
ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರೂ ಬಿತ್ತನೆ ಮಾತ್ರ ಮಂದಗತಿಯಲ್ಲಿ ಸಾಗಿದೆ.
ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿತ್ತು. ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹದಿಂದಾಗಿ ಹಲವೆಡೆ ಬೆಳೆಗಳು ನೀರು ಪಾಲಾಗಿವೆ. ಸಂಕಷ್ಟದ ನಡುವೆ ರೈತರು ಹಿಂಗಾರು ಬಿತ್ತನೆಗೆ ಅಣಿಯಾಗಿದ್ದಾರೆ.
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ 49,909 ಹೆಕ್ಟೇರ್ ಪ್ರದೇಶದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅಕ್ಟೋಬರ್ 23ರವರೆಗೆ ಜಿಲ್ಲೆಯಲ್ಲಿ 7,414 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 14.85ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಮಳೆ ಬಿಡುವು ಕೊಟ್ಟು ಹಲವು ದಿನಗಳು ಕಳೆದರೂ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗಿದೆ.
ಜಿಲ್ಲೆಯಲ್ಲಿ 22,842 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೂ 2,531 ಹೆಕ್ಟೇರ್‌ನಷ್ಟು ಮಾತ್ರವೇ ಬಿತ್ತನೆಯಾಗಿದೆ. 20,500 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅದರ ಪೈಕಿ 4,363 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 21.28ರಷ್ಟು ಪೂರ್ಣಗೊಂಡಿದೆ.
ಕಡಲೆ ಬಿತ್ತನೆಯ ಗುರಿಯನ್ನು 2,764 ಇರಿಸಿಕೊಂಡಿದ್ದು ಇಲ್ಲಿಯವರೆಗೂ 457 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಸಜ್ಜೆ, ಗೋಧಿ, ಸಾಸಿವೆ, ಸೂರ್ಯಕಾಂತಿ, ಮೆಕ್ಕೆಜೋಳ, ಭತ್ತ, ಕುಸುಬೆ ಬೆಳೆಗಳ ಬಿತ್ತನೆಯೂ ನಿಧಾನಗತಿಯಲ್ಲಿ ಸಾಗುತ್ತಿದೆ.
ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅಧಿಕ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾದ 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿತ್ತು. ಇದರಲ್ಲಿ ಕೆಲವು ಪ್ರದೇಶದಲ್ಲಿನ ಹಾಳಾದ ಬೆಳೆಗಳು, ಕಳೆಗಳನ್ನು ತೆಗೆದು ರೈತರು ಹಿಂಗಾರಿನ ಬೆಳೆಗಳನ್ನು ಬಿತ್ತಲು ಮುಂದಾಗಿದ್ದಾರೆ.
ಗೊಬ್ಬರ ದಾಸ್ತಾನು: ಹಿಂಗಾರಿನ ಬೆಳೆಗಳ ಬಿತ್ತನೆ ಮಾಡುವ ರೈತರಿಗೆ ಪೂರೈಸಲು ಅಗತ್ಯವಾದಷ್ಟು ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ. 6,509 ಮೆಟ್ರಿಕ್ ಟನ್ ಯೂರಿಯಾ, 4,178 ಮೆ.ಟನ್ ಡಿಎಪಿ, 14,420 ಮೆ. ಟನ್ ಸಂಯುಕ್ತ ರಸಗೊಬ್ಬರ, 660 ಮೆ. ಟನ್ ಎಂಒಪಿ ಹಾಗೂ 683 ಮೆ.ಟನ್ ಎಸ್‌ಎಸ್‌ಪಿ ಸೇರಿ ಸುಮಾರು 26,000 ಮೆ.ಟನ್ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
‘ಮುಂಗಾರಿನಲ್ಲಿ ಬಿತ್ತನೆ ಮಾಡಿ ಬೆಳೆ ಕಳೆದುಕೊಂಡ ಕೆಲವು ಹಿಂಗಾರಿನಲ್ಲಿ ಬಿತ್ತನೆಗೆ ಹಿಂದೆಮುಂದೆ ನೋಡುತ್ತಿದ್ದಾರೆ. ಮಳೆ ನಕ್ಷತ್ರದ ಒಳಗೆ ಬಿತ್ತಿದರೆ ಬೆಳೆಗಳು ರೋಗ, ಹುಳಗಳ ಬಾಧೆಯಿಂದ ಪಾರಾಗುತ್ತವೆ. ಇಲ್ಲದೆ ಇದ್ದರೆ ಸರಿಯಾದ ಬೆಳೆ ಬರುವುದಿಲ್ಲ. ಹೀಗಾಗಿ, ಬಹುತೇಕರು ಕುಸುಮೆ, ಕಡಲೆಗೆ ಮೊರಗೆ ಹೋಗಬಹುದು’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ.
‘ನೀರಿನ ವ್ಯವಸ್ಥೆ ಹಾಗೂ ಮಣ್ಣು ನೋಡಿಕೊಂಡು ಬೆಳೆಗಳ ಬಿತ್ತನೆ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ಪಡೆದು ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಅದೇ ಜಮೀನಿನಲ್ಲಿ ಬೇರೆ ಬೆಳೆಗಳನ್ನು ಬೆಳೆಯಲು ಸಬ್ಸಿಡಿ ಮೇಲೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ’ ಎಂದರು.
ಬೆಳೆ ಕಳೆದುಕೊಂಡ ರೈತರು ಮೊದಲೇ ಸಂಕಷ್ಟದಲ್ಲಿ ಇದ್ದಾರೆ. ಬಿತ್ತನೆ ಬೀಜಗಳಿಗೆ ಕೊರತೆ ಇಲ್ಲದಂತೆ ದಾಸ್ತಾನು ಮಾಡಿಕೊಂಡು ವಿತರಣೆ ಮಾಡಲಾಗುತ್ತಿದೆರತೇಂದ್ರನಾಥ ಸೂಗುರ ಜಂಟಿ ಕೃಷಿ ನಿರ್ದೇಶಕ
ಬೆಳೆಗಳನ್ನು ಕಳೆದುಕೊಂಡ ರೈತರಿಗೆ ತಕ್ಷಣವೇ ಬೆಳೆಹಾನಿ ಪರಿಹಾರ ಕೊಟ್ಟು ಹಿಂಗಾರು ಬಿತ್ತನೆಗೆ ಬಿತ್ತನೆ ಬೀಜ ಗೊಬ್ಬರದ ವ್ಯವಸ್ಥೆಯನ್ನು ಮಾಡಬೇಕುಮಲ್ಲಿಕಾರ್ಜುನ ಸತ್ಯಂಪೇಟೆ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ
ತಾಲ್ಲೂಕುವಾರು ಬಿತ್ತನೆಯಾದ ಪ್ರದೇಶ ತಾಲ್ಲೂಕು;ಗುರಿ;ಬಿತ್ತನೆ;ಶೇ ಶಹಾಪುರ;8293;196;2.36 ವಡಗೇರಾ;6641;142;2.14 ಸುರಪುರ;8754;429;4.90 ಯಾದಗಿರಿ;11473;3661;31.91 ಗುರುಮಠಕಲ್;8167;2624;32.13 ಒಟ್ಟು;49909;7414;14.85 ಮಾಹಿತಿ ಕೃಷಿ ಇಲಾಖೆ; ಅಕ್ಟೋಬರ್ 23ರ ವರೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.