ADVERTISEMENT

ಯಾದಗಿರಿ: ವಿದ್ಯಾರ್ಥಿಗಳ ಜತೆ ಶಿಕ್ಷಕರಿಗೂ ಕಾರ್ಯಾಗಾರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ವಿನೂತನ ಹೆಜ್ಜೆ

ಬಿ.ಜಿ.ಪ್ರವೀಣಕುಮಾರ
Published 16 ಫೆಬ್ರುವರಿ 2025, 5:47 IST
Last Updated 16 ಫೆಬ್ರುವರಿ 2025, 5:47 IST
ಶಹಾಪುರ ತಾಲ್ಲೂಕಿನಲ್ಲಿ 2024–25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ನಡೆಯಿತು
ಶಹಾಪುರ ತಾಲ್ಲೂಕಿನಲ್ಲಿ 2024–25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ನಡೆಯಿತು   

ಯಾದಗಿರಿ: ಈ ಬಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಪ್ರಯತ್ನಿಸಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜತೆ ಶಿಕ್ಷಕರಿಗೂ  ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ತಿಂಗಳಿನ ಮೊದಲ ಶನಿವಾರ ಮತ್ತು ಮೂರನೇ ಶನಿವಾರ ಜಿಲ್ಲೆಯ ಶಿಕ್ಷಕರಿಗೆ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರ ನಡೆಸುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಹೇಗೆ ಗಳಿಸಬೇಕು ಎನ್ನುವ ಕುರಿತು ತಿಳಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರ ವೇದಿಕೆ ಸಹಯೋಗದಲ್ಲಿ 2024–25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಇತ್ತೀಚೆಗೆ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಡೆಸಲಾಗಿದೆ.

ADVERTISEMENT

ಕಾರ್ಯಾಗಾರದಲ್ಲಿ ಆಯಾ ತಾಲ್ಲೂಕಿನ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಗಣಿತ ಶಿಕ್ಷಕರು ಭಾಗವಹಿಸಿದ್ದರು. ಈ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲಾಗಿದೆ. ಇದು ಫಲ ನೀಡುವುದೇ ಎನ್ನುವುದು ಫಲಿತಾಂಶ ನಂತರ ತಿಳಿದುಬರಲಿದೆ.

ಶಹಾಪುರ ತಾಲ್ಲೂಕಿನಲ್ಲಿ 2024–25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ನಡೆಯಿತು
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತಮ ಫಲಿತಾಂಶಕ್ಕಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರಿಗೂ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಮಾಡಲಾಗಿದೆ
ಅಶೋಕ ಕುಮಾರ ಕೆಂಭಾವಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೌಢಶಾಲಾ ಶಿಕ್ಷಕರ ಸಂಘ ಯಾದಗಿರಿ

ಜಿಲ್ಲೆಯ ಅಧಿಕಾರಿಗಳಿಗೆ ದತ್ತು

ಶಿಕ್ಷಕರ ಜತೆ ಜಿಲ್ಲೆಯ ವಿವಿಧ ಅಧಿಕಾರಿಗಳಿಗೂ ಶಾಲೆಗಳನ್ನು ದತ್ತು ನೀಡಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾ ಹಂತದ ಪ್ರಗತಿ ಹೆಜ್ಜೆ ಎನ್ನುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ತಮಗೆ ವಹಿಸಿದ ಶಾಲೆಗಳಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸೂಕ್ತ ಮೇಲ್ವಿಚಾರಣೆ ಮಾಡಲು ಸೂಚಿಸಿದ್ದಾರೆ. ದತ್ತು ಪಡೆದ ಶಾಲೆಗಳಿಗೆ ವಾರಕ್ಕೆ ಕನಿಷ್ಠ ಎರಡು ಸಲ ಭೇಟಿ ನೀಡಲು ತಿಳಿಸುವ ಮೂಲಕ ಫಲಿತಾಂಶ ಸುಧಾರಣೆ ಬೇಕಾಗಿರುವ ಎಲ್ಲ ಅಂಶಗಳನ್ನು ಜಿಲ್ಲಾಡಳಿತವೂ ಕೈಗೊಂಡಿದೆ.

ಸ್ಥಳೀಯ ಸಂಸ್ಥೆಗಳಿಗೂ ಜವಾಬ್ದಾರಿ

ಗುಣಮಟ್ಟದ ಶಿಕ್ಷಣ ಮತ್ತು ಫಲಿತಾಂಶ ಉತ್ತಮ ಪಡಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರವನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಗ್ರಾಮ ಶಿಕ್ಷಣ ಪಡೆ ರಚನೆ ಮಾಡುವುದು ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವುದು ಆರರಿಂದ 18 ವರ್ಷದ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದು ಗ್ರಾಮದಲ್ಲಿ ವಾಸವಿದ್ದು ಶಾಲೆಗೆ ಗೈರಾಗುತ್ತಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹಾಜರು ಪಡಿಸುವಲ್ಲಿ ಸೂಕ್ತ ಕಾರ್ಯತಂತ್ರಗಳ ರೂಪಿಸುವುದು ವಲಸೆ ಹೋಗುತ್ತಿರುವ ಪಾಲಕರ ಮಕ್ಕಳಿಗೆ ಶಾಲೆಯಲ್ಲಿ ಉಳಿವಂತೆ ಮಾಡಲು ಸೂಕ್ತ ಕ್ರಮ ವಹಿಸುವುದು 6–14 ವರ್ಷದ ಎಲ್ಲಾ ಮಕ್ಕಳು ಶಾಲೆಯಲ್ಲಿ ದಾಖಲಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಬಯಲು ಶೌಚಮುಕ್ತ ಗ್ರಾಮ ಮಾದರಿಯಲ್ಲಿ ಪ್ರತಿ ಗ್ರಾಮವು 100 ರಷ್ಟು ದಾಖಲಾತಿ ಮತ್ತು ಹಾಜರಾತಿ ಹೊಂದಿರುವ ಗ್ರಾಮ ಒಂದು ಗ್ರಾಮವೆಂದು ಘೋಷಣೆ ಮಾಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.