
ಯಾದಗಿರಿ: ‘ಸಾರ್ವಜನಿಕರ ಮತ್ತು ವ್ಯಾಪಾರಿಗಳ ಬಹುದಿನಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ₹ 3 ಕೋಟಿ ವೆಚ್ಚದಲ್ಲಿ 71 ತರಕಾತಿ ಮಳಿಗೆಗಳಿರುವ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದ ಹಳೇ ತರಕಾರಿ ಮಾರುಕಟ್ಟೆಯ ಜಾಗದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆ ಅಡಿಯ ಲೋಕೊಪಯೋಗಿ ಇಲಾಖೆ ವಿಶೇಷ ಉಪ-ವಿಭಾಗದಿಂದ ನೂತನ ತರಕಾರಿ ಮಾರುಕಟ್ಟೆಯ ನೆಲ ಮಹಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ನಿರ್ಮಾಣ ಆಗಬೇಕು ಎಂಬ ಸ್ಥಳೀಯರ ಬೇಡಿಕೆ ಈಗ ಸಮಯ ಕೂಡಿ ಬಂದಿದೆ. ತರಕಾರಿ ಮಾರುಕಟ್ಟೆ ಕಟ್ಟಡದ ಕಾಮಗಾರಿ ಗುಣಮಟ್ಟದಲ್ಲಿ ನಿಗದಿತ ಅವಧಿಯಲ್ಲಿ ಮುಗಿಸಬೇಕು’ ಎಂದು ಸೂಚಿಸಿದರು.
‘ಕಟ್ಟಡ ನಿರ್ಮಾಣದ ನಂತರ ಸ್ಥಳವನ್ನು ವ್ಯಾಪಾರಿಗಳು ಸ್ವಚ್ಛವಾಗಿ ಇರಿಸಿಕೊಂಡು ಗ್ರಾಹಕರಿಗೆ ಸಹಕರಿಸಬೇಕು. ತರಕಾರಿ ಮಾರುಕಟ್ಟೆ ಸ್ಥಳದಲ್ಲಿ ಪುರುಷ, ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು. ಜನರಿ ಮಾರುಕಟ್ಟೆಗೆ ಬಂದು ಸುಗಮವಾಗಿ ಓಡಾಡುವ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯೂ ಮಾಡಬೇಕು’ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಕೈಲಾಸ್ ಅವರು ಕಾಮಗಾರಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಮುಖಂಡರಾದ ಹಣಮಂತ ನಾಯಕ, ಸುರೇಶ ಮಡ್ಡಿ, ಅಭಿಷೇಕ, ಸ್ಯಾಮ್ಸನ್ ಮಾಳಿಕೇರಿ, ಬಾಬು, ಖಲೀಲ್ ಅಹಮದ್, ಸಾಯಿಬಣ್ಣ ಕೆಂಗೂರಿ, ಶರಣಗೌಡ ಮಾಲಿಪಾಟೀಲ, ಸಲೀಂ ಅಹಮದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.