
ಯಾದಗಿರಿ: ‘ಸಾರ್ವಜನಿಕರು, ವಿಶೇಷ ಚೇತನರು ತಮಗಾಗಿ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.
ನಗರ ಹೊರ ವಲಯದ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯಲ್ಲಿ (ಯಿಮ್ಸ್) ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ‘ಯಿಮ್ಸ್’, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಪಿಡಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾರ್ವಜನಿಕರು, ಸರ್ಕಾರಿ ನೌಕರರು, ನ್ಯಾಯಾಂಗ ಸಿಬ್ಬಂದಿ, ಅಂಗವಿಕಲರು ಸೇರಿದಂತೆ ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಸಿಗಲಿ ಎಂಬ ದೃಷ್ಟಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಯಿಮ್ಸ್, ಆರೋಗ್ಯ, ವಿಕಲಚೇತನರ ಇಲಾಖೆಗಳ ಜತೆಗೆ ಸೇರಿಕೊಂಡು ಹಮ್ಮಿಕೊಳ್ಳಲಾಗಿದೆ. ಈ ಶಿಬಿರ ಯಶಸ್ವಿಯಾಗಲಿ. ಜೊತೆಗೆ ಸರ್ಕಾರದ ಸೌಕರ್ಯಗಳು ಪ್ರತಿಯೊಬ್ಬರೂ ಪಡೆಯುವಂತೆ ಆಗಲಿ’ ಎಂದರು.
‘ಯಿಮ್ಸ್’ ಮುಖ್ಯಸ್ಥ ಡಾ. ಸಂದೀಪ್ ಹರಸಂಗಿ ಮಾತನಾಡಿ, ‘ಜಿಲ್ಲೆಯಲ್ಲಿ ಯಿಮ್ಸ್ ಸಂಸ್ಥೆ ಬೆಳೆಯುತ್ತಾ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ನಿರತವಾಗಿದೆ. ತುರ್ತು ಚಿಕಿತ್ಸಾ ಘಟಕವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡಿಡಿಆರ್‌ಸಿ ವಿಭಾಗಕ್ಕೆ ಸ್ಥಳ ಗುರುತು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಸಿಆರ್‌ಸಿ ವಿಭಾಗವನ್ನು ಯಾದಗಿರಿಯಲ್ಲಿ ಪ್ರಥಮ ಬಾರಿಗೆ ತೆರೆಯಲಾಗಿದೆ’ ಎಂದರು.
‘ಯಾದಗಿರಿ ಹಿಂದುಳಿದ ಜಿಲ್ಲೆಯಾಗಿ ಉಳಿದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸೌಕರ್ಯಗಳನ್ನು ಪಡೆದುಕೊಂಡು ಮುಂದುವರಿಯುತ್ತಿದೆ. ಇಂತಹ ಆರೋಗ್ಯ ತಪಾಸಣೆ ಶಿಬಿರಗಳು ನಡೆದಾಗ ಜನರು ತಮ್ಮ ಅಕ್ಕಪಕ್ಕದವರಿಗೆ ತಿಳಿಹೇಳಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ, ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಆರೋಗ್ಯ ತಪಾಸಣೆಯ ಜೊತೆಗೆ ಅಗತ್ಯ ಇರುವವರಿಗೆ ಕನ್ನಡಕ, ಸ್ಟಿಕ್, ಗಾಲಿ ಕುರ್ಚಿಯಂತಹ ಉಪಕರಣಗಳನ್ನು ಕೊಡುವ ಯೋಜನೆ ಹಾಕಿಕೊಂಡಿದೆ. ಮುಂದಿನ ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಆಹ್ವಾನಿಸಿ ಅಂಗವಿಕರಿಗೆ ಸಲಕರಣೆಗಳನ್ನು ವಿತರಣೆ ಮಾಡುವ ಚಿಂತನೆ ಇರಿಸಿಕೊಳ್ಳಲಾಗಿದೆ’ ಎಂದರು.
‘ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗೆ ಅವಿನಾಭಾವ ಸಂಬಂಧವಿದೆ. ವೈದ್ಯಕೀಯ ಇಲಾಖೆಯವರು ವ್ಯಕ್ತಿಯಲ್ಲಿನ ಅಂಗವಿಕಲತೆಯನ್ನು ತಪಾಸಣೆ ಮಾಡಿ, ಪ್ರಮಾಣೀಕರಣ ಮಾಡಿ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್ ನೀಡಿದರೆ ಮಾತ್ರವೇ ನಮ್ಮ ಇಲಾಖೆಯ ಸೇರ್ಪಡೆಯಾಗುತ್ತಾರೆ. ಜೊತೆಗೆ ಸವಲತ್ತುಗಳು ಪಡೆಯಲು ಅರ್ಹರಾಗುತ್ತಾರೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ‘ಯಿಮ್ಸ್’ ಅಧೀಕ್ಷಕ ಡಾ.ಸಂತೋಷ, ಡಿಎಚ್‌ಒ ಡಾ.ಮಹೇಶ ಬಿರಾದಾರ, ಎಪಿಡಿ ಸಂಸ್ಥೆಯ ತಾಲ್ಲೂಕು ಸಂಯೋಜಕ ರಮೇಶ ಕಟ್ಟಿಮನಿ ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಅಗತ್ಯವಾದ ವೈದ್ಯಕೀಯ ಸೇವೆಗಳನ್ನು ನೀಡಲು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಸದಾ ಸಿದ್ಧವಿರಲಿದೆಡಾ. ಸಂದೀಪ್ ಹರಸಂಗಿ ‘ಯಿಮ್ಸ್’ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.