ADVERTISEMENT

ಯಾದಗಿರಿ | ಖಜಾನೆಗೆ ವರವಾದ ಕರ ಸಂಗ್ರಹ ಅಭಿಯಾನ

ಮಲ್ಲಿಕಾರ್ಜುನ ನಾಲವಾರ
Published 26 ಜನವರಿ 2026, 7:47 IST
Last Updated 26 ಜನವರಿ 2026, 7:47 IST
ಯಾದಗಿರಿಯ ಹುಣಸಗಿ ತಾಲ್ಲೂಕಿನ ಅರಕೇರ (ಜೆ) ಗ್ರಾಮದಲ್ಲಿ ಬ್ಯಾಂಡ್ ಬಾಜಾದೊಂದಿಗೆ ಕರ ವಸೂಲಿಗೆ ತೆರಳಿದ್ದ ಪಂಚಾಯಿತಿ ಸಿಬ್ಬಂದಿ
ಯಾದಗಿರಿಯ ಹುಣಸಗಿ ತಾಲ್ಲೂಕಿನ ಅರಕೇರ (ಜೆ) ಗ್ರಾಮದಲ್ಲಿ ಬ್ಯಾಂಡ್ ಬಾಜಾದೊಂದಿಗೆ ಕರ ವಸೂಲಿಗೆ ತೆರಳಿದ್ದ ಪಂಚಾಯಿತಿ ಸಿಬ್ಬಂದಿ   

ಯಾದಗಿರಿ: ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕರ ಸಂಗ್ರಹಣೆಯಲ್ಲಿ ಏದುಸಿರು ಬಿಡುತ್ತಿದ್ದ ಗ್ರಾಮ ಪಂಚಾಯಿತಿಗಳು ಈ ವರ್ಷ ನಿರೀಕ್ಷೆಗೂ ಮೀರಿ ಸಾಧನೆ ಮಾಡಿವೆ. ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿರುವ ‘ಒಂದು ದಿನದ ಕರ ವಸೂಲಿ ವಿಶೇಷ ಅಭಿಯಾನ’ ಇದಕ್ಕೆ ವರವಾಗಿದೆ.

122 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷ ಕರ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿರಲಿಲ್ಲ. ಪ್ರತಿ ಗ್ರಾಮಗಳಲ್ಲಿ ಬೇಸಾಯವೇ  ಪ್ರಮುಖವಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ‘ಕರ’ವೂ ಹರಿದು ಬರುವುದಿಲ್ಲ ಎಂಬ ಕೊರಗು ಹಿಂದಿನಿಂದಲೂ ಇತ್ತು. ಈ ಬಾರಿ 2025–26ನೇ ಆರ್ಥಿಕ ವರ್ಷವು ಅದನ್ನು ದೂರ ಮಾಡಿದೆ.

ಈ ಹಿಂದಿನ ವರ್ಷಗಳಲ್ಲಿ ಕರ ಸಂಗ್ರಹದಲ್ಲಿ ಹಾಕಿಕೊಂಡ ಗುರಿಯಲ್ಲಿ ಶೇ 50ರಷ್ಟು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಈ ವರ್ಷದ ₹ 17.27 ಕೋಟಿ ಚಾಲ್ತಿ ಬೇಡಿಕೆಯಲ್ಲಿ ಜನವರಿ 19ರ ವೇಳೆಗೆ ₹11.56 ಕೋಟಿ ಕರ ಸಂಗ್ರಹ ಮಾಡಿ, ಶೇ 66.70ರಷ್ಟು ಗುರಿ ಸಾಧನೆ ಮಾಡಲಾಗಿದೆ. ಆಗಸ್ಟ್‌ ತಿಂಗಳಲ್ಲಿ ಯಾದಗಿರಿ ಜಿಲ್ಲೆ ರಾಜ್ಯದ ಕರ ವಸೂಲಾತಿ ಪ್ರಗತಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿತ್ತು. ಈಗ ರಾಜ್ಯದಲ್ಲಿ ಜಿಲ್ಲೆಯು 13ನೇ ಸ್ಥಾನಕ್ಕೆ ಬಂದಿದೆ.

ADVERTISEMENT

ಆಗಸ್ಟ್ 12ರಂದು ಕರ ವಸೂಲಾತಿಗೆ ‘ಒಂದೇ ದಿನದಲ್ಲಿ ಕೋಟಿ ಅಭಿಯಾನ’ ಹಮ್ಮಿಕೊಂಡು ₹ 1.46 ಕೋಟಿ ದಾಖಲೆಯ ತೆರಿಗೆ ಸಂಗ್ರಹಿಸಲಾಗಿತ್ತು. ನವೆಂಬರ್ 27ರಂದು ಒಂದೇ ದಿನದಲ್ಲಿ ₹ 2 ಕೋಟಿ ತೆರಿಗೆ ಸಂಗ್ರಹ ಗುರಿಯೊಂದಿಗೆ ವಿಶೇಷ ಅಭಿಯಾನ ನಡೆಸಿ, ಬರೋಬರಿ ₹ 2.68 ಕೋಟಿ ವಸೂಲಿ ಮಾಡಲಾಗಿತ್ತು. ಆರ್ಥಿಕ ವರ್ಷದ 3ನೇ ಬಾರಿಗೆ ಜನವರಿ 19ರ ವಿಶೇಷ ಕರ ವಸೂಲಿ ಅಭಿಯಾನದಂದು ದಾಖಲೆಯ ₹ 3.12 ಕೋಟಿ ಖಜಾನೆಗೆ ಹರಿದುಬಂದಿದೆ. ‌

ಗ್ರಾಮ ಪಂಚಾಯಿತಿಗಳಿಗೆ ದಾಖಲೆಯ ತೆರಿಗೆ ಕಟ್ಟುವ ಮೂಲಕ ಗ್ರಾಮೀಣ ಭಾಗದ ಜನರು ಮಾದರಿಯಾಗಿದ್ದಾರೆ. ಗ್ರಾಮಗಳಲ್ಲಿನ ಮನೆ, ಖಾಲಿ ಸ್ಥಳ, ಲೇಔಟ್, ಅಂಗಡಿ, ವಾಣಿಜ್ಯ ಮಳಿಗೆ, ಹೋಟೆಲ್, ಕೈಗಾರಿಕೆಗಳಿಂದ ಪಂಚಾಯಿತಿಗಳ ಸಂಪನ್ಮೂಲ ಕ್ರೋಡೀಕರಣವಾಗುತ್ತಿದೆ. ಜನರಲ್ಲಿ ಕರ ತುಂಬುವ ಪ್ರವೃತ್ತಿ ನಿಧಾನಕ್ಕೆ ಬೆಳೆಯುತ್ತಿದ್ದು, ಗ್ರಾಮ ಪಂಚಾಯಿತಿಗಳಿಗೆ ಆಶಾದಾಯಕವಾಗಿದೆ.

ಪ್ರತಿ ಬಾರಿ ವಿಶೇಷ ಅಭಿಯಾನದ ದಿನ ನಿರ್ಧರಿಸುವ ಮುನ್ನ ಜಿಲ್ಲಾ ಪಂಚಾಯಿತಿಯು ಜನರ ಕೈಯಲ್ಲಿ ಹಣ ಹರಿವು ಪರಿಗಣಿಸುತ್ತದೆ. ಬಿತ್ತನೆ, ಅತಿವೃಷ್ಟಿ, ನೆರೆಯಂತಹ ನಷ್ಟದ ದಿನಗಳಲ್ಲಿ ಸುಮ್ಮನಿದ್ದು, ಫಸಲು ಮಾರುಕಟ್ಟೆಗೆ ಬಂದು ಜನರ ಜೇಬಿನಲ್ಲಿ ಹಣ ಬಂದ ಗಳಿಗೆಯಲ್ಲಿ ವಿಶೇಷ ಅಭಿಯಾನ ನಡೆಸುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಟ್ಟಡ ತೆರಿಗೆ, ನಿವೇಶನ ತೆರಿಗೆ, ವಾಣಿಜ್ಯ ತೆರಿಗೆ, ಕೈಗಾರಿಕಾ ತೆರಿಗೆ, ಕುಡಿಯುವ ನೀರಿನ ಕಂದಾಯ ಹಾಗೂ ವಿವಿಧ ಸೆಸ್‌ಗಳನ್ನು ತನ್ನ ಸಿಬ್ಬಂದಿಯ ಮೂಲಕ ಸಂಗ್ರಹಿಸುತ್ತಿದೆ. ಉತ್ತಮವಾಗಿ ಕರ ಸಂಗ್ರಹಿಸುವವರಿಗೆ ಸನ್ಮಾನಿಸಿ ಬೆನ್ನು ತಟ್ಟುತ್ತಿದೆ.

ಯಾದಗಿರಿಯ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಒಂದು ದಿನದ ಕರ ವಸೂಲಿ ವಿಶೇಷ ಅಭಿಯಾನ ಅಂಗವಾಗಿ ಕರ ಪಾವತಿ ರಸೀದಿ ನೀಡಿದ ಪಂಚಾಯಿತಿ ಸಿಬ್ಬಂದಿ
ಲವೀಶ್‌ ಒರಡಿಯಾ
ಯಾದಗಿರಿ ಜಿಲ್ಲೆಯ ನಕ್ಷೆ

‘ಜಮೆಯಾದ ಕರ ವಿಶೇಷ ಕ್ರಿಯಾ ಯೋಜನೆಗೆ ಮಾತ್ರ ಬಳಕೆ’ ‘ವಿಶೇಷ ಅಭಿಯಾನದಡಿ ಸಂಗ್ರಹವಾದ ಕರದ ಹಣವನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅದಕ್ಕಾಗಿ ಬಳಸುವಂತೆ ಹಾಗೂ ಅದನ್ನು ಸಾರ್ವಜನಿಕವಾಗಿ ಕಾಣುವಂತೆ ಪ್ರದರ್ಶನ ಮಾಡುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಜನರಿಗೆ ತಾವು ಕಟ್ಟಿದ ಕರ ಯಾವುದಕ್ಕೆ ಬಳಕೆ ಆಗುತ್ತಿದೆ ಎಂಬುದು ಗೊತ್ತಾದರೆ ಕರ ಪಾವತಿ ಪ್ರವೃತ್ತಿ ವೃದ್ಧಿಯಾಗುತ್ತದೆ. ಗೊಂದಲಕ್ಕೂ ಅಸ್ಪದ ಇರುವುದಿಲ್ಲ. ಗ್ರಾ.ಪಂ. ಸಿಬ್ಬಂದಿ ವೇತನ ಬೀದಿದೀಪ ನಿರ್ವಹಣೆ ವಿದ್ಯುತ್ ಸಲಕರಣೆ ಖರೀದಿ ಗ್ರಂಥಾಲಯ ವೇತನ ರಸ್ತೆ ಮತ್ತು ಚರಂಡಿ ನೈರ್ಮಲೀಕರಣ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕೊಳವೆಬಾವಿ ದುರಸ್ತಿಯಂತಹ ಜನರಿಗೆ ಅನುಕೂಲ ಆಗುವ ಕಾರ್ಯಗಳಿಗೆ ಬಳಸುವಂತೆ ಸೂಚಿಸಲಾಗಿದೆ’ ಎಂದರು. ‘ಕಳೆದ ವರ್ಷ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಕೊನೆಯ (31) ಸ್ಥಾನದಲ್ಲಿತ್ತು. ಶೇ 43ರಷ್ಟು ಕರ ಸಂಗ್ರಹವಾಗಿತ್ತು. ಈ ವರ್ಷ ವಿಶೇಷ ಅಭಿಯಾನದಿಂದಾಗಿ ಆರ್ಥಿಕ ವರ್ಷ ಕೊನೆಯಾಗುವ ಎರಡು ತಿಂಗಳು ಮೊದಲೇ ಇಲ್ಲಿಯವರೆಗೆ ಶೇ 69ರಷ್ಟು ಗುರಿ ಮುಟ್ಟಿ ರಾಜ್ಯದಲ್ಲಿಯೇ 13ನೇ ಸ್ಥಾನ ಗಳಿಸಿದ್ದೇವೆ. ಕೆಲವು ಗ್ರಾ.ಪಂ. ಶೇ 100 ದಾಟಿ ಕರ ಸಂಗ್ರಹಿಸಿವೆ. ಹಾಕಿಕೊಂಡು ಗುರಿ ಮುಟ್ಟಲು ಪ್ರತಿ ಗುರುವಾರ ಕರ ಸಂಗ್ರಹ ಅಭಿಯಾನ ನಡೆಸಲಾಗುವುದು’ ಎಂದು ಮಾಹಿತಿ ಹಂಚಿಕೊಂಡರು.

ಬ್ಯಾಂಡ್ ಬಾಜಾ ವಾದ್ಯದೊಂದಿಗೆ ಮನೆ ಮನೆ ಭೇಟಿ: ‘ಜನರಲ್ಲಿ ಕರ ಪಾವತಿಯ ಅರಿವು ಮೂಡಿಸಿ ಗಮನ ಸೆಳೆಯಲು ಹುಣಸಗಿ ತಾಲ್ಲೂಕಿನ ಅರಕೇರ (ಜೆ) ಗ್ರಾಮದ ಈರಮ್ಮ ಅವರು ಬ್ಯಾಂಡ್ ಬಾಜಾ ವಾದ್ಯ ಮೇಳದೊಂದಿಗೆ ಮನೆ ಮನೆಗೆ ತೆರಳಿ ಕರ ಸಂಗ್ರಹಿಸಿ ಜನರ ಗಮನ ಸೆಳೆದಿದ್ದರು. ಇದರಿಂದಾಗಿ ಒಂದೇ ದಿನ ₹ 6.17 ಕರ ಹರಿದುಬಂತು’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರತಿ ಗ್ರಾ. ಪಂ. ಕನಿಷ್ಠ ₹ 3 ಲಕ್ಷ ಗುರಿ ನೀಡಲಾಗಿದ್ದು ಗರಿಷ್ಠ ₹ 9.98 ಲಕ್ಷ ವರೆಗೂ ಸಂಗ್ರಹಿಸಿದ್ದಾರೆ. ಹೀಗಾಗಿ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸಲು ಕರ ವಸೂಲಿ ಮಾಡಿದ ಪಿಡಿಒ ಸೇರಿ ಸಿಬ್ಬಂದಿಗೆ ಸನ್ಮಾನಿಸ ಕಾರ್ಯಕ್ರಮ ಇರಿಸಿಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.