ADVERTISEMENT

ಯಾದಗಿರಿ| ರಕ್ತಹೀನತೆ ತಡೆಗೆ ಜಂತುಹುಳು ಮಾತ್ರೆ ನೀಡಿ: ಜಿಪಂ ಸಿಇಒ

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ; ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:01 IST
Last Updated 11 ಫೆಬ್ರುವರಿ 2026, 7:01 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಿದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಿದರು   

ಯಾದಗಿರಿ: ‘ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಡಿ ಯಾವುದೇ ಅರ್ಹ ಮಕ್ಕಳು ಜಂತುನಿವಾರಕ ಮಾತ್ರೆ ಸೇವನೆಯಿಂದ ವಂಚಿತ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೇಳಿದರು.

ನಗರದ ಸ್ಟೇಷನ್ ಬಜಾರ್ ಪ್ರದೇಶದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್‌ಸಿಎಚ್ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘1ರಿಂದ 19 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣೆ ಮಾತ್ರೆಗಳನ್ನು ನೀಡಬೇಕು. ಮಕ್ಕಳಲ್ಲಿನ ರಕ್ತಹೀನತೆ, ಅ‍ಪೌಷ್ಟಿಕತೆ ನಿರ್ಮೂಲನೆ ಮಾಡುವಂತ ಇಂತಹ ಕಾರ್ಯಕ್ರಮಕ್ಕೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರತಿಯೊಬ್ಬರು ಸಹಕರಿಸಬೇಕು’ ಎಂದರು.

ADVERTISEMENT

ಡಿಎಚ್‌ಒ ಡಾ.ಮಹೇಶ ಬಿರಾದರ ಮಾತನಾಡಿ, ‘ಹೊಟ್ಟೆಯಲ್ಲಿ ಜಂತುಹುಳು ಇದ್ದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತೊಂದರೆ ಆಗುತ್ತದೆ. ತಿಂದಂತಹ ಆಹಾರ ಮಕ್ಕಳ ಮೈಗೆ ಸಹ ಹತ್ತುವುದಿಲ್ಲ. ಮಕ್ಕಳಲ್ಲಿ ಮತ್ತು ಹದಿ–ಹರೆಯದರಲ್ಲಿ ಕಂಡುಬರುವ ಜಂತುಭಾದೆಯನ್ನು ತಡೆದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 1ರಿಂದ 19 ವರ್ಷ ಒಳಗೆ 5.13 ಲಕ್ಷ ಮಕ್ಕಳಿದ್ದಾರೆ. ಇದರಲ್ಲಿ ಅಂಗನವಾಡಿ ಮಕ್ಕಳು 1.51 ಲಕ್ಷ, ಅಂಗನವಾಡಿಯಿಂದ ಹೊರಗುಳಿದ ಮಕ್ಕಳು 7,577 ಇದ್ದಾರೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿ  3.61 ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. 18,678 ಮಕ್ಕಳು ಪಿಯು ಹಾಗೂ ಐಟಿಐ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ 1,956 ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ. ಪ್ರತಿ ಮಕ್ಕಳಿಗೆ ಮಾತ್ರೆ ನುಂಗಿಸಲು ಖಾಸಗಿ ಶಾಲೆಗಳೂ ಸಹಕರಿಸಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್ಒ ಡಾ.ಕೆ.ಮಲ್ಲಪ್ಪ, ‘ಶೌಚಾಲಯಕ್ಕೆ ಹೋಗಿ ಬಂದ ಬಳಿಕ, ಊಟಕ್ಕೂ ಮುನ್ನ ಕೈಗಳನ್ನು ತೊಳೆದುಕೊಳ್ಳಬೇಕು. ಸ್ವಚ್ಛತೆಗೆ ಸದಾ ಆದ್ಯತೆಯೂ ಕೊಟ್ಟರೆ ಜಂತುಹುಳು ಬಾಧೆ ಆರಂಭಿಕ ಹಂತದಲ್ಲಿ ತಡೆಯಬಹುದು’ ಎಂದರು.

‘ಜಂತುಹುಳು ಬಾಧಿಸಿದರೆ ಮಕ್ಕಳಲ್ಲಿ ರಕ್ತಹೀನತೆ ಕಂಡುಬಂದು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಓದು ಮತ್ತು ಆಟೋಟಗಳಲ್ಲಿ ಚಟುವಟಿಕೆಯಿಂದ ಪಾಲ್ಗೊಳ್ಳಲು ಆಗುವುದಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡು ಮಗು ಶಾಲೆಗೆ ಗೈರಾಗಿ, ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಾಜೀದ್, ಟಿಎಚ್‌ಒಗಳಾದ ಡಾ.ಹಣಮಂತರೆಡ್ಡಿ, ತುಳಸಿರಾಮ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಗನ್ನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ್, ಜಿಲ್ಲಾ ಆರ್‌ಕೆಎಸ್‌ಕೆ ಸಂಯೋಜಕ ರಾಣೋಜಿ ಪ್ರಭುಲಿಂಗ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮನೋಹರ್ ಪಾಟೀಲ, ಸುದರ್ಶನ್, ಪಿಎಚ್‌ಸಿ ವೈದ್ಯ ಡಾ.ವಿನುತಾ ಉಪಸ್ಥಿತರಿದ್ದರು.

ಕೆಲ ಖಾಸಗಿ ಶಾಲೆಗಳ ಅಸಹಕಾರ

‘ಅರ್ಜ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಕೊಡುವುದು ಕಡ್ಡಾಯ. ಆದರೆ ಕೆಲವು ಖಾಸಗಿ ಶಾಲೆಗಳು ಸರಿಯಾಗಿ ಸಹಕಾರ ಕೊಡುತ್ತಿಲ್ಲ’ ಎಂದು ಆರ್‌ಸಿಎಚ್ಒ ಡಾ.ಕೆ.ಮಲ್ಲಪ್ಪ ತಿಳಿಸಿದರು. ‘ಗ್ರಾಮೀಣ ಹಾಗೂ ಸರ್ಕಾರ ಶಾಲೆಗಳ ಪೋಷಕರು ಉತ್ತಮವಾಗಿ ಸಹಕಾರ ಕೊಡುತ್ತಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಮೊದಲ ದಿನ 40 ಖಾಸಗಿ ಶಾಲೆಗಳಿಗೆ ತೆರಳಿದ್ದು ಸುಮಾರು 20 ಶಾಲೆಗಳ ಆಡಳಿತ ಮಂಡಳಿಯವರು ಸಹಕಾರ ನೀಡಲಿಲ್ಲ. ಮಕ್ಕಳ ಪೋಷಕರ ಅನುಮತಿಸಿದರೆ ಮಾತ್ರ ಮಾತ್ರೆಗಳನ್ನು ನೀಡುವಂತೆ ಹೇಳಿದ್ದಾರೆ. ಖಾಸಗಿ ಶಾಲೆಗಳ ಸುಮಾರು 12 ಸಾವಿರ ಮಕ್ಕಳ ಪೈಕಿ 2 ಸಾವಿರದಷ್ಟು ಮಕ್ಕಳಿಗೆ ಮಾತ್ರೆ ಕೊಡಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.