ADVERTISEMENT

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಲಿ

ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಹ್ಮದ್ ಅನೀಫ್ ಖುರೇಷಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:18 IST
Last Updated 7 ಜುಲೈ 2022, 4:18 IST
ಮಹ್ಮದ್ ಅನೀಫ್
ಮಹ್ಮದ್ ಅನೀಫ್   

ಯಾದಗಿರಿ: ಜಿಲ್ಲೆಯ ಹಳೆ ಮತ್ತು ಹೊಸ ತಾಲ್ಲೂಕುಗಳನ್ನು ಸಮಗ್ರ ಅಭಿವೃದ್ಧಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಹ್ಮದ್ ಅನೀಫ್ ಖುರೇಷಿ ಹತ್ತಿಕುಣಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಇವುಗಳ ದುರಸ್ತಿಗಾಗಿ ಲಕ್ಷಗಟ್ಟಲೆ ಹಣ ಬರುತ್ತಿದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಯಾದಗಿರಿಯಲ್ಲಿ ಉತ್ತಮವಾದ ತರಕಾರಿ ಮಾರುಕಟ್ಟೆ ಇಲ್ಲದೆ ತರಕಾರಿ ಬೆಳೆದ ರೈತರು ಮತ್ತು ಗ್ರಾಹಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಇದನ್ನು ನೀಗಿಸಬೇಕು. ಜಿಲ್ಲೆಯಾದ್ಯಂತ ರೈತರು ಭತ್ತ ಬೆಳೆಯುತ್ತಿದ್ದು, ಅವಧಿಗಿಂತ ಮುಂಚಿತವಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಕಸ ವಿಲೇವಾರಿ ಮಾಡುವ ವಾಹನಗಳು ಕಾರ್ಯನಿರ್ವಹಿಸದೆ ತಟಸ್ಥವಾಗಿ ನಿಂತಿವೆ. ಹತ್ತಿಕುಣಿ ಜಲಾಶಯದ ಕೆಳಗಡೆ ಇರುವ ಭೂಮಿ ಸರ್ಕಾರ ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಅರಿತು ಜಾಗೃತಗೊಂಡ ರೈತರು ಹೋರಾಟದ ಹಾದಿ ಹಿಡಿದಾಗನಿಂದ ಈಚೆಗೆ ತೋಟಗಾರಿಕೆ ಇಲಾಖೆಯವರು 2018 ರಿಂದ ಸೇರ್ಪಡೆ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಎಂದು ಇರುವ ಪಹಣಿಗಳು ತಿದ್ದುಪಡಿ ಮಾಡಿ ರೈತರು ಹೆಸರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಹತ್ತಿಕುಣಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೇರಳವಾಗಿದ್ದು, 10ನೇ ತರಗತಿ ವಾರ್ಷಿಕ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ವೆಂಕೋಬ ಕಂಚಗಾರಹಳ್ಳಿ, ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಬಸಂತಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಕೂಡ್ಲೂರು, ಯಾದಗಿರಿ ತಾಲ್ಲೂಕು ಅಧ್ಯಕ್ಷ ಮೈಹಿಪಾಲರೆಡ್ಡಿ ಪೊಲೀಸ್ ಪಾಟೀಲ, ಹತ್ತಿಕುಣಿ ಗ್ರಾಮ ಘಟಕದ ಉಪಾಧ್ಯಕ್ಷ ಚಂದ್ರಾಮಪ್ಪ ನಾಯ್ಕೋಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.