ಯಾದಗಿರಿ: ‘ಪ್ರತಿಯೊಬ್ಬರಲ್ಲಿಯೂ ಒತ್ತಡ ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ, ಒತ್ತಡ ಮತ್ತು ಸವಾಲುಗಳನ್ನು ಎದುರಿಸಲು ಆಗದೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.
ಇಲ್ಲಿನ ಜಿಲ್ಲಾ ನ್ಯಾಯಲಯದ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳು ಹಾಗೂ ಯುವಕರು ಭಯ, ಕೋಪ ಮತ್ತು ದುಃಖದ ಭಾವನೆಗಳನ್ನು ಎದುರಿಸಲಾಗದೆ ಪರದಾಡುತ್ತಿದ್ದಾರೆ. ಆತಂಕದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.
ಮನುಷ್ಯರು ತಮ್ಮ ನಿತ್ಯದ ಬದುಕಿನಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ಎದುರಿಸಲಾಗದೆ ಸಂಕಷ್ಟಗಳನ್ನು ತಂದುಕೊಳ್ಳುತ್ತಿದ್ದಾರೆ. ಗಂಡು ಮತ್ತು ಹೆಣ್ಣು ಎಂಬ ಭೇದವಿಲ್ಲ ಮಾನಸಿಕ ರೋಗ ಎಲ್ಲರನ್ನೂ ಕಾಡುತ್ತಿದೆ. ಒತ್ತಡ, ಅತಂಕ ಮತ್ತು ಖಿನ್ನತೆಯಿಂದ ಬಳಲದೆ ಹೊರ ಬರಬೇಕು. ಮಾನಸಿಕ ಸಮಸ್ಯೆಗಳಿಗೆ 14416 ಸಹಾಯವಾಣಿಗೆ ಕರೆ ಮಾಡಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮನೋವೈದ್ಯ ಡಾ. ಅಮಿತ್ ಕುಮಾರ್ ಮಾತನಾಡಿ, ‘ಮಾನಸಿಕ ಅಸ್ವಸ್ಥತೆ ಬಳಲುತ್ತಿರುವವರಿಗೆ ಎಲ್ಲಾ ಕಡೆಗಳಲ್ಲಿ ಚಿಕಿತ್ಸೆ ಸಿಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆಯನ್ನು ಪಡೆಯುವ ಹಕ್ಕಿದೆ’ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಎಸ್.ಪಾಟೀಲ ಮಾತನಾಡಿ, ‘ಎಲ್ಲಾರೂ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ. ಈರಣ್ಣ, ಹಿರಿಯ ಸಿವಿಲ್ ನ್ಯಾಯಾಧೀಶ ಬಾಳಾಸಾಹೇಬ್ ವಡವಾಡೆ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಅರುಣ್ ಚೌಗುಲೆ, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ರಾಹುಲ್ ರಾವ್ ಪಸ್ಥಿತರಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ನಿರೂಪಿಸಿದರು. ವಕೀಲ ಭೀಮಾಶಂಕರ್ ಆಶನಾಳ್ ಅವರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.