ADVERTISEMENT

ಯಾದಗಿರಿ: ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ಸರ್ಕಾರದ ನಡೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:36 IST
Last Updated 10 ಡಿಸೆಂಬರ್ 2025, 6:36 IST
ಯಾದಗಿರಿಯಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿದರು
ಯಾದಗಿರಿಯಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿದರು   

ಯಾದಗಿರಿ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ರ ಪ್ರಸ್ತಾವಿತ ತಿದ್ದುಪಡಿ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿದರು.

ಕ್ಯಾಬಿನೆಟ್ ಸಭೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿಯನ್ನು ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿರುವುದು ತಿಳಿದು ಬಂದಿದೆ. ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಒಂದೇ ವಾಹನದಲ್ಲಿ ನಿಗದಿಗಿಂತ ಹೆಚ್ಚು ಜಾನುವಾರುಗಳನ್ನು ದುಡ್ಡಿನ ಆಸೆಗಾಗಿ ಕ್ರೂರವಾಗಿ ಒಂದರ ಮೇಲೊಂದು ಹಾಕಿ ಸಾಗಾಟ ಮಾಡಲಾಗುತ್ತಿದೆ. 2021ರಲ್ಲಿ ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಯಾದ ನಂತರ ಕ್ರೂರತೆಯು ಒಂದಷ್ಟು ಕಡಿಮೆ ಆಗಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣದಿಂದ ಹಲವು ಕಡೆಗಳಲ್ಲಿ ಹಣದ ಆಸೆಗಾಗಿ ವಾಹನದ ಮಾಲೀಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ. ಇಂತಹ ಕೃತ್ಯಗಳನ್ನು ನಿಯಂತ್ರಿಸಬೇಕಾದರೆ ಕಾಯ್ದೆಯನ್ನು ಇನ್ನಷ್ಟು ಕಠಿಣ ರೀತಿಯಲ್ಲಿ ಅನುಷ್ಠಾನಕ್ಕೆ ತರುವುದು ಅವಶ್ಯವಿದೆ ಎಂದು ಹೇಳಿದ್ದಾರೆ.

ಜಾನುವಾರ ಅಕ್ರಮ ಸಾಗಾಣೆಯಲ್ಲಿ ವಶಪಡಿಸಿಕೊಂಡ ವಾಹನಗಳ ತಾತ್ಕಾಲಿಕ ಹಸ್ತಾಂತರಕ್ಕೆ ಬ್ಯಾಂಕ್ ಗ್ಯಾರಂಟಿ ಕೊಡುವುದನ್ನು ಕೈ ಬಿಡುವ ಬಗ್ಗೆ ಕಾಯ್ದೆಯನ್ನು ತಿದ್ದುಪಡಿ ಮಾಡದಂತೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ರೀತಿಯಲ್ಲಿ ಮಾತ್ರ ಜಾನುವಾರುಗಳನ್ನು ಸಾಗಾಟ ಮಾಡುವಂತೆ ಕಾನೂನು ಜಾಗೃತಿ ಮಾಡಬೇಕು. ಈ ಕಾಯ್ದೆ ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲ, ಸಂರಕ್ಷಣೆಯೂ ಒಳಗೊಂಡಿದೆ ಎಂದಿದ್ದಾರೆ.

ವಾಹನದ ಮಾಲೀಕರು ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ಆಗಬಹುದಾದಂತ ಹಿಂಸೆ, ಗಾಯಗಳಿಂದ ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ. ಅದಕ್ಕಾಗಿ ಜಾನುವಾರು ಸಾಗಾಟ ನಿಯಮಾವಳಿಗಳನ್ನು ವಾಹನ ಮಾಲೀಕರೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮನೋಭಾವ ಸೃಷ್ಟಿಯಾಗಲು ಬಿಗಿಯಾದಂತ ಕಾನೂನು ರಚಿಸಲಾಗಿತ್ತು. ಈಗ ಕಾನೂನು ದುರ್ಬಲಗೊಳಿಸುವ ಮೂಲಕ ವಾಹನಗಳಲ್ಲಿ ಜಾನುವಾರು ಸಾಗಾಟಗಾರರು ಹಾಗೂ ಗೋ ಹಂತಕರಿಗೆ ಕಾಂಗ್ರೆಸ್ ಸರಕಾರವು ನಿರ್ಭಯ ಕೊಟ್ಟಂತಾಗಿದೆ ಎಂದು ಆರೋಪಿಸಿದ್ದಾರೆ.

ಕಾಯ್ದೆಯ ತಿದ್ದುಪಡಿ ಮಾಡಿದರೆ ಜಾನುವಾರ ಹಿಂಸೆ ಹಾಗೂ ಹತ್ಯೆ ಹೆಚ್ಚಾಗಲಿದೆ. ಇದು ಹಿಂದೂಗಳಿಗೆ ಪೂಜನೀಯವಾಗಿರುವ ಗೋವುಗಳಿಗೆ ನೋವು, ಹಿಂಸೆ ಮಾಡಲು ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಟ್ಟಿರುವುದು ರಾಜ್ಯದಲ್ಲಿ ಅಶಾಂತಿ, ಅರಾಜಕತೆಗೆ ಕಾರಣವಾಗಬಹುದು. ಗೋವುಗಳ ಕಳ್ಳ ಸಾಗಾಟಗಾರರಿಗೆ ಈ ತಿದ್ದುಪಡಿಯಿಂದ ನಿರ್ಭಯತ್ವ ಕೊಟ್ಟಂತಾಗಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ಸಂವಿಧಾನದ ಆರ್ಟಿಕಲ್ 51ಎ ಪ್ರಕಾರ ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ. ಇದು ಕರ್ನಾಟಕ ಸರಕಾರಕ್ಕೂ ಅನ್ವಯವಾಗುತ್ತದೆ. ಇದು ಜೀವಿಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿಯಾಗಿದೆ. ಹೀಗಾಗಿ, ಸಂವಿಧಾನದ ರಕ್ಷಣೆಗಾಗಿ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಲಬುರಗಿ ವಿಭಾಗದ ಸಹ ಸಂಯೋಜಕ ಶಿವಕುಮಾರ ಸುಕಲೂರ್, ಜಿಲ್ಲಾ ಸಂಯೋಜಕ ಮಲ್ಲು ಮ್ಯಾಳಗಿ, ಸಹ ಕಾರ್ಯದರ್ಶಿ ಚನ್ನಬಸವ ಮುದಗಲ್, ಪ್ರಮುಖರಾದ ತಾಯಪ್ಪ ಶಂಡಗಿ, ಶ್ರೀಶೈಲ ಹೊನ್ನೆ, ಬನದೇಶ್ವರ ವಾರದ, ಸಾಯಿ ಅಂಬಿಗರ, ಚಂದ್ರು ಅನಪುರ, ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.