ತಿಯ 18 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ. ಮೊಟ್ನಳ್ಳಿ ಬಳಿಚಕ್ರ ಅಲ್ಲಿಪುರ ಆ‌ರ್.ಹೊಸಳ್ಳಿ ಸಣ್ಣ ತಾಂಡಾ ಸೌದಗಾರ ತಾಂಡಾ ಹತ್ತಿಕುಣಿ ಮಲ್ಹಾರ ಸಣ್ಣ ತಾಂಡಾ ಹೊರುಂಚಾ ವಾರಿ ತಾಂಡಾ ಮುಂಡರಗಿ ಬೆಳಿಗೇರಾ ಅಶೋಕನಗರ ಬಾಡಿಯಾಳ ಮುನಗಾಲ ಗ್ರಾಮ ಸೈದಾಪುರ ವರ್ಕನಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

ಜಿಲ್ಲೆಯಲ್ಲಿ 91 ಸಮಸ್ಯಾತ್ಮಕ ಗ್ರಾಮಗಳು

ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳ ಮಾಹಿತಿ ಜಿಲ್ಲಾ ಪಂಚಾಯಿತಿ ಸಂಗ್ರಹಿಸಿದೆ. ಶಹಾಪುರ ತಾಲ್ಲೂಕಿನ 16 ವಡಗೇರಾ ತಾಲ್ಲೂಕಿನ 11 ಯಾದಗಿರಿ ತಾಲ್ಲೂಕಿನ 08 ಗುರುಮಠಕಲ್ ತಾಲ್ಲೂಕಿನ 19 ಸುರಪುರ ತಾಲ್ಲೂಕಿನ 16 ಮತ್ತು ಹುಣಸಗಿ ತಾಲ್ಲೂಕಿನ 21 ಹಳ್ಳಿಗಳನ್ನು ಕುಡಿಯವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ.‌ ಆದರೆ ಅದಕ್ಕಿಂತ ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.