ADVERTISEMENT

ಯಾದಗಿರಿ | ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ

ಮಾಸಿಕ ₹ 10 ಸಾವಿರ ನಿಶ್ಚಿತ ಗೌರವ ಧನ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:23 IST
Last Updated 13 ಆಗಸ್ಟ್ 2025, 6:23 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಮುಖಂಡರು ಅಹೋರಾತ್ರಿ ಧರಣಿ ಕುಳಿತರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ  ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆ ಮುಖಂಡರು ಅಹೋರಾತ್ರಿ ಧರಣಿ ಕುಳಿತರು   

ಯಾದಗಿರಿ: ಮಾಸಿಕ ಕನಿಷ್ಠ ₹ 10 ಸಾವಿರ ನಿಶ್ಚಿತ ಗೌರವ ಧನ, ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಸದಸ್ಯೆಯರು ಮಂಗಳವಾರ ಅಹೋರಾತ್ರಿ ಧರಣಿ ಆರಂಭಿಸಿದರು.‌

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಜಮಾಯಿಸಿದರು. ‘ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಪಿಂಚಣಿ ನೀಡಿ. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಅವೈಜ್ಞಾನಿಕ ಪರ್ಫಾರ್ಮೆನ್ಸ್ ಅಪ್ರೈಸಲ್‌ ನಿಲ್ಲಿಸಿ’ ಎಂಬ ನಾಮಫಲಕಗಳನ್ನು ಹಿಡಿದು ಪ್ರತಿಭಟನೆಗೆ ಕುಳಿತರು. ರಾಜ್ಯ ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದರು.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 15 ಸಾವಿರ ನಿಶ್ಚಿತ ಗೌರವ ಧನ ನೀಡುವಂತೆ ಆಗ್ರಹಿಸಿ ಜನವರಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು, ಮಾಸಿಕ ₹ 10 ಸಾವಿರ ಗೌರವ ಧನ ನೀಡುವುದಾಗಿ ಘೋಷಿಸಿದ್ದರು. ಇದುವರೆಗೂ ಗೌರವಧನ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

20 ಆಶಾ ಕಾರ್ಯಕರ್ತರಿಗೆ ಒಬ್ಬರಂತೆ ಒಟ್ಟು 2 ಸಾವಿರ ಸುಗಮಕಾರರನ್ನು ನೇಮಿಸಿ, ನಂತರ ಅವರನ್ನು ಏಕಾಏಕಿ ತೆಗೆದು ಹಾಕಿದ್ದಾರೆ. ಈ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. 60 ವರ್ಷ ವಯಸ್ಸಿನ ಆಶಾ ಕಾರ್ಯಕರ್ತೆಯರಿಗೆ ಧಿಡೀರನೆ ತೆಗೆದು ನಿವೃತ್ತಿರನ್ನಾಗಿ ಮಾಡಿದ್ದಾರೆ. 17 ವರ್ಷದಿಂದ ಸೇವೆ ಮಾಡಿದ ಕಾರ್ಯಕರ್ತೆಯರಿಗೆ ಯಾವುದೇ ಪರಿಹಾರ ನೀಡದೆ ಬೀದಿಗೆ ತಳ್ಳಲಾಗಿದೆ ಎಂದರು.

ಈಗ ಕಾರ್ಯ ನಿರ್ವಹಿಸುವ ಸುಮಾರು 41,000 ಆಶಾಗಳಿಗೆ ಅವರ ಕೆಲಸದ ಮೌಲ್ಯಮಾಪನ ಮಾಡುವ ಆದೇಶ ಹೊರಡಿಸಿ, ವಿವಿಧ ರೀತಿಯಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದೆ. ಮೌಲ್ಯಮಾಪನದ ಮಾದರಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಇದರಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ ಎಂದು ಹೇಳಿದರು. 

ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿ ಹೆಚ್ಚಿಸುವುದನ್ನು ಕೈಬಿಡಬೇಕು. ಯಾವುದೇ ಕಾರ್ಯಕರ್ತೆಯರನ್ನು ತೆಗೆಯಬಾರದು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ ₹ 2 ಸಾವಿರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ದೇವಕ್ಕಿ ವನದುರ್ಗ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಪ್ರಮುಖರಾದ ಪುಷ್ಪಲತಾ, ನೀಲಮ್ಮ, ತಾಯಮ್ಮ , ಶಾಂತವ್ವ, ನಿಂಗಮ್ಮ, ಅಮೃತಾ, ದಾನಮ್ಮ, ಗೀತಾ, ಮೀನಾಕ್ಷಿ, ಗೌರಮ್ಮ, ಶಾರದಾದೇವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಂದ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಂಡು ಕಾರ್ಯಕರ್ತೆಯರ ದುಡಿಮೆಗೆ ತಕ್ಕಷ್ಟು ಗೌರವಧನ ಕೊಡದೆ ಇರುವುದು ಯಾವ ನ್ಯಾಯ?

-ಡಿ.ಉಮಾದೇವಿ ಸಂಘದ ಜಿಲ್ಲಾ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.