ADVERTISEMENT

ಯಾದಗಿರಿ: ವಿಜ್ಞಾನ ಕಲಿಕೆಗೆ ಮದರಂಗಿ ರಂಗು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಮನೆಯಂಗಳದಲ್ಲೂ ವಿಜ್ಞಾನದ ರಂಗೋಲಿ

ಮಲ್ಲಿಕಾರ್ಜುನ ನಾಲವಾರ
Published 29 ಜನವರಿ 2026, 8:08 IST
Last Updated 29 ಜನವರಿ 2026, 8:08 IST
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಗೈಗಳ ಮದರಂಗಿಯಲ್ಲಿ ಮೂಡಿದ ವಿಜ್ಞಾನದ ಚಿತ್ರಗಳು
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಗೈಗಳ ಮದರಂಗಿಯಲ್ಲಿ ಮೂಡಿದ ವಿಜ್ಞಾನದ ಚಿತ್ರಗಳು   

ಯಾದಗಿರಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮನೆ ಮುಂದಿನ ‘ರಂಗೋಲಿ’ ಅಂಗಳ ಹಾಗೂ ವಿದ್ಯಾರ್ಥಿಗಳ ‘ಮದರಂಗಿ’ ಹಚ್ಚಿಕೊಳ್ಳುವ ಅಂಗೈಯನ್ನು ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯದಲ್ಲಿನ ಚಿತ್ರಗಳಿಗಾಗಿ ಚಿತ್ರಪಟದಂತೆ ಬಳಸಿಕೊಳ್ಳುತ್ತಿದೆ.

ಕಳೆದ ವರ್ಷ ಶೇ 51.60ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 33ನೇ ಸ್ಥಾನ ಪಡೆದಿತ್ತು. ಅದರ ಹಿಂದಿನ ವರ್ಷದಲ್ಲಿ ಶೇ 50.63ರಷ್ಟು ತೇರ್ಗಡೆಯೊಂದಿಗೆ ಕೊನೆಯ ಸ್ಥಾನ (35) ಗಳಿಸಿತ್ತು. ಈ ಹಿಂದಿನ ವರ್ಷದ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಲು ಶಿಕ್ಷಣ ಇಲಾಖೆಯು ಈ ವಿಭಿನ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. 

ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು ಕಠಿಣವಾಗಿವೆ. ಇದಕ್ಕೆ ಪರಿಹಾರ ಎಂಬಂತೆ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳಿಂದ ತಮ್ಮ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಗೂ ಕೈಗಳ ಮೇಲೆ ಮೆಹಂದಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಚಿತ್ರಿಸಿ ಗಮನಸೆಳೆದಿದೆ. ಇದಕ್ಕೆ ಮಕ್ಕಳ ಪೋಷಕರಿಂದಲೂ ಬೆಂಬಲ ವ್ಯಕ್ತವಾಗಿದೆ.

ADVERTISEMENT

ಮನೆಯ ಮುಂದಿನ ಅಂಗಳದಲ್ಲಿ ಜೀವವಿಜ್ಞಾನ ಮತ್ತು ರಸಾಯಾನವಿಜ್ಞಾನ ವಿಭಾಗದಲ್ಲಿನ ಮಾನವ ದೇಹದ ಅಂಗಗರಚನೆ, ಜೀರ್ಣಾಂಗ ವ್ಯೂಹ, ನರಕೋಶ, ಹೃದಯ, ಗಿಡ, ಎಲೆ, ಹೂವು, ಪತ್ರಹರಿತ್ತು, ರಸಾಯಾನವಿಜ್ಞಾನದಲ್ಲಿನ ಲೋಹಗಳ ಶುದ್ಧೀಕರಣ, ಕಾಂತಿಯ ಕ್ಷೇತ್ರ ಸೇರಿ ಹಲವು ಚಿತ್ರಗಳನ್ನು ರಚಿಸುತ್ತಿದ್ದಾರೆ. ಗಣಿತದಲ್ಲಿನ ರೇಖಾಚಿತ್ರಗಳು, ಪ್ರಮೇಯಗಳು, ಸಮಾಜ–ವಿಜ್ಞಾನದಲ್ಲಿನ ಭಾರತದ ನಕ್ಷೆಯಂತಹ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಜೊತೆಗೆ ಅವುಗಳ ಭಾಗಗಳನ್ನು ಗುರುತಿಸಿ, ಹೆಸರುಗಳನ್ನು ಬರೆದಿರುವ ರಂಗೋಲಿಯ ಫೋಟೊಗಳನ್ನು ತಮ್ಮ ಶಿಕ್ಷಕರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಂಡು ಪ್ರಶಂಸೆ ಪಡೆದಿದ್ದಾರೆ.

ಮೆಹಂದಿ ಅಥವಾ ಮದರಂಗಿ ಹೆಂಗಳೆಯರಿಗೆ ಅಚ್ಚುಮೆಚ್ಚು. ಅಂಗೈ ಸೌದರ್ಯ ವೃದ್ಧಿಸುವ ಮದರಂಗಿ ಕಲೆಯೂ ವಿಜ್ಞಾನ ಕಲಿಕೆಯ ಸಾಧನವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ತಮ್ಮ ಅಂಗೈಯಲ್ಲಿ ವಿಜ್ಞಾನ ಪಠ್ಯದಲ್ಲಿನ ಸೂಕ್ಷ್ಮವಾಗಿ ಚಿತ್ರಗಳನ್ನು ಬಿಡಿಸಿಕೊಂಡಿದ್ದು, ಪುಟ್ಟದಾದ ಅಂಗೈಗಳು ಚಿತ್ರಪಟದಂತೆ ಕಾಣುತ್ತವೆ. 

‘ಮಕ್ಕಳು ರಂಗೋಲಿ ಹಾಗೂ ಮೆಹಂದಿಯೊಂದಿಗೆ ಒಡನಾಟ ಇರಿಸಿಕೊಂಡಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಮನೆಯ ಮುಂದಿನ ವಿಶಾಲವಾದ ಅಂಗಳದಲ್ಲಿ ನಿತ್ಯ ರಂಗೋಲಿ ಬಿಡಿಸುವುದು ಸಾಮಾನ್ಯ. ಹಬ್ಬ, ಮನೆಯ ಶುಭ ಕಾರ್ಯಗಳ ವೇಳೆ ಮೆಹಂದಿ ಹಂಚಿಕೊಳ್ಳುವ ಸಂಪ್ರದಾಯವಿದೆ. ರಂಗೋಲಿ ಮತ್ತು ಮೆಹಂದಿಯಲ್ಲಿ ವಿಜ್ಞಾನ ಪಠ್ಯದಲ್ಲಿನ ಚಿತ್ರಗಳನ್ನು ಬಿಡಿಸುತ್ತಲೇ ವಿದ್ಯಾರ್ಥಿಗಳಿಗೆ ಪಾಠವನ್ನು ಸರಳವಾಗಿ ಅರ್ಥೈಸಿಕೊಳ್ಳುವಂತೆ ಹಾಗೂ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳುವ ಚಿತ್ರಗಳನ್ನು ರಚಿಸಿ, ಅವುಗಳ ಭಾಗಗಳನ್ನು ಗುರುತಿಸಿಲು ನೆನಪಿನ ಶಕ್ತಿಯಾಗಿಲಿವೆ’ ಎನ್ನುತ್ತಾರೆ ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕ ಸಂತೋಷ.

ಉತ್ತೀ‌ರ್ಣರಾಗಲು ಪ್ರೇರಣೆ: ‌ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ–1ರಲ್ಲಿ ಜಿಲ್ಲೆಯ 14,286 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 10,279 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. 4,007 ಮಕ್ಕಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ನಪಾಸಾದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಮುಂದಿನ ಪರೀಕ್ಷೆಗೆ ಉತ್ತೀರ್ಣರಾಗುವಂತೆ ಪ್ರೇರಣೆಯಾಗುತ್ತಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯು ಮನೆ ಮುಂದಿನ ಅಂಗಳದಲ್ಲಿ ರಂಗೋಲಿಯಲ್ಲಿ ಬಿಡಿಸಿದ ಲೋಹ ಶುದ್ಧೀಕರಣದ ಚಿತ್ರ

‘ಅಂಕ ಗಳಿಕೆಯ ಅಭ್ಯಾಸ’

‘ಪರೀಕ್ಷೆಗಾಗಿ ವಿಜ್ಞಾನ ಪಠ್ಯದಲ್ಲಿ 18 ಚಿತ್ರಗಳಿದ್ದು ವಿದ್ಯಾರ್ಥಿಗಳು ಅವುಗಳ ಅರ್ಥೈಸಿಕೊಂಡು ಸರಿಯಾಗಿ ಬಿಡಿಸಿ ಭಾಗಗಗಳನ್ನು ಗುರುತಿಸಿದರೆ 13 ಅಂಕಗಳು ಸಿಗುತ್ತವೆ. ಹೀಗಾಗಿಯೇ ರಂಗೋಲಿ ಮೆಹಂದಿಯಂತಹ ಕಲೆಗಳನ್ನು ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯ ಅಭ್ಯಾಸವನ್ನಾಗಿ ಮಾಡಿದ್ದೇವೆ’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಮನೆಯ ಮುಂದೆ ಚುಕ್ಕಿ ಇರಿಸಿ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಬದಲು ಭವಿಷ್ಯವನ್ನು ರೂಪಿಸುವ ಪಠ್ಯದಲ್ಲಿನ ಚಿತ್ರಗಳನ್ನು ರಚಿಸುವಂತೆ ಹೇಳಿದ್ದು ಪೋಷಕರು ಸಹಕರಿಸಿದ್ದಾರೆ. ಒಂದು ತಿಂಗಳು ನಿತ್ಯ ಒಂದೊಂದು ಚಿತ್ರಗಳನ್ನು ಬಿಡಿಸಿದರೆ ಪರೀಕ್ಷೆಯ ವೇಳೆಗೆ ಎಲ್ಲ ಚಿತ್ರಗಳನ್ನು ಕಲಿತು ಕಣ್ಣು ಮುಚ್ಚಿ ಚಿತ್ರಗಳನ್ನು ರಚಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.