ADVERTISEMENT

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ರಾಜಾ ವೇಣುಗೋಪಾಲನಾಯಕ ತಾಕೀತು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:19 IST
Last Updated 8 ಅಕ್ಟೋಬರ್ 2025, 5:19 IST
ಸುರಪುರ ನಗರದ ನಿರಂತರ ನೀರು ಪೂರೈಕೆಯ ಕಾಮಗಾರಿಯ ನೀಲನಕ್ಷೆಯನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಪರಿಶೀಲಿಸಿದರು
ಸುರಪುರ ನಗರದ ನಿರಂತರ ನೀರು ಪೂರೈಕೆಯ ಕಾಮಗಾರಿಯ ನೀಲನಕ್ಷೆಯನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಪರಿಶೀಲಿಸಿದರು   

ಸುರಪುರ: ‘ನಗರದ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಸಮರ್ಪಕವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ತಾಕೀತು ಮಾಡಿದರು.

ತಾಲ್ಲೂಕಿನ ದೇವಾಪುರ ಗ್ರಾಮದ ಹತ್ತಿರ ನೀರಿನ ಕೊಳವೆ ಮಾರ್ಗ ದುರಸ್ತಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಇಲ್ಲಿ ನೀರಿನ ಒತ್ತಡ ಹೆಚ್ಚಾಗಿದೆ. ಕಾಮಗಾರಿ ಹೇಳಿಕೊಳ್ಳುವಷ್ಟು ಸರಿಯಾಗಿಲ್ಲದ ಕಾರಣ ಈ ಕೊಳವೆ ಮಾರ್ಗ ಒಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ನೀರಿನ ಒತ್ತಡಕ್ಕೆ ಅನುಗುಣವಾಗಿ ನೀಲನಕ್ಷೆ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿತ್ತು. ಅದೇ ರೀತಿ ಮಾಡಿರುವುದಾಗಿ ನೀವು ಹೇಳುತ್ತಿದ್ದೀರಿ ಕಾರಣ ಡಿಸೈನ್ ತಂದು ನನಗೆ ತೋರಿಸಬೇಕು. ಕಾಮಗಾರಿ ಸೂಕ್ತವಾಗಿ ನಿರ್ವಹಿಸಿ ಮತ್ತೆ ಕೊಳವೆ ಮಾರ್ಗ ಒಡೆಯದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಮುಂದೆ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿ ಹಳ್ಳ ತುಂಬಿ ಹರಿದರೆ ಮತ್ತೆ ಪೈಪ್ ಲೈನ್ ಕಳಚುವ ಸಂಭವವಿದೆ. ಹೀಗಾಗಿ ಹಳ್ಳಕ್ಕೆ ಪಿಲ್ಲರ್‌ಗಳನ್ನು ಅಳವಡಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ಎಇ ಶಂಕರಗೌಡ ಕಾಮಗಾರಿ ಕುರಿತು ಮಾಹಿತಿ ನೀಡಿದರು.

ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ, ಎಇಇ ಶಾಂತಪ್ಪ ಹೂಸೂರು, ಪೌರಾಯುಕ್ತ ಬಸವರಾಜ ಟಣಕೇದಾರ, ನಗರಸಭೆ ಸದಸ್ಯರು, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಸೇರಿ ಕಾಂಗ್ರೆಸ್ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.