ADVERTISEMENT

ಯಾದಗಿರಿಯ ‘ಮಹಾತ್ಮ’ ಮಾರುಕಟ್ಟೆಗೆ ಮುಕ್ತಿ ಯಾವಾಗ?

5 ತಿಂಗಳಿಂದ ಮುಚ್ಚಿರುವ ತರಕಾರಿ ಮಾರುಕಟ್ಟೆ, ತೆಗೆಯಲು ಸಿಗದ ಅನುಮತಿ

ಬಿ.ಜಿ.ಪ್ರವೀಣಕುಮಾರ
Published 31 ಆಗಸ್ಟ್ 2020, 19:30 IST
Last Updated 31 ಆಗಸ್ಟ್ 2020, 19:30 IST
ಯಾದಗಿರಿಯ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆ ಹಾಳಾಗಿದೆಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿಯ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆ ಹಾಳಾಗಿದೆಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಕಳೆದ ಐದು ತಿಂಗಳಿಂದ ನಗರದ ಹೃದಯಭಾಗದಲ್ಲಿರುವ ಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆ ಬಂದ್‌ ಆಗಿದ್ದು, ಇನ್ನೂ ತೆಗೆದಿಲ್ಲ. ಬೀದಿಗೆ ಬಂದು ವ್ಯಾಪಾರಿಗಳು ತರಕಾರಿ ಮಾರಾಟದಲ್ಲಿ ನಿರತರಾಗಿದ್ದಾರೆ.

ಕೊರೊನಾ ಲಾಕ್‌ಡೌನ್‌ ಕಾರಣದಿಂದ ಮಾರ್ಚ್‌ 24ರಂದು ತರಕಾರಿ ಮಾರುಕಟ್ಟೆಯನ್ನು ಮುಚ್ಚಲಾಗಿದ್ದು, ಬಹುತೇಕ ವ್ಯಾಪಾರಿಗಳು ಈರುಳ್ಳಿ, ಇನ್ನಿತರ ತರಕಾರಿಯನ್ನು ಅಲ್ಲೆ ಬಿಟ್ಟುಬಂದಿದ್ದಾರೆ. ಈಗ ಅವೆಲ್ಲ ಕೊಳೆತು ಹೋಗಿದ್ದು, ಈರುಳ್ಳಿ ಮೊಳಕೆ ಬಂದಿದೆ.

‘ಮಾರ್ಚ್‌ 24ರಂದು ಬಂದ ನಗರಸಭೆ ಅಧಿಕಾರಿಗಳು ಮಾರುಕಟ್ಟೆ ಬಂದ್‌ ಖಾಲಿ ಮಾಡಲು ತಿಳಿಸಿದರು. ಕೇವಲ ಅರ್ಧಗಂಟೆ ಸಮಯ ನೀಡಿದ್ದರು. ಒಂದು ದಿನ ಸಮಯ ಕೇಳಿದರೂ ಬಿಡಿಲಿಲ್ಲ. ಹೀಗಾಗಿ ಕೆಲ ತರಕಾರಿ, ಚೀಲ, ವಿವಿಧ ಸಾಮಗ್ರಿಗಳನ್ನು ಅಲ್ಲೆ ಬಿಟ್ಟು ಬರಬೇಕಾಗಿತ್ತು. ಮಾರುಕಟ್ಟೆ ತೆರೆಯಲು ಎರಡು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎನ್ನುತ್ತಾರೆಮಹಾತ್ಮಗಾಂಧಿ ತರಕಾರಿ ಮಾರುಕಟ್ಟೆ ಗೌರಾವಾಧ್ಯಕ್ಷ ಮಲ್ಲಯ್ಯ ದಾಸನ್‌.

ADVERTISEMENT

ಬೀದಿಗೆ ಬಂದ ವ್ಯಾಪಾರ: ಮುಖ್ಯ ಮಾರುಕಟ್ಟೆಯನ್ನು ಬಂದ್ ಮಾಡಿದ್ದರಿಂದ ವ್ಯಾಪಾರಿಗಳು ಬೀದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ನಗರದ ಗ್ರಾಮೀಣ ಪೊಲೀಸ್‌ ಠಾಣೆಯ ಹಿಂಭಾಗ ಖಾಲಿ ಜಾಗದಲ್ಲಿ ಸಗಟು ವ್ಯಾಪಾರ ನಡೆಯುತ್ತದೆ. ಬೆಳಿಗ್ಗೆ4ರಿಂದ9 ಗಂಟೆಗೆ ಎಲ್ಲ ವ್ಯಾಪಾರ ಮುಗಿಯುತ್ತದೆ. ಹೀಗಾಗಿ ತರಕಾರಿ ವ್ಯಾಪಾರವನ್ನೆ ನೆಚ್ಚಿಕೊಂಡ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಎಲ್ಲಿಯಾದರೂ ಒಂದು ಕಡೆ ಮಾರುಕಟ್ಟೆ ಇರುಬೇಕು. ಅದು ಬಿಟ್ಟು ಅಲ್ಲೊಂದು, ಇಲ್ಲೊಂದು ಮಾಡಿದ್ದಾರೆ. ಮಳೆ ಬಂದರೆ ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿನವಾಜ್ ಖಾದ್ರಿ.

‘ಹೊಸ ತರಕಾರಿ ಕಾಂಪ್ಲೆಕ್ಸ್ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ ಇನ್ನೂ ಕೈಕೂಡಿಲ್ಲ. ಚಿಲ್ಲರೆ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ’ ಎಂದು ತರಕಾರಿ ವ್ಯಾಪಾರಿ ಗುಲಾಮ್ ದಸ್ತಿ ಹೇಳುತ್ತಾರೆ.

ನಗರದಲ್ಲಿ 7 ಕಡೆ ತಾತ್ಕಾಲಿಕ ಮಾರುಕಟ್ಟೆ: ಲಾಕ್‌ಡೌನ್‌ ವೇಳೆ ನಗರದ ಏಳು ಕಡೆ ತಾತ್ಕಾಲಿಕ ಮಾರುಕಟ್ಟೆಗಳನ್ನು ತೆಗೆಯಲಾಗಿತ್ತು.ಲಕ್ಷ್ಮಿ ರೈಸ್‌ ಮಿಲ್ ಹತ್ತಿಕುಣಿ ರಸ್ತೆ, ಸತೀಶ್‌ ವಾಣಿಜ್ಯ ಮಳಿಗೆ, ಚನ್ನಾರೆಡ್ಡಿ ಲೇಔಟ್‌, ಅಜೀಜ್‌ ಕಾಲೋನಿ ಉದ್ಯಾನ ಹೊಸಳ್ಳಿ ಕ್ರಾಸ್‌, ಚಿರಂಜೀವಿ ಶಾಲೆ ಹತ್ತಿರ, ಪದವಿ ಕಾಲೇಜು ಹತ್ತಿರ, ಚಾಮಾ ಲೇಔಟ್‌ ಕಡೆ ತಾತ್ಕಾಲಿಕ ಮಾರುಕಟ್ಟೆ ಸ್ಥಾಪನೆಯಾಗಿತ್ತು.ಚಾಮಾ ಲೇಔಟ್‌ನಿಂದ ಸ್ಥಳಾಂತರಿಸಿಗ್ರಾಮೀಣ ಪೊಲೀಸ್‌ ಠಾಣೆ ಹಿಂಭಾಗದಲ್ಲಿ ತಾತ್ಕಾಲಿಕ ತರಕಾರಿ ಮಾರುಕಟ್ಟೆ ನಡೆಯುತ್ತಿದೆ. ಈಗ ಚಿರಂಜೀವಿ ಶಾಲೆ ಪಕ್ಕ, ಪದವಿ ಮಹಾವಿದ್ಯಾಲಯದಲ್ಲಿಅನೇಕರು ತರಕಾರಿ ಅಂಗಡಿಗಳನ್ನು ತೆರವುಗೊಳಿಸಿಕೊಂಡು ಹೋಗಿದ್ದಾರೆ.

‘ಹೊಸ ಮಾರುಕಟ್ಟೆ ನಿರ್ಮಾಣಕ್ಕೆ₹3.50 ಕೋಟಿ ಅನುದಾನವಿದೆ. ಆದರೆ, 10 ವರ್ಷಗಳಿಂದ ಇನ್ನೂ ಬಗೆಹರಿದಿಲ್ಲ. ಇದರಿಂದ ಸಮಸ್ಯೆ ಆಗಿದೆ. ವನಕೇರಿ ಲೇ ಔಟ್‌ನಲ್ಲಿ ₹10 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಟಿನ್‌ ಶೆಡ್‌ ಮತ್ತು ಪ್ರಾಗಂಣ ಮಾಡಿ ವ್ಯಾಪಾರಕ್ಕೆ ಅನುಮತಿಸಲಾಗುವುದು. ನಂತರ ಕಟ್ಟಡ ನಿರ್ಮಿಸಿ ವ್ಯಾಪಾರಿಗಳಿಗೆ ನೀಡಲಾಗುವುದು’ ಎಂದುಪ್ರಭಾರಿ ನಗರಸಭೆ ಪೌರಾಯುಕ್ತಬಕ್ಕಪ್ಪ ಹೊಸಮನಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.