
ಯಾದಗಿರಿ: ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದ ಮಹಿಳೆಯೊಬ್ಬರ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿ, ಖಾರದ ಪುಡಿ ಹಾಕಿ ಅಮಾನುಷವಾಗಿ ವರ್ತಿಸಿದ್ದು, ಕೆಂಭಾವಿ ಠಾಣೆ ಪೊಲೀಸರು ಈ ಕುರಿತು ಇಬ್ಬರನ್ನು ಬಂಧಿಸಿದ್ದಾರೆ.
11ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಂಗಾಬಾಯಿ ಶಂಕರ ಚಿನ್ನಾರಾಠೋಡ ಸಂತ್ರಸ್ತೆ. ಕಸ್ತೂರಿಬಾಯಿ ಡಾಕಪ್ಪ ಮತ್ತು ಡಾಕಪ್ಪ ಚಿನ್ನಾರಾಠೋಡ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಕುಮಾರ ಕಿಶನ್ ರಾಠೋಡ (ರೌಡಿ ಶೀಟರ್) ಮತ್ತು ಇತರೆ ಹತ್ತು ಮಂದಿ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ಡ್ ಆಫ್ ಮಾಡಿದ್ದು, ಮುಂಬೈ, ಪುಣೆಯಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ಇದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಮಸ್ಯೆಯಿಂದಾಗಿ ಮಹಿಳೆ ಆಗಾಗ್ಗೆ ಚಿಕ್ಕಮ್ಮನ ಮನೆಗೆ, ಅಳಿಯ ಅನಿಲ್ ರಾಮು ರಾಠೋಡ ಕರೆದುಕೊಂಡು ಹೋಗುತ್ತಿದ್ದರು. ‘ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ’ ಎಂದು ನಿಂದಿಸಿ ಹಲ್ಲೆ ಮಾಡಿದ್ದರು ಎಂದು ದೂರು ನೀಡಲಾಗಿದೆ.
ತಿಪ್ಪಣ್ಣ ಎಂಬವರು ಮಹಿಳೆಗೆ ಒದ್ದು ನೆಲಕ್ಕೆ ಕೆಡವಿದರು. ಅನುಶಾಬಾಯಿ ತಲೆ ಕೂದಲು ಹಿಡಿದರೆ, ರೂಪ್ಲಿಬಾಯಿ ಅವರು ಕತ್ತರಿಯಿಂದ ಕತ್ತರಿಸಿದರು. ಚಾವಳಿ ಬಾಯಿ ಮತ್ತು ದೇವಿಬಾಯಿ ಅವರು ತಲೆಗೆ ಸುಣ್ಣ ಹಚ್ಚಿದರು. ಆ ಬಳಿಕ ತಿಪ್ಪಿಬಾಯಿ ಅವರು ಖಾರದ ಪುಡಿಯನ್ನು ಸಂತ್ರಸ್ತೆ ಮೈಮೇಲೆ ಹಾಕಿದರು. ವಿಜಯಕುಮಾರ ಸೇರಿ ಉಳಿದವರು ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ಮಾಡಿ ಕೂದಲು ಕತ್ತರಿಸಿ ಜೀವ ಬೆದರಿಕೆ ಹಾಕಿದ್ದು ಗಮನಕ್ಕೆ ಬರುತ್ತಿದ್ದಂತೆ ನಾವೇ ಸಂತ್ರಸ್ತೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕೆಲ ಆರೋಪಿಗಳನ್ನು ಬಂಧಿಸಿದ್ದೇವೆಪೃಥ್ವಿಕ್ ಶಂಕರ್ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.