ಯಾದಗಿರಿ: ‘ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಳೆಯಿಂದ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ಮಾಡಿ, 15 ದಿನಗಳಲ್ಲಿ ಹಾನಿಯ ವರದಿಯನ್ನು ಸಲ್ಲಿಕೆ ಮಾಡಬೇಕು’ ಎಂದು ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಸೂಚಿಸಿದರು.
ಸತತ ಮಳೆಯಿಂದ ಬೆಳೆ ಹಾನಿಯಾಗಿರುವ ಯಾದಗಿರಿ ಮತಕ್ಷೇತ್ರದ ಕೊಯಿಲೂರು, ಪಗಲಾಪುರ, ಮುಷ್ಟೂರು ಸೇರಿ ಇತರೆ ಗ್ರಾಮಗಳ ಜಮೀನುಗಳಿಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
‘ವ್ಯಾಪಕ ಮಳೆಯಿಂದಾಗಿ ತೊಗರಿ, ಹತ್ತಿ ಸೇರಿ ಇತರೆ ಬೆಳೆಗಳಿಗೆ ಹಾನಿಯಾಗಿದೆ. ಮೂರು ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ಮಾಡಬೇಕು’ ಎಂದರು.
‘ನದಿ ತೀರದ ಗ್ರಾಮಗಳ ಪ್ರದೇಶದಲ್ಲಿ ಪ್ರವಾಹದಿಂದಾಗಿ ಹಾನಿಯಾಗಿರುವ ಬೆಳೆ ಸಮೀಕ್ಷೆಯನ್ನು ಕೈಗೊಂಡು ತುರ್ತಾಗಿ ವರದಿಯನ್ನು ಕೊಡಬೇಕು. ಸರ್ಕಾರದ ಮಾರ್ಗಸೂಚಿ ಅನ್ವಯ ಸೂಕ್ತ ಬೆಳೆ ಪರಿಹಾರವನ್ನು ನೈಜ್ಯ ಫಲಾನುಭವಿ ರೈತರಿಗೆ ನೀಡಬೇಕು’ ಎಂದು ಹೇಳಿದರು.
ಯಾದಗಿರಿ ತಹಶೀಲ್ದಾರ್ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕ ಸುರೇಶ, ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ರೈತರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.