ADVERTISEMENT

ಯಾದಗಿರಿ: 10,428 ವಿದ್ಯಾರ್ಥಿಗಳಿಗೆ ಪರೀಕ್ಷೆ

ಏ.22ರಿಂದ ಮೇ 18ರ ವರೆಗೆ ದ್ವಿತೀಯ ಪಿಯು ಪರೀಕ್ಷೆ, 17 ಪರೀಕ್ಷಾ ಕೇಂದ್ರಗಳು

ಬಿ.ಜಿ.ಪ್ರವೀಣಕುಮಾರ
Published 20 ಏಪ್ರಿಲ್ 2022, 16:20 IST
Last Updated 20 ಏಪ್ರಿಲ್ 2022, 16:20 IST
ಯಾದಗಿರಿಯ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ
ಯಾದಗಿರಿಯ ಪದವಿ ಪೂರ್ವ ಉಪನಿರ್ದೇಶಕರ ಕಚೇರಿ   

ಯಾದಗಿರಿ: ಜಿಲ್ಲೆಯಲ್ಲಿ ಏ.22ರಿಂದ ಮೇ 18ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, 10,428 ಆಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನ ಸಹಿತ, ಅನುದಾನ ರಹಿತ 95 ಕಾಲೇಜುಗಳಿದ್ದು, 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಕಳೆದ ವರ್ಷ ಕೋವಿಡ್‌ ಕಾರಣ ಎಲ್ಲರನ್ನು ಉತ್ತೀರ್ಣ ಮಾಡಲಾಗಿತ್ತು. ಈ ಬಾರಿ ಪರೀಕ್ಷೆ ನಡೆಯಲಿದೆ.

8,501 ನೇರ ವಿದ್ಯಾರ್ಥಿಗಳಿದ್ದರೆ, 766 ಬಾಹ್ಯ ಅಭ್ಯರ್ಥಿಗಳಿದ್ದಾರೆ. 1,161 ಪುನಾರವರ್ತಿತ ಅಭ್ಯರ್ಥಿಗಳಿದ್ದಾರೆ. 6,873 ವಿದ್ಯಾರ್ಥಿಗಳು ಕಲಾ ವಿಭಾಗ, 1,189 ವಾಣಿಜ್ಯ ವಿಭಾಗ, 2,366 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿದ್ದಾರೆ.

ADVERTISEMENT

ಮೂವರು ಅಂಗವಿಕಲ ವಿದ್ಯಾರ್ಥಿಗಳು: ಈ ಬಾರಿಯ ಪರೀಕ್ಷೆಯಲ್ಲಿ ಅಂಗವೈಕ್ಯಲತೆಯುಳ್ಳ ಮೂವರು ಪರೀಕ್ಷಾ ಮಂಡಳಿಯಿಂದ ಅನುಮತಿ ಪಡೆದಿದ್ದಾರೆ. ಇವರ ಬದಲಾಗಿ ಬೇರೊಬ್ಬರು ಬರೆಯಲಿದ್ದಾರೆ. ವಿದ್ಯಾರ್ಥಿ ಪಕ್ಕದಲ್ಲೇ ಮತ್ತೊಬ್ಬರು ಉತ್ತರ ಪತ್ರಿಕೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಯಾದಗಿರಿಯಲ್ಲಿ ಇಬ್ಬರು, ಶಹಾಪುರ ತಾಲ್ಲೂಕಿನಲ್ಲಿ ಒಬ್ಬರು ಇಂಥ ಅವಕಾಶ ಪಡೆದುಕೊಂಡಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 5, ಗುರುಮಠಕಲ್‌ ತಾಲ್ಲೂಕಿನಲ್ಲಿ 2, ಶಹಾಪುರ ತಾಲ್ಲೂಕಿನಲ್ಲಿ 4, ಸುರಪುರ ತಾಲ್ಲೂಕಿನಲ್ಲಿ 5, ಹುಣಸಗಿ ತಾಲ್ಲೂಕಿನಲ್ಲಿ 1 ‍ಪರೀಕ್ಷಾ ಕೇಂದ್ರಗಳಿವೆ.

ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು?: ಯಾದಗಿರಿ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕರ, ಬಾಲಕಿಯರ ಕಾಲೇಜು, ನ್ಯೂಕನ್ನಡ, ಸಭಾ ಕಾಲೇಜು, ಜವಾಹರ್ ಕಾಲೇಜು, ಶಹಾಪುರ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕರ, ಬಾಲಕಿಯರ ಕಾಲೇಜು, ಭೀಗುಡಿ ಪದವಿ ಪೂರ್ವ ಕಾಲೇಜು, ಸಿಬಿ ಪಿಯು ಕಾಲೇಜು, ಸುರಪುರ ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ರಂಗಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಭು ಪಿಯು ಕಾಲೇಜು, ರಂಗಪೇಟೆ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜು, ಸುರಪುರ ತಾಲ್ಲೂಕಿನ ಕೆಂಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುರುಮಠಕಲ್‌ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕರ, ಬಾಲಕಿಯರ ಕಾಲೇಜು, ಹುಣಸಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

‘ಈಗಾಗಲೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಏ.21ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. 22ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಎಲ್ಲ ಕೇಂದ್ರಗಳಲ್ಲಿ ಸ್ಯಾನಿಟೈಸ್‌ ಮಾಡಲಾಗುವುದು’ ಎನ್ನುತ್ತಾರೆ‌ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ಅವರು.

***

ಪರೀಕ್ಷೆ: ಜಿಲ್ಲೆಯಲ್ಲಿ ಕಟ್ಟೆಚ್ಚರ
ಜಿಲ್ಲೆಯಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದು, ಜಿಲ್ಲಾ ಪೊಲೀಸ್ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

2-ಡಿವೈಎಸ್‌ಪಿ, 10-ಪಿಐ, ಸಿಪಿಐ, 20-ಪಿಎಸ್‌ಐ, 200 ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷಾ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಇರುವ ಜೆರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಸೈಬರ್ ಕೆಫೆಗಳ ಮೇಲೆ ನಿಗಾ ಇಟ್ಟಿದ್ದು, ಪರೀಕ್ಷಾ ದಿನದಂದು ಬಂದ್ ಮಾಡಲು ಸೂಚನೆ ನೀಡಲಾಗಿದೆ.

ಪರೀಕ್ಷೆಯಲ್ಲಿ ಯಾವುದೇ ನಕಲು ಮತ್ತು ಅವ್ಯವಹಾರ ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮತ್ತು ಪ್ರಚೋದನಾಕಾರಿ ಹೇಳಿಕೆ ಹರಿಬಿಡುವವ ಮೇಲೆ ನಿಗಾ ವಹಿಸಿದ್ದು, ಅಂಥವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
*******
ಅಂಕಿ ಅಂಶ
ವಿದ್ಯಾರ್ಥಿಗಳ ವಿವರ
ಬಾಲಕರು;6,006
ಬಾಲಕಿಯರು;4,422
ಒಟ್ಟು;10,428
ಆಧಾರ: ಪದವಿ ಪೂರ್ವ ಶಿಕ್ಷಣ ಇಲಾಖೆ

***

ದ್ವಿತೀಯ ಪಿಯು ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಆರೋಗ್ಯ, ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿದೆ
ಚಂದ್ರಕಾಂತ ಜಿ ಹಿಳ್ಳಿ, ಉಪನಿರ್ದೇಶಕ, ಪದವಿ ಪೂರ್ವ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.