ಯಾದಗಿರಿ: ಭೀಮಾ ಮತ್ತು ಕೃಷ್ಣಾ ಜಲಾನಯನ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು, ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಆಲಮಟ್ಟಿಯಿಂದ ಕೃಷ್ಣಾ ನದಿಗೆ 1.35 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾರಾಯಣಪುರ ಜಲಾಶಯದಿಂದಲೂ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಆವರಿಸಿದೆ.
ಹೊರಹರಿವಿನ ಮಟ್ಟ ಹೆಚ್ಚಾದರೆ ದೇವದುರ್ಗ–ಶಹಾಪುರ ನಡುವಿನ ಕೊಳ್ಳೂರ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಕೊಳ್ಳೂರ, ಗೌಡೂರು, ಟೊಣ್ಣೂರು, ಯಕ್ಷಿಂತಿ ಗ್ರಾಮಗಳಿಗೆ ನದಿ ನೀರು ನುಗ್ಗುವ ಅಪಾಯವಿದೆ. ನದಿ ಬದಿಯಲ್ಲಿನ ಪಂಪ್‌ಸೆಟ್‌ಗಳನ್ನು ರೈತರು ತೆರವು ಮಾಡಿದ್ದಾರೆ. ಭತ್ತದ ಗದ್ದೆಗಳಿಗೆ ನೀರು ನುಗ್ಗುವ ಆತಂಕವೂ ಬೆಳೆಗಾರರಲ್ಲಿ ಇದೆ.
ಮಹಾರಾಷ್ಟ್ರ, ನೆರೆಯ ಕಲಬುರಗಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಭೀಮಾ ನದಿ ಎರಡೂ ದಡ ಸೋಸಿ ತುಂಬಿ ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಯಲ್ಲಿ ಅಲ್ಲಲ್ಲಿ ನಿರ್ಮಿಸಲಾದ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಕ್ರೆಸ್ಟ್‌ಗೇಟ್‌ಗಳನ್ನು ಮೇಲಕ್ಕೆ ಎತ್ತಿ ನೀರು ಹರಿಸಲಾಗುತ್ತಿದೆ. ನದಿ ದಡದಲ್ಲಿರುವ ಕಂಗಳೇಶ್ವರ ದೇವಸ್ಥಾನವೂ ಸಂಪೂರ್ಣವಾಗಿ ಮಳುಗಡೆಯಾಗಿದೆ.
ಪಗಲಾಪುರ-ಕೋಯಿಲೂರ ನಡುವಿನ ಹಳ್ಳದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಮಣ್ಣು ಹಾಕಿ ಕಾಲು ದಾರಿ ಮಾಡಿಕೊಳ್ಳಲಾಗಿದೆ. ಎರಡೂ ಬದಿಯಲ್ಲಿ ತಗ್ಗು ಇದ್ದು, ಸ್ವಲ್ಪವೇ ಆಯತಪ್ಪಿದರೂ ಕೆಳಗೆ ಬೀಳುವ ಅಪಾಯ ಇದೆ. ಇದೇ ಹಾದಿಯಲ್ಲಿ ಬೈಕ್‌ಗಳು ಸಾಗುತ್ತಿವೆ.
‘ವರ್ಷದ ಹಿಂದೆಯೇ ಸೇತುವೆ ಕೊಚ್ಚಿ ಹೋಗಿದೆ. ಸೇತುವೆ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಇನ್ನೂ ಮುಗಿದಿಲ್ಲ. ಜೀವ ಭಯದಲ್ಲಿ ಹಳ್ಳ ದಾಟುತ್ತಿದ್ದೇವೆ. ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಇನ್ನೊಂದಿಷ್ಟು ಮಣ್ಣು ಹಾಕಿ, ಕನಿಷ್ಠ ಪ್ರಯಾಣಿಕರ ಆಟೊಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎನ್ನುತ್ತಾರೆ ಪಗಲಾಪುರ ನಿವಾಸಿ ರಾಜು.
ಹಳದಿ ಬಣ್ಣಕ್ಕೆ ತಿರುಗಿದ ಹೆಸರು ಬೆಳೆಗಳು: ಕಾಯಿ ಕಟ್ಟಿ ರಾಶಿಗೆ ಬಂದಿರುವ ಹೆಸರು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಜಮೀನುಗಳಲ್ಲಿ ನೀರು ನಿಂತು ಕೆಸರು ಗದ್ದೆಯಂತೆ ಆಗಿವೆ. ಕಳೆ ಗಿಡಗಳು ಸಹ ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎನ್ನುತ್ತಾರೆ ರೈತರು.
24.54 ಮಿ.ಮೀ. ಮಳೆ: ಗುರುಮಠಕಲ್‌ನ ಚಪೆಟ್ಲಾದಲ್ಲಿ ಅತ್ಯಧಿಕ 24.54 ಮಿ.ಮೀ. ಮಳೆಯಾಗಿದೆ. ಉಳಿದಂತೆ ಎಲ್ಹೇರಿಯಲ್ಲಿ 20.5, ಮಾಧ್ವಾರದಲ್ಲಿ 20, ಜೈಗ್ರಾಮನಲ್ಲಿ 19, ಕಾಳಬೆಳಗುಂದಿಯಲ್ಲಿ 18.5, ಪುಟಪಾಕ ಮತ್ತು ಹಳಿಗೇರಾದಲ್ಲಿ 17, ಚಂಡರಕಿಯಲ್ಲಿ 13, ಮಿನಾಸ್ಪುರದಲ್ಲಿ 11.5 ಹಾಗೂ ಯರಗೋಳದಲ್ಲಿ 8 ಮಿ.ಮೀ. ಮಳೆ ಬಿದ್ದಿದೆ.
Cut-off box - ಅಪಾಯಕ್ಕೆ ಆಹ್ವಾನಿಸುವ ಗುಂಡಿಗಳು ಭೀಮಾ ನದಿಯ ಹಳೇ ಸೇತುವೆಯ ಎರಡೂ ಬದಿಯಲ್ಲಿ ದೊಡ್ಡ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿವೆ. ಮಳೆಯಿಂದ ಗುಂಡಿಗಳಲ್ಲಿ ನೀರು ನಿಂತಿದೆ. ಗುಂಡಿಗಳ ಆಳ ಅರಿಯದೆ ವೇಗವಾಗಿ ಬರುವ ಚಾಲಕರು ಪ್ರಯಾಣಿಕರನ್ನು ಹೈರಾಣು ಮಾಡುತ್ತಿವೆ. ಗುಂಡಿಗಳನ್ನು ತಪ್ಪಿಸಲು ಎದುರಿನಿಂದ ಬರುವ ವಾಹನಗಳಿಗೆ ಹಾದಿ ಮಾಡಿಕೊಡಲು ಸ್ವಲ್ಪವೇ ಮೈಮರೆತರೂ ಸೇತುವೆ ಬದಿಗೆ ಬೀಳುವ ಅಪಾಯವಿದೆ.
Cut-off box - ಶಾಲೆಗೆ ಬಂದು ವಾಪಸಾದ ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆ ತಡವಾಗಿ ಶಾಲಾ– ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಕೆಲವು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡು ಶಾಲೆಗೆ ಬಂದು ವಾಪಸಾದರು. ‘ಬೆಳಿಗ್ಗೆಯಿಂದಲೇ ಎಡೆಬಿಡದೆ ಮಳೆ ಆಗುತ್ತಿತ್ತು. ರಜೆಯ ಘೋಷಣೆಯೂ ಅನಿಶ್ಚಿತವಾಗಿತ್ತು. ಮಳೆಯಲ್ಲೇ ಶಾಲೆಗೆ ಕರೆದೊಯ್ದಾಗ ರಜೆ ನೀಡಿದ್ದು ಗೊತ್ತಾಗಿದೆ. ಮುಂಚಿತವಾಗಿ ಹೇಳಿದ್ದರೆ ಮಳೆಯಲ್ಲಿ ತೊಯುವುದು ತಪ್ಪುತ್ತಿತ್ತು’ ಎಂದು ಪೋಷಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಇಂದು ಸಹ ರಜೆ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆ.20ರವರೆಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.