ADVERTISEMENT

ಯಾದಗಿರಿ: ಮೂರು ದಿನಗಳಿಂದ ಕೋವಿಡ್‌ ಹೆಚ್ಚಳ

ಇಬ್ಬರು ವಿದ್ಯಾರ್ಥಿನಿಯರು ಸೇರಿ 13 ಜನರಲ್ಲಿ ಸೋಂಕು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 15:54 IST
Last Updated 11 ಜನವರಿ 2022, 15:54 IST
ಯಾದಗಿರಿಯ ಎಪಿಎಂಸಿ ರಸ್ತೆಯ ಬದಿ ಕೋಳಿ ಖರೀದಿಗಾಗಿ ಮಾಸ್ಕ್ ಇಲ್ಲದೇ ನಿಂತ ಗ್ರಾಹಕರು
ಯಾದಗಿರಿಯ ಎಪಿಎಂಸಿ ರಸ್ತೆಯ ಬದಿ ಕೋಳಿ ಖರೀದಿಗಾಗಿ ಮಾಸ್ಕ್ ಇಲ್ಲದೇ ನಿಂತ ಗ್ರಾಹಕರು   

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಂಗಳವಾರ ಇಬ್ಬರು ವಿದ್ಯಾರ್ಥಿನಿಯರು ಸೇರಿ 13 ಮಂದಿಗೆ ಸೋಂಕು ದೃಢವಾಗಿದ್ದು, ಸಕ್ರಿಯ ಪ್ರಕರಣಗಳು 29ಕ್ಕೆ ತಲುಪಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 195, ದ್ವೀತಿಯ ಸಂಪರ್ಕದಲ್ಲಿದ್ದ 195 ಜನರನ್ನು ಗುರುತಿಸಲಾಗಿದೆ. 13 ಮಂದಿ ಮನೆಗಳಲ್ಲಿ ಪ್ರತ್ಯೇಕವಾಗಿದ್ದು, 6 ಜನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಮಹಾರಾಷ್ಟ್ರದಿಂದ ಬಂದವರ ಪೈಕಿ, ಕೆಲವರು ಗಂಟಲು ಮಾದರಿ ದ್ರವ ಪರೀಕ್ಷೆಗೆ ನಿರಾಕರಿಸಿದರು. ಅಲ್ಲದೆ ಭದ್ರತೆಗೆ ನಿಯೋಜನೆಗೊಂಡಿದ್ದ ಗೃಹ ರಕ್ಷಕದಳ ಸಿಬ್ಬಂದಿಯನ್ನು ತಳ್ಳಿ ಹೋದ ಘಟನೆ ಜರುಗಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚಿದ್ದು, ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಇದನ್ನು ಪ್ರಯಾಣಿಕರು ನಿರ್ಲಕ್ಷ್ಯಿಸುತ್ತಿದ್ದಾರೆ. ಹಿಂಭಾಗದ ಗೋಡೆ ಹತ್ತಿ ಪರಾರಿ ಆಗುತ್ತಿದ್ದರೂ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರು ಇಲ್ಲದಿದ್ದರಿಂದ ಹಲವರು ಆರ್‌ಟಿಪಿಸಿಆರ್‌ ನೆಗೆಟಿವ್ ವರದಿ, ತಪಾಸಣೆಗೆ ನಿರಾಕರಿಸುತ್ತಾರೆ. ಅಲ್ಲದೇ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವೂ ತೋರಿಸುತ್ತಿಲ್ಲ. ರೈಲು ಪ್ರಯಾಣಿಕರ ಈ ವರ್ತನೆಗೆ ಆರೋಗ್ಯ ಸಿಬ್ಬಂದಿಗೆ ತಲೆನೋವಾಗಿದೆ.

ಮಾಸ್ಕ್‌ ಧರಿಸದೆ ಓಡಾಟ: ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಓಡಾಡುವುದು ಸಾಮಾನ್ಯವಾಗಿದೆ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದೆ ಗುಂಪು ಸೇರುತ್ತಿದ್ದು, ಕೋವಿಡ್‌ ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ.

ಮಂಗಳವಾರ ಯಾದಗಿರಿ ಎಪಿಎಂಸಿಯಲ್ಲಿ ಜಾನುವಾರ ಸಂತೆ ನಡೆಯಿತು. ವರ್ತಕರು, ಗ್ರಾಹಕರು ಮಾಸ್ಕ್‌ ಧರಿಸದೆ ಓಡಾಡುವುದು ಕಂಡುಬಂತು. ಜತೆಗೆ ವ್ಯಕ್ತಿಗತ ಅಂತರ ಕಾಪಾಡಿಕೊಂಡಿರಲಿಲ್ಲ. ರಸ್ತೆ ಬದಿಯಲ್ಲಿಕೋಳಿ ವ್ಯಾಪಾರ ಮಾಡುತ್ತಿದ್ದವರೂ ಮಾಸ್ಕ್ ಧರಿಸದೆ ವಹಿವಾಟು ನಡೆಸಿದ್ದು ಕಂಡುಬಂತು.

ಯಾದಗಿರಿ ಕೋವಿಡ್‌ ಅಂಕಿ ಅಂಶ ( ಜನವರಿ 11)
ಒಟ್ಟು ಸೋಂಕಿತರು; 27,580
ಸಕ್ರಿಯ ಪ್ರಕರಣ: 29
ಗುಣಮುಖ ಆದವರು; 27,345
ಒಟ್ಟು ಸಾವು;206
ದಿನದ ಏರಿಕೆ
ಹೊಸ ಪ್ರಕರಣ;13
ಗುಣಮುಖ;0
ಸಾವು;0
ಆಧಾರ: ಆರೋಗ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.