
ಯಾದಗಿರಿ: ಸದಾ ಕಾರ್ಯದೊತ್ತಡದಲ್ಲಿ ಮುಳುಗಿರುತ್ತಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗುರುವಾರ ಪರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕೆಲಕಾಲ ಒತ್ತಡ ಮರೆತು ಉತ್ಸಾಹದಿಂದ ಪಾಲ್ಗೊಂಡು ಆಟೋಟಗಳನ್ನು ಸಂಭ್ರಮಿಸಿದರು.
ಆರೋಪಿಗಳ ಪತ್ತೆ, ಸಭೆ, ಸಾರ್ವಜನಿಕ ರ್‍ಯಾಲಿ, ಪ್ರತಿಭಟನೆ ನಿರತರಿಗೆ ಭದ್ರತೆ ಮತ್ತು ಅವರ ಮೇಲೆ ನಿಗಾ, ಅಪರಾಧ ಪ್ರಕರಣಗಳನ್ನು ಬಯಲಿಗೆ ಎಳೆಯುವುದು... ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ನಿರತವಾಗಿ ಇರುತ್ತಿದ್ದ ಪೊಲೀಸರು ಶೂ, ಟ್ರ್ಯಾಕ್ ಸೂಟ್ ಧರಿಸಿ ಪರೇಡ್ ಮೈದಾನಕ್ಕೆ ಇಳಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ಗೆದ್ದು ಬಹುಮಾನ ಗಿಟ್ಟಿಸಿಕೊಳ್ಳಲು ತಮ್ಮವರೊಂದಿಗೆ ಉತ್ಸಾಹದಿಂದ ಭಾಗವಹಿಸಿದರು.
ಕ್ರೀಡಾಕೂಟದ ಚಾಲನೆಗೂ ಮುನ್ನ ಮಹಿಳಾ ತಂಡ, ವಿಶೇಷ ತಂಡ, ಸುರಪುರ ತಾಲ್ಲೂಕು ಘಟಕ ತಂಡ, ಶಹಾಪುರ ತಾಲ್ಲೂಕು ಘಟಕ ತಂಡ, ಡಿಎಆರ್ ಯಾದಗಿರಿ ತಂಡ ಹಾಗೂ ಯಾದಗಿರಿ ತಾಲ್ಲೂಕು ಘಟಕ ತಂಡಗಳು ಆಕರ್ಷಕ ಪಥಸಂಚಲನ ನಡೆಸಿ, ಮೈದಾನದ ವೇದಿಕೆಯ ಮುಭಾಗದಲ್ಲಿ ಶಿಸ್ತುಬದ್ಧವಾಗಿ ಬಂದು ನಿಂತರು. ಬಳಿಕ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆಗಿರುವ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಮೂರು ದಿನಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 100 ಮೀಟರ್ ಓಟದ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಸಿಬ್ಬಂದಿ ವೇಗವಾಗಿ ಓಡಿ ಗುರಿ ಮುಟ್ಟಿದರು. ಸುತ್ತಲೂ ನಿಂತಿದ್ದ ಅವರ ಸಹದ್ಯೋಗಿಗಳು ಕೂಗಾಡುತ್ತಾ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.
ಪುರುಷ ಮತ್ತು ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಲಿಪಿಕ ಅಧಿಕಾರಿ/ ಸಿಬ್ಬಂದಿ ವರ್ಗದ ನೂರಾರು ಕ್ರೀಡಾಪಟುಗಳು ಡಿಸ್ಕಸ್ ಥ್ರೋ, ಶಾಟ್‌ಪಟ್, 100, 200, 800, 1,500, 5,000 ಮೀಟರ್ ಓಟ, 4x100, 4x400 ರಿಲೇ, ಹೈಜಂಪ್, ಪಿಸ್ತೂಲ್, ಎಸ್‌ಎಲ್‌ಆರ್ ಮತ್ತು ಎಕೆ 47 ರೈಫಲ್ ಶೂಟಿಂಗ್, ವಾಲಿಬಾಲ್, ಕಬಡ್ಡಿ, ಕೊಕ್ಕೊ, ಟೆನ್ನಿಸಿ, ಬ್ಯಾಡ್ಮಿಂಟನ್, ಉದ್ದ ಜಿಗಿತ, ಎತ್ತರ ಜಿಗತ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಸ್ಪರ್ಧಿಸುವರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ, ‘ಸಮಾಜದಲ್ಲಿನ ಸಾಮಾಜಿಕ ಸ್ವಾಸ್ಥ್ಯವನ್ನು ನಾವು ಮಾಡುವ ಕೆಲಸದ ಮೂಲಕ ತೋರಿಸಬೇಕು. ನೈಜ, ಶಿಸ್ತುಬದ್ಧವಾಗಿ ತಂಡದ ರೂಪದಲ್ಲಿ ತೋರ್ಪಡಿಸಿದರೆ ಅದು ಇನ್ನಷ್ಟು ಆರೋಗ್ಯ ಪೂರ್ಣವಾಗಿ ಇರುತ್ತದೆ’ ಎಂದರು.
‘ಎಲ್ಲ ವಿಷಯಗಳನ್ನು ಕಲಿತು, ಈ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ನೋಡಿ ಸಂತೋಷದಿಂದ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್ ಎಸ್.ಪಿ., ಡಿವೈಎಸ್‌ಪಿಗಳಾದ ಭರತಕುಮಾರ ತಳವಾರ, ನಾಗರಾಜ್, ಸುರೇಶ, ಪಿಐ ಸುನಿಲ್‌ಕುಮಾರ್, ಪಿಎಸ್‌ಐ ಮಂಜೇಗೌಡ, ಮಂಜುಳಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.