ADVERTISEMENT

ಯಾದಗಿರಿ: ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:53 IST
Last Updated 5 ನವೆಂಬರ್ 2025, 6:53 IST
ಯಾದಗಿರಿ ನಗರದಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಸಾಗಿದ ಪಾದಚಾರಿಗಳು
ಯಾದಗಿರಿ ನಗರದಲ್ಲಿ ಮಂಗಳವಾರ ಸುರಿದ ಮಳೆಯಲ್ಲಿ ಸಾಗಿದ ಪಾದಚಾರಿಗಳು   

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಶುರುವಾದ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ಜಿಟಿಜಿಟಿಯಾಗಿ ಸುರಿಯಿತು. ದಿನವಿಡೀ ಕಾರ್ಮೋಡ ಕವಿದ ವಾತಾವರಣ ಇದ್ದು, ಹನಿಹನಿಯಾಗಿ ಜಿನುಗಿದ ಮಳೆಗೆ ಜನಜೀವನವೂ ಅಸ್ತವ್ಯಸ್ತಗೊಂಡಿತು.

ಕೆಲವೊಮ್ಮೆ ಜೋರಾಗಿ, ಸಾಧಾರಣವಾಗಿ ಹಾಗೂ ಸೋನೆ ರೀತಿಯಲ್ಲಿ ಮಧ್ಯಾಹ್ನ 1ರ ವರೆಗೆ ಬಿಟ್ಟೂ ಬಿಡದೆ ಮಳೆ ಸುರಿಯಿತು. ಇದರಿಂದ ನಗರದ ರಸ್ತೆಗಳಲ್ಲಿ ಮಳೆ ನೀರು ಹರಿದಾಡಿತು. ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಜಿಟಿಜಿಟಿ ಮಳೆಗೆ ವ್ಯಾಪಾರವೂ ಥಂಡಾ ಹೊಡೆಯಿತು.

ಮೈಲಾಪುರ ಅಗಸಿ, ಗಂಜ್ ಸರ್ಕಲ್, ಹೊಸ ಬಸ್‌ ನಿಲ್ದಾಣ, ಚಕ್ರಕಟ್ಟಾ, ರೈಲ್ವೆ ಸ್ಟೇಷನ್ ಏರಿಯಾ, ಚಿತ್ತಾಪುರ ರಸ್ತೆ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್‌, ಲಕ್ಷ್ಮಿ ನಗರ, ಕೋಳಿವಾಡ, ಗಂಜ್‌ ಪ್ರದೇಶ, ರಾಜೀವ ಗಾಂಧಿ ನಗರ ಸೇರಿ ಹಲವೆಡೆಯ ರಸ್ತೆಗಳಲ್ಲಿ ಮಳೆ ನೀರು ಹರಿದಾಡಿತು.

ADVERTISEMENT

ಮಳೆಯಿಂದಾಗಿ ಹತ್ತಿಯು ಕಪ್ಪು ಬಣ್ಣಕ್ಕೆ ತಿರುಗುವ ಹಾಗೂ ಕಟಾವಿಗೆ ಬಂದಿರುವ ಭತ್ತವು ನೆಲಕಚ್ಚುವ ಆತಂಕ ರೈತರಲ್ಲಿ ಮೂಡಿದೆ. ಹಿಂಗಾರಿನ ಬೆಳೆಗಳ ಬಿತ್ತನೆ ಕಾರ್ಯಕ್ಕೂ ಮಳೆ ಅಡ್ಡಿಪಡಿಸಿತು.

ಗುರುಮಠಕಲ್‌ನ ಪಸ್ಪುಲ್ ಗ್ರಾಮದಲ್ಲಿ ಅತ್ಯಧಿಕ 72 ಮಿ.ಮೀ ಮಳೆಯಾಗಿದೆ. ಯಾದಗಿರಿಯ ಕಿಲ್ಲನಕೇರಾದಲ್ಲಿ 69.5, ಬೆಳಗುಂದಿ 67.5, ಅರಕೇರಾ (ಕೆ) 60.5 ಮಿ.ಮೀ ಮಳೆ ಸುರಿದಿದೆ.‌

ಉಳಿದಂತೆ ಚಪೆಟ್ಲಾದಲ್ಲಿ 56, ಗಾಜರಕೋಟ 52.5, ಹಳಿಗೇರಾ 38.5, ಬಿಳ್ಹಾರ 35.5, ಯಲ್ಹೇರಿ 34, ಹೊಗನಗೇರಾ 30, ಗುರುಮಠಕಲ್‌ 26.4, ಮುಂಡರಗಿ, ಮಲ್ಹಾರ್, ಚಂಡ್ರಕಿ, ಕೊಲ್ಲೂರು (ಎಂ), ಶಹಾಪುರ, ಸುರಪುರ ಸೇರೆ ಹಲವೆಡೆ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.