ADVERTISEMENT

ಕೃಷ್ಣಾ, ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರತಿವರ್ಷ ಪ್ರವಾಹದ ಆತಂಕ

ಕನಸಾಗಿಯೇ ಉಳಿದ ಗ್ರಾಮಗಳ ಸ್ಥಳಾಂತರ

ಬಿ.ಜಿ.ಪ್ರವೀಣಕುಮಾರ
Published 30 ಏಪ್ರಿಲ್ 2022, 2:50 IST
Last Updated 30 ಏಪ್ರಿಲ್ 2022, 2:50 IST
ಪ್ರವಾಹದ ನೀರಿನಿಂದ ಮುಳುಗಡೆಯಾಗಿರುವ ಶಹಾಪುರ ತಾಲ್ಲೂಕಿನ ಮರಕಲ್ ಗ್ರಾಮದ ಜಮೀನು (ಸಂಗ್ರಹ ಚಿತ್ರ)
ಪ್ರವಾಹದ ನೀರಿನಿಂದ ಮುಳುಗಡೆಯಾಗಿರುವ ಶಹಾಪುರ ತಾಲ್ಲೂಕಿನ ಮರಕಲ್ ಗ್ರಾಮದ ಜಮೀನು (ಸಂಗ್ರಹ ಚಿತ್ರ)   

ಯಾದಗಿರಿ: ಯಾದಗಿರಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ಮತ್ತು ಭೀಮಾ ನದಿಗಳ ತಟದಲ್ಲಿರುವ ಗ್ರಾಮಗಳ ಸ್ಥಳಾಂತರ ವಿಷಯ ಪ್ರವಾಹ ಬಂದಾಗ ಮಾತ್ರ ಮುನ್ನೆಲೆಗೆ ಬರುತ್ತದೆ. ಇದಾದ ನಂತರ ಮತ್ತೆ ನನೆಗುದಿಗೆ ಬೀಳುವುದು ಸಾಮಾನ್ಯವಾಗಿದೆ.

ಪ್ರವಾಹ ಬಂದಾಗ ಮಾತ್ರ ಜನಪ್ರನಿಧಿಗಳು, ಅಧಿಕಾರಿಗಳು ಭೇಟಿ ನೀಡಿ, ಸ್ಥಳಾಂತರದ ಭರವಸೆ ಕೊಡುತ್ತಾರೆ. ಆನಂತರ ಅಧಿಕಾರಿಗಳು, ಜನರು ಮರೆತು ಬಿಡುತ್ತಾರೆ. ಇದರಿಂದ ಹಲವು ವರ್ಷಗಳಾದರೂ ಈ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಕೃಷ್ಣಾ ಮತ್ತು ಭೀಮಾ ನದಿ ತಟದ ಗ್ರಾಮಗಳಾದ ಮರಕಲ್, ಕೊಳ್ಳೂರ (ಎಂ), ಗೌಡೂರು, ಟೊಣ್ಣೂರು, ಯಕ್ಷಂತಿ, ಹೈಯ್ಯಾಳ, ಐಕೂರ, ಅನಕಸೂಗೂರ, ಗೊಂದೆನೂರ, ಚೆನ್ನೂರ, ತುಮಕೂರು ಇಟಗಾ, ಅಭಿಶ್ಯಾಳ, ಗೋನಾಲ್, ಶಿವಪುರ, ಸಂಗಮ ಇನ್ನಿತರ ಗ್ರಾಮಗಳ ಜನರು ಪ್ರವಾಹದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇವರ ನೋವಿಗೆ ಕೊನೆಯೇ ಇಲ್ಲದಂತೆ ಆಗಿದೆ.
ಶಾಶ್ವತ ಸ್ಥಳಾಂತರಕ್ಕೆ ಒತ್ತಡ: 2009ರಲ್ಲಿ ಭೀಕರ ಪ್ರವಾಹ ಬಂದಾಗ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದ ಗ್ರಾಮಗಳು ತತ್ತರಿಸಿದ್ದವು. ಆಗಲೇ ಸ್ಥಳಾಂತರ ಮಾಡುವ ಮಾತು ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಕೇಳಿ ಬಂದಿದ್ದವು. ಆದರೆ, ಆ ಮಾತು ಇಂದಿಗೂ ಭರವಸೆಯಾಗೇ ಉಳಿದಿವೆ.

ADVERTISEMENT

‘2009ರ ಪ್ರವಾಹದಿಂದ ಜಿಲ್ಲೆಯ 9 ಗ್ರಾಮಗಳ ಸ್ಥಳಾಂತರ ಮಾಡಲು ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದರು. ಈಗ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರವಾಹ ಬಂದಾಗ ಮಾತ್ರ ಸ್ಥಳಾಂತರ ನೆನಪಾಗುತ್ತದೆ. ಪ್ರವಾಹ ಕುಗ್ಗಿದಾಗ ಮರೆತು ಬಿಡುತ್ತಾರೆ. ಇದರಿಂದ 9 ಗ್ರಾಮಗಳ ಜನರು ಭಯದ ವಾತಾವರಣದಲ್ಲಿಯೇ ಬದುಕುತ್ತಿದ್ದಾರೆ’ ಎನ್ನುತ್ತಾರೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಣಿಕರೆಡ್ಡಿ ಕುರುಕುಂದಿ.

ಸ್ಥಳಾಂತರ ಮಾಡುವ ಗ್ರಾಮಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದೆ. ಹುರಸಗುಂಡಗಿಯಲ್ಲಿ ಸ್ಥಳಾಂತರ ಮಾಡಿದ್ದರೂ ಜನರಿಗೆ ಸೂಕ್ತ ಸೌಲಭ್ಯಗಳು ಇಲ್ಲ. ಹೀಗಾಗಿ ಈ ಗ್ರಾಮಗಳನ್ನು ಸ್ಥಳಾಂತರ ಮಾಡುವಾಗ ಸಕಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಪ್ರವಾಹ: ಈಚಿನ ಪ‍್ರತಿ ವರ್ಷವೂ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ಮಳೆಗಾಲದಲ್ಲಿ ಮಹಾರಾಷ್ಟ್ರ ರಾಜ್ಯದ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗಳಿಗೆ ಬಿಡುವುದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತದೆ.
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ನದಿ ಭರ್ತಿಯಾಗಿ ಅಕ್ಕಪಕ್ಕದ ಗ್ರಾಮದ ಜಮೀನುಗಳಿಗೆ ನೀರು ನುಗ್ಗುತ್ತದೆ.

2020ರಲ್ಲಿ ಭೀಮಾನದಿಯಲ್ಲಿ ಭೀಕರ ಪ್ರವಾಹ ಉಂಟಾಗಿ ಬಿತ್ತನೆ ಮಾಡಿದ್ದ ಬೆಳೆಯೆಲ್ಲ ಹಾಳಾಗಿತ್ತು. ಹತ್ತಿ, ಭತ್ತ ಬೆಳೆ ನಷ್ಟವುಂಟಾಗಿ ಸಾವಿರಾರು ರೈತರ ಸಾಲ ಮತ್ತಷ್ಟು ಹೆಚ್ಚಾಗಿತ್ತು.

ಈ ಗ್ರಾಮಗಳ ಸ್ಥಳಾಂತರ ಮಾಡಬೇಕು. ಇದು ಬಹುದಿನದ ಬೇಡಿಕೆಯಾಗಿದ್ದು, ನೇರವೇರುವ ಕಾಲ ಇನ್ನೂ ಕೂಡಿ ಬಂದಿಲ್ಲ.

‘ನಮ್ಮ ಗ್ರಾಮಕ್ಕೆ ಪ್ರವಾಹ ಬಂದಾಗ ಮಾತ್ರ ಅಧಿಕಾರಿಗಳ ದಂಡು ಬರುತ್ತದೆ. ಕಾಳಜಿ ಕೇಂದ್ರ ಸ್ಥಾಪನೆ ಮಾಡುತ್ತಾರೆ. ಪ್ರವಾಹ ಇಳಿಮುಖವಾದಾಗ ನಾವು ಮತ್ತೆ ಊರು ಸೇರುತ್ತೇವೆ. ಮತ್ತೆ ಪ್ರವಾಹ ಬಂದಾಗ ಸರ್ಕಾರದವರು ಶಾಲೆಗಳಲ್ಲಿ ಕೇಂದ್ರ ತೆರೆಯುತ್ತಾರೆ. ಬರುವುದು, ತೆರಳುವುದು ಸಾಮಾನ್ಯವಾಗಿದೆ. ಪ್ರವಾಹದಲ್ಲಿ ಮನುಷ್ಯರು ಹೇಗೋ ಪಾರಾಗುತ್ತೇವೆ. ಆದರೆ, ಜಾನುವಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಗ್ರಾಮಗಳ ಸ್ಥಳಾಂತರಕ್ಕೆ ಶಾಶ್ವತ ಕ್ರಮಕೈಗೊಳ್ಳಬೇಕು’ ಎಂದು ಶಿವಪುರ ಗ್ರಾಮಸ್ಥ ಶಿವಪ್ಪ ಆಗ್ರಹಿಸುತ್ತಾರೆ.

***

*ಕೃಷ್ಣಾ ಮತ್ತು ಭೀಮಾ ನದಿ ‍ವ್ಯಾಪ್ತಿಯ ಪ್ರವಾಹ ಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು ಕೋವಿಡ್‌ ಕಾರಣ ಸ್ಥಳಾಂತರ ಪ್ರಕ್ರಿಯೆ ತಡವಾಗಿದೆ

- ವೆಂಕಟರೆಡ್ಡಿ ಮುದ್ನಾಳ, ಶಾಸಕ

*ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿರುವ ಗ್ರಾಮಗಳ ಸ್ಥಳಾಂತರ ಬಗ್ಗೆ ಪರಿಶೀಲಿಸುತ್ತೇನೆ. ಈ ಹಿಂದೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವುದರ ಮಾಹಿತಿ ಪಡೆಯುತ್ತೇನೆ

– ಶಾ ಆಲಂ ಹುಸೇನ್‌, ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.