ಅಮಾನತು
ಯಾದಗಿರಿ: ಹಲ್ಲೆ, ಜೀವ ಬೆದರಿಕೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ದೂರುದಾರರಿಂದ ಹಣ ಪಡೆದ ಆರೋಪದಡಿ ಇಬ್ಬರು ಪೊಲೀಸರನ್ನು ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಮಂಗಳವಾರ ಅಮಾನತು ಮಾಡಿದ್ದಾರೆ.
ಗುರುಮಠಕಲ್ ಪೊಲೀಸ್ ಠಾಣೆಯ ಎಎಸ್‌ಐ ಗೋಪಾಲರೆಡ್ಡಿ ಹಾಗೂ ಹೆಡ್‌ಕಾನ್‌ಸ್ಟೆಬಲ್ ವಿಶ್ವನಾಥರೆಡ್ಡಿ ಅಮಾನತು ಆದವರು. ಮಿನಾಸಪುರದ ಅನುಸೂಯಾ ವೆಂಟಕರಡ್ಡಿ ಅವರು ನೀಡಿದ ದೂರಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅನುಸೂಯಾ ಅವರ ಪತಿ ಹಾಗೂ ಮಗನ ಮೇಲೆ ಯಾದಯ್ಯ, ಮಲ್ಲಯ್ಯ, ಗೋಪಿ ಸೇರಿ ಐವರು ಹಲ್ಲೆ ಮಾಡಿದ್ದರು. ಈ ಸಂಬಂಧ ಅನುಸೂಯಾ ಅವರು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲು ಗೋಪಾಲರೆಡ್ಡಿ ಹಾಗೂ ವಿಶ್ವನಾಥರೆಡ್ಡಿ ₹ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಒಬ್ಬರು ಫೋನ್ ಪೇ ಮೂಲಕ ₹ 10 ಸಾವಿರ ಹಾಗೂ ಮತ್ತೊಬ್ಬರು ₹ 10 ಸಾವಿರ ನಗದು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಡಿವೈಎಸ್‌ಪಿ ಸುರೇಶ ಅವರು ಈ ಬಗ್ಗೆ ವಿಚಾರಣೆ ನಡೆಸಿ ಎಸ್‌ಪಿ ಅವರಿಗೆ ವರದಿ ಸಲ್ಲಿಸಿದರು. ವರದಿ ಆಧರಿಸಿ ಈ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.