ADVERTISEMENT

ಕೃಷ್ಣಾ ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ: ಪತಿಯ ಆರೋಪ

ಮೊಹರಂ ಆಚರಣೆಗೆ ತವರು ಮನೆಯಿಂದ ಮರಳುತ್ತಿದ್ದ ವೇಳೆ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:09 IST
Last Updated 13 ಜುಲೈ 2025, 3:09 IST
ವಡಗೇರಾ ತಾಲ್ಲೂಕಿನ ಅಗ್ನಿಹಾಳ ಗ್ರಾಮದ ಯುವಕರು ಹಗ್ಗದ ಸಹಾಯದಿಂದ ತಾತಪ್ಪ ಅವರನ್ನು ರಕ್ಷಿಸಿದ ನೋಟ
ವಡಗೇರಾ ತಾಲ್ಲೂಕಿನ ಅಗ್ನಿಹಾಳ ಗ್ರಾಮದ ಯುವಕರು ಹಗ್ಗದ ಸಹಾಯದಿಂದ ತಾತಪ್ಪ ಅವರನ್ನು ರಕ್ಷಿಸಿದ ನೋಟ   

ವಡಗೇರಾ: ‘ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದಾಗ ತನ್ನ ಪತ್ನಿಯೇ ನದಿಗೆ ತಳ್ಳಿದ್ದಾಳೆ’ ಎಂದು ಪತಿ ಆರೋಪಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂಬಂಧ 41 ಸೆಕೆಂಡ್‌ ಹಾಗೂ 6 ನಿಮಿಷ 50 ಸೆಕೆಂಡ್‌ಗಳ ಎರಡು ವಿಡಿಯೊಗಳು ಶುಕ್ರವಾರ ಮಧ್ಯಾಹ್ನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಜೊತೆಗೆ ‘ಗಂಡ– ಹೆಂಡತಿ ರಥದ ಎರಡು ಚಕ್ರಗಳಿದ್ದಂತೆ. ಈ ಚಕ್ರಗಳಲ್ಲಿ ಹೊಂದಾಣಿಕೆ ಇರದಿದ್ದರೆ ಇಂಥ ಅನಾಹುತವಾಗುತ್ತದೆ’ ಎಂದು ಜನ ವಿಡಿಯೊ ನೋಡಿ ವಿಶ್ಲೇಷಿಸುತ್ತಿದ್ದಾರೆ.

ಏನಿದು ಘಟನೆ: ರಾಯಚೂರು ಜಿಲ್ಲೆಯ ದೇವಸೂಗುರಿನ ತಾತಪ್ಪ (ಬಸವರಾಜ) ನರಸಪ್ಪ (24) ಎಂಬುವರ ಜೊತೆಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ದೇವರಗಡ್ಡೆಯ ಗದ್ದೆಮ್ಮ (20) ಎಂಬುವರ ವಿವಾಹ ಶಕ್ತಿನಗರದ ಬಸವ ಕಲ್ಯಾಣ ಮಂಟಪ್ಪದಲ್ಲಿ 2025ರ ಏಪ್ರಿಲ್‌ 18ರಂದು ನಡೆದಿತ್ತು. ಮದುವೆ ನಡೆದು ಶುಕ್ರವಾರಕ್ಕೆ(ಜುಲೈ 11) 2 ತಿಂಗಳು 21 ದಿನಗಳಾಗಿವೆ.

ADVERTISEMENT

ಮೊಹರಂಗೆ ಬಂದಿದ್ದ ಪತ್ನಿ

ಮೊಹರಂ ಆಚರಣೆಗಾಗಿ ಗದ್ದೆಮ್ಮ ತನ್ನ ತವರು ಮನೆಯಾದ ದೇವರಗಡ್ಡೆ ಗ್ರಾಮಕ್ಕೆ ಹೋಗಿದ್ದರು. ತನ್ನ ಹೆಂಡತಿಯನ್ನು ಕರೆಯಲು ಗಂಡ ತಾತಪ್ಪ ಬುಧವಾರ ಮಾವನ ಮನೆಗೆ ಹೋಗಿದ್ದ. ಆಗ ಹೆಂಡತಿ ಮನೆಯವರು ‘ಗುರುವಾರ ಹುಣ್ಣಿಮೆ ಇದೆ. ಹೀಗಾಗಿ ಶುಕ್ರವಾರ ನಿನ್ನ ಹೆಂಡತಿಯನ್ನು ಕರೆದುಕೊಂಡು ಹೋಗು’ ಎಂದಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ತಾತಪ್ಪ ಶುಕ್ರವಾರ ಬೆಳಿಗ್ಗೆ ಪತ್ನಿಯೊಂದಿಗೆ ದೇವರಗಡ್ಡೆ ಗ್ರಾಮದಿಂದ ಗದ್ದೆಮ್ಮ ಅವರ ಅಕ್ಕನ ಊರಾದ ಶಿವಪುರಕ್ಕೆ ಗ್ರಾಮ ಹೋಗಿದ್ದಾರೆ. ಅಲ್ಲಿ ಗದ್ದೆಮ್ಮ ಅಕ್ಕನ ಜತೆ ಒಂದಿಷ್ಟು ಹೊತ್ತು  ಮಾತನಾಡಿ ಊರಿನತ್ತ ಹೊರಟ್ಟಿದ್ದಾರೆ.

ದಾರಿ ನಡುವೆ ವಡಗೇರಾ ತಾಲ್ಲೂಕಿನ ಗುಂಡ್ಲೂರ ಹೊರ ಭಾಗದ ಗುರ್ಜಾಪುರದ ಬಳಿಯ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರೀಜ್ ಕಂ ಬ್ಯಾರೇಜ್ ಹತ್ತಿರ ದಾಟುವಾಗ ‘ಫೋಟೊ ತೆಗೆದುಕೊಳ್ಳೊಣ’ ಎಂದಿದ್ದಾರೆ. ಆಗ ತಾತಪ್ಪ ದ್ವಿಚಕ್ರ ವಾಹನ ನಿಲ್ಲಿಸಿದ್ದಾರೆ.

‘ಫೋಟೊ ತೆಗೆಸಿಕೊಳ್ಳಲು ಬ್ಯಾರೇಜ್‌ನ ಕಬ್ಬಿಣದ ತಡೆಗೋಡೆ ಹಿಂದೆ ಹೋದ ಸಮಯದಲ್ಲಿ ಹೆಂಡತಿ ಗದ್ದೆಮ್ಮ ನೂಕಿದ್ದಾರೆ. ನದಿಗೆ ಬಿದ್ದ ತಾತಪ್ಪ ಈಜಿ ಕಲ್ಲು ಬಂಡೆ ಏರಿ ರಕ್ಷಣೆಗಾಗಿ ಕೂಗಿದ್ದಾರೆ. ಆಗ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ’ ಎನ್ನಲಾಗಿದೆ. 

ಸ್ಥಳೀಯರ ನೆರವಿನಿಂದ ಸೇತುವೆ ಮೇಲೇರಿ ಬಂದ ಬಳಿಕ ತಾತಪ್ಪ ‘ಪತ್ನಿಯೇ ನದಿಗೆ ನೂಕಿದ್ದಾಳೆ’ ಎಂದು ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿದೆ.

‘ಸೇತುವೆಯ ಮೇಲೆ ಬಂದ ತಾತಪ್ಪ ಹೆಂಡತಿಯ ಕೈಯಲ್ಲಿ ಇದ್ದ ಮೊಬೈಲ್ ಫೋನ್‌ ತೆಗೆದುಕೊಂಡು ತನ್ನ ಅಣ್ಣನಿಗೆ ಹಾಗೂ ತಾಯಿಗೆ ಹೆಂಡತಿಗೆ ಕೊಲೆಗೆ ಯತ್ನಿಸಿದ ಮಾಹಿತಿ ನೀಡಿದ. ಬಳಿ ಅಲ್ಲಿ ಸೇರಿದ್ದ ಯುವಕರು ಸಮಾಧಾನ ಪಡಿಸಿ ಊರಿಗೆ ಕಳುಹಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ನಮ್ಮ ತಾಯಿಯ ತಮ್ಮನ ಮಗಳೆ ಗದ್ದೆಮ್ಮ. ಆಕೆ ಹೀಗೆ ಏಕೆ ಮಾಡಿದ್ದಾಳೆ ಎಂಬುದು ಇನ್ನೂವರೆಗೆ ನಮಗೆ ಗೊತ್ತಾಗಿಲ್ಲ. ಮನೆಯಲ್ಲಿ ಹಿರಿಯರೆಲ್ಲ ಸೇರಿ ಘಟನೆ ಬಗೆಗೆ ವಿಚಾರಿಸುತ್ತಿದ್ದಾರೆ.
– ರಾಮನಗೌಡ ತಾತಪ್ಪನ, ಸಹೋದರ

ಅಗ್ನಿಹಾಳ ಯುವಕರಿಂದ ರಕ್ಷಣೆ

ನದಿಗೆ ಬಿದ್ದಿದ್ದ ತಾತಾಪ್ಪ ಅವರನ್ನು ರಕ್ಷಿಸಿದ್ದು ಅಗ್ನಿಹಾಳ ಗ್ರಾಮದ ಯುವಕರು. ಅವರೆಲ್ಲ ಮೀನು ಹಿಡಿಯಲು ಸೇತುವೆಯ ಮೇಲಿಂದ ಹೋಗುವಾಗ ‘ಬ್ರೋ ನನ್ನನ್ನು ಕಾಪಾಡಿ ಆಕೆಯನ್ನು ಬಿಡಬೇಡಿ’ ಎಂದು ತಾತಪ್ಪ ಕೂಗುತ್ತಿದ್ದ’ ಎನ್ನಲಾಗಿದೆ. ಆಗ ಯುವಕರಾದ ಮಾಲಪ್ಪ ನಿಂಗಪ್ಪ ಚನ್ನಬಸವ ಮಹೇಶ ನಾಗರಾಜ. ಅರಷಿಣಗಿ ಗ್ರಾಮದ ಬೊಲೆರೊ ವಾಹನದ ಚಾಲಕ ರಾಜು ಎಲ್ಲರೂ ಸೇರಿ ಬೊಲೆರೊ ವಾಹನದಲ್ಲಿದ್ದ ಹಗ್ಗದ ಸಹಾಯದಿಂದ ತಾತಪ್ಪ ಅವರನ್ನು ರಕ್ಷಿಸಿದ್ದಾರೆ. ನದಿಗೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಹಾಳ ಗ್ರಾಮದ ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅನುಮಾನ ಹುಟ್ಟಿಸಿದ ಪತ್ನಿ ವರ್ತನೆ

ಪತಿ ತಾತಪ್ಪ ನದಿಗೆ ಬಿದ್ದಾಗ ಸೇತುವೆ ಮೇಲಿದ್ದ ಪತ್ನಿ ಗದ್ದೆಮ್ಮ ಅವರ ವರ್ತನೆ ಬಗೆಗೆ ಆಕ್ಷೇಪ ವ್ಯಕ್ತವಾಗಿದೆ. ‘ಗಂಡ ನದಿಯಲ್ಲಿ ಬಿದ್ದು ರಕ್ಷಣೆ ಕೂಗುತಿದ್ದರೆ ಹೆಂಡತಿಯಾದ ಗದ್ದೆಮ್ಮ ತನ್ನ ಅಕ್ಕ ಹಾಗೂ ತವರು ಮನೆಗೆ ವಿಡಿಯೊ ಕರೆ ಮಾಡಿ ನನ್ನ ಗಂಡ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆಂದು ಹೇಳಿದ್ದಾರೆ’ ಎನ್ನಲಾಗಿದೆ.

‘ಜೊತೆಗಿದ್ದವರು ಯಾರಾದರೂ ನದಿಗೆ ಬಿದ್ದು ಅಪಾಯಕ್ಕೆ ಸಿಲುಕಿದರೆ ನೆರವಿಗೆ ಮೊರೆಯಿಡುವುದು ಗಾಬರಿಯಾಗಿ ಅಳುವುದು ಸಾಮಾನ್ಯ. ಆದರೆ ಮಹಿಳೆಯು ಏನೂ ನಡೆದೇ ಇಲ್ಲ ಎಂಬಂತೆ ಸೇತುವೆ ಮೇಲೆ ನಿಂತಿದ್ದಾರೆ’ ಎಂದು ವಿಡಿಯೊ ನೋಡಿದ ಸಾರ್ವಜನಿಕರು ವಿಶ್ಲೇಷಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.