ADVERTISEMENT

ಯಾದಗಿರಿ: ಕೋವಿಡ್‌ ಲಸಿಕೆಗಾಗಿ ನಗರಸಭೆಯಿಂದ ವಿನೂತನ ಪ್ರಯತ್ನ

ಅಧಿಕಾರಿ, ಸಿಬ್ಬಂದಿ ಮನೆ ಮನೆಗೆ ತೆರಳಿ ಹೂಗುಚ್ಛ ನೀಡಿ ಚುಚ್ಚುಮದ್ದು ಪಡೆಯಲು ಜಾಗೃತಿ

ಬಿ.ಜಿ.ಪ್ರವೀಣಕುಮಾರ
Published 14 ಜುಲೈ 2021, 19:30 IST
Last Updated 14 ಜುಲೈ 2021, 19:30 IST
ಯಾದಗಿರಿಯ ವಾರ್ಡ್ ನಂಬರ್ 17ರಲ್ಲಿ ಹೂಗುಚ್ಛ ನೀಡಿ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಲಾಯಿತು. ಪೌರಾಯುಕ್ತ ಬಿ.ಟಿ.ನಾಯಕ್, ಡಾ.ವಿನಿತಾ, ವಾರ್ಡ್‌ ಸದಸ್ಯ ಮಂಜುನಾಥ್ ಇದ್ದರು
ಯಾದಗಿರಿಯ ವಾರ್ಡ್ ನಂಬರ್ 17ರಲ್ಲಿ ಹೂಗುಚ್ಛ ನೀಡಿ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಲಾಯಿತು. ಪೌರಾಯುಕ್ತ ಬಿ.ಟಿ.ನಾಯಕ್, ಡಾ.ವಿನಿತಾ, ವಾರ್ಡ್‌ ಸದಸ್ಯ ಮಂಜುನಾಥ್ ಇದ್ದರು   

ಯಾದಗಿರಿ: ಸಾರ್ವಜನಿಕರು ಕೋವಿಡ್‌ ಲಸಿಕೆ ಪಡೆಯಲು ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿನೂತನ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಪ್ರತಿ ದಿನ ಒಂದೊಂದು ವಾರ್ಡ್‌ಗೆ ತೆರಳಿ ಕೋವಿಡ್‌ ಚುಚ್ಚುಮದ್ದು ಪಡೆಯಲು ಜಾಗೃತಿ ಮೂಡಿಸಿ ಲಸಿಕೆ ಹಾಕುತ್ತಿದ್ದಾರೆ.

ಹೂಗುಚ್ಛ ನೀಡಿ ಲಸಿಕೆ ಜಾಗೃತಿ: ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಶೌಚಾಲಯ ನಿರ್ಮಿಸಿಕೊಳ್ಳಲು ಸಾರ್ವಜನಿಕರಿಗೆ ಹೂಗುಚ್ಛ ನೀಡಿ ಜಾಗೃತಿ ಮೂಡಿಸಿದ್ದರು. ಅದರಂತೆ ಯಾದಗಿರಿ ನಗರಸಭೆ ಮತ್ತು ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಹೂಗುಚ್ಛ ನೀಡುತ್ತಿದ್ದಾರೆ. ಈ ಮೂಲಕ ಲಸಿಕೆ ಬಗ್ಗೆ ಅರಿವೂ ಮೂಡಿಸುವುದರ ಜೊತೆಗೆ ಚುಚ್ಚುಮದ್ದು ಪಡೆಯಲು ಪ್ರೇರೇಪಿಸುತ್ತಿದ್ದಾರೆ.

ADVERTISEMENT

ಎರಡು ತಂಡಗಳ ರಚನೆ: ನಗರಸಭೆಯ 31 ವಾರ್ಡ್‌ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. 1ರಿಂದ 16 ವಾರ್ಡ್‌ವರೆಗೆ ಒಂದು ತಂಡ, 17ರಿಂದ 31ರ ವರೆಗೆ ಮತ್ತೊಂದು ತಂಡ ರಚಿಸಲಾಗಿದೆ. ಈ ತಂಡಗಳಲ್ಲಿ 40ಕ್ಕೂ ಅಧಿಕ ಆರೋಗ್ಯ, ನಗರಸಭೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೇ 100ರಷ್ಟು ಲಸಿಕಾಕರಣ ಗುರಿ: ನಗರ ಪ್ರದೇಶದಲ್ಲಿ ಶೇ 100ರಷ್ಟು ಕೋವಿಡ್‌ ಲಸಿಕೆ ಹಾಕಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

‘18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಹೇಗೆ ಎಂದು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಭೆಯನ್ನು ನಡೆಸಿ ಮನೆ ಮನೆಗೆ ತೆರಳುವ ಯೋಜನೆ ಹಾಕಿಕೊಳ್ಳಲಾಗಿದೆ’ಎನ್ನುತ್ತಾರೆನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ್‌.

‘ಬುಧವಾರದಿಂದ ಮನೆ ಮನೆಗೆ ತೆರಳಿ ಲಸಿಕಾಕರಣಕ್ಕೆ ಚಾಲನೆ ನೀಡಲಾಗಿದ್ದು, 317 ಜನರು ಕೋವಿಡ್‌ ಚುಚ್ಚುಮದ್ದು ಪಡೆದಿದ್ದಾರೆ.ಈ ಹಿಂದೆ ನಗರದ ಪ್ರಮುಖ ಸ್ಥಳದಲ್ಲಿ ಲಸಿಕಾಕರಣ ಮಾಡಲಾಗುತ್ತಿತ್ತು. ಕೆಲವರು ಸ್ವಯಂ ಪ್ರೇರಿತವಾಗಿ ಬಂದಿದ್ದರು. ಇನ್ನೂ ಕೆಲವರು ಜಾಗೃತಿ ಕೊರತೆ, ಭಯದಿಂದ ಲಸಿಕೆ ಪಡೆದಿರಲಿಲ್ಲ. ಹೀಗಾಗಿ ಮನೆ ಮನೆಗೆ ನಮ್ಮ ಸಿಬ್ಬಂದಿ ಜೊತೆಗೂಡಿ ಆರೋಗ್ಯ ಇಲಾಖೆಯವರು ತೆರಳಿ ಲಸಿಕೆ ಹಾಕುತ್ತಿದ್ದಾರೆ. ಈಗಾಗಲೇ ಚುಚ್ಚುಮದ್ದು ಪಡೆದಿದ್ದರೆ ಮೊಬೈಲ್‌ ಸಂಖ್ಯೆ ಪಡೆದು ಕೋವಿನ್‌ ವೆಬ್‌ ಸೈಟ್‌ನಲ್ಲಿ ಪರಿಶೀಲಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಜಾಗೃತಿ ಮೂಡಿಸುತ್ತಿದ್ದರೂ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದು ಸರಿಯಲ್ಲ. ಮೂರನೇ ಅಲೆ ಬರುವುದರೊಳಗೆ ಎಲ್ಲರೂ ಚುಚ್ಚುಮದ್ದು ಪಡೆದರೆ ಅದನ್ನು ಎದುರಿಸಲು ಸಾಧ್ಯ. ಹೀಗಾಗಿ ಲಸಿಕಾಕರಣಕ್ಕೆ ಯಾರೂ ವಿರೋಧ ಮಾಡಬಾರದು. ನಗರಸಭೆಗೆ ಎಲ್ಲರೂ ಸಹಕಾರ ನೀಡಬೇಕು’ ಎನ್ನುತ್ತಾರೆ ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ್‌ ಪಾಟೀಲ ಅವರು.

*
ನಗರಸಭೆ ಮತ್ತು ಆರೋಗ್ಯ ಇಲಾಖೆಯಿಂದ ವಿನೂತನವಾಗಿ ವಾರ್ಡ್ ನಂಬರ್ 17ರಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಹೂಗುಚ್ಛ ನೀಡಿ ಜಾಗೃತಿ ಮೂಡಿಸಲಾಗಿದೆ.
-ಬಿ.ಟಿ.ನಾಯಕ್‌, ನಗರಸಭೆ ಪೌರಾಯುಕ್ತ

*
ನಗರದ ನಿವಾಸಿಗಳು ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಪಡೆದರೆ ರಾಜ್ಯದಲ್ಲಿಯೇ ಶೇ 100ರಷ್ಟು ಲಸಿಕೆ ಪಡೆದ ಮೊದಲಿಗರಾಗುತ್ತೇವೆ. ಹೀಗಾಗಿ ಲಸಿಕೆ ಪಡೆದುಕೊಳ್ಳಿ.
-ವಿಲಾಸ್‌ ಪಾಟೀಲ, ನಗರಸಭೆ ಅಧ್ಯಕ್ಷ

*
ನಗರದಲ್ಲಿ ಶೇ 100ರಷ್ಟು ಲಸಿಕಾಕರಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಮತ್ತು ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
-ಡಾ.ಲಕ್ಷ್ಮೀಕಾಂತ, ಆರ್‌ಸಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.