ಸೈದಾಪುರ: ‘ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಕ್ಕೆ ಬೆಳೆಗಳು ತುತ್ತಾದಾಗ ಅದರ ನಷ್ಟದಿಂದ ರೈತರ ತಪ್ಪಿಸಿಕೊಳ್ಳಲು ಪೂರ್ವನಿಯೋಜಿತವಾಗಿ ಬೆಳೆವಿಮೆಯನ್ನು ಮಾಡಿಸುವುದು ಸೂಕ್ತ’ ಎಂದು ಸೈದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೇನಕಾ ತಿಳಿಸಿದ್ದಾರೆ.
‘ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಸರ್ಕಾರ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಅಂತಿಮ ದಿನವಾಗಿದೆ. ಕಳೆದ ಐದಾರು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿದ ಹತ್ತಿ, ಹೆಸರು, ತೊಗರಿ, ಭತ್ತ, ಸಜ್ಜೆ ಬೆಳೆಗಳು ಅತಿಯಾದ ತೇವಾಂಶದಿಂದ ಕೊಳೆತು ಹೋಗುವ ಸಂಭವವಿರುತ್ತದೆ. ಇದರಿಂದ ರೈತರು ಬಿತ್ತನೆಗೆ ಮಾಡಿದ ಖರ್ಚು–ವೆಚ್ಚ ಕೂಡ ಭರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಈ ಯೋಜನೆಯು ರೈತರಿಗೆ ವರದಾನವಾಗುತ್ತದೆ. ಆದ್ದರಿಂದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದಿದ್ದಾರೆ.
ಅಗತ್ಯ ದಾಖಲೆಗಳು: ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಸಂಖ್ಯೆ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಗಳೊಂದಿಗೆ ಡಿಸಿಸಿ ಬ್ಯಾಂಕ್, ಇತರೆ ಬ್ಯಾಂಕ್, ಗ್ರಾಮ್ ಒನ್, ಸಿಎಸ್‍ಸಿ ಕೇಂದ್ರಗಳನ್ನು ಸಂಪರ್ಕಿಸಿ ನೋಂದಾಯಿಸಬೇಕು. ಬೆಳೆ ವಿಮೆಯ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.