ADVERTISEMENT

ಯಾದಗಿರಿ | ‘ಭೂ ಸುರಕ್ಷಾ’ ಯೋಜನೆ: 72 ಲಕ್ಷ ಪುಟಗಳು ಗಣಕೀಕರಣ

ಮಲ್ಲಿಕಾರ್ಜುನ ನಾಲವಾರ
Published 3 ಸೆಪ್ಟೆಂಬರ್ 2025, 6:56 IST
Last Updated 3 ಸೆಪ್ಟೆಂಬರ್ 2025, 6:56 IST
 ಸಂಗ್ರಹ ಚಿತ್ರ
 ಸಂಗ್ರಹ ಚಿತ್ರ   

ಯಾದಗಿರಿ: ‘ಭೂ ಸುರಕ್ಷಾ’ ಯೋಜನೆಯಡಿ ಕಂದಾಯ ಇಲಾಖೆಯು ಲಕ್ಷಾಂತರ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅವುಗಳನ್ನು ಜಾಲತಾಣದಲ್ಲಿ ಭದ್ರಪಡಿಸುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ.

ಆರು ತಾಲ್ಲೂಕುಗಳು, ತಲಾ ಒಂದೊಂದು ಸಹಾಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ದಶಕಗಳ ಹಿಂದಿನ 72 ಲಕ್ಷ ಪುಟಗಳ ಭೂದಾಖಲೆಗಳು ಗಣಕೀಕರಣ ಮಾಡಲಾಗಿದೆ. ಗಣಕೀಕರಣ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ಇದನ್ನು ಪೂರ್ಣಗೊಳಿಸುವ ವಿಶ್ವಾಸದಲ್ಲಿದೆ ಜಿಲ್ಲಾಡಳಿತ.

ಎಲ್ಲ ಭೂ ಮತ್ತು ಸರ್ವೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವುದು ‘ಭೂ ಸುರಕ್ಷಾ’ ಯೋಜನೆಯ ಮುಖ್ಯ ಗುರಿಯಾಗಿದೆ. ಡಿಜಿಟಲೀಕರಗೊಂಡ ದಾಖಲೆಗಳನ್ನು ಜನಸಾಮಾನ್ಯರಿಗೆ ಆನ್‌ಲೈನ್‌ ಮೂಲಕವೇ ಪಡೆದು ವಿತರಣೆ ಮಾಡುವ ಉದ್ದೇಶವೂ ಇರಿಸಿಕೊಂಡಿದೆ.

ADVERTISEMENT

ಪಹಣಿ, ಆಸ್ತಿ ವರ್ಗಾವಣೆ ಪತ್ರ (ಮ್ಯುಟೇಷನ್‌), ಟಿಪ್ಪಣಿ ಸೇರಿದಂತೆ ಕಂದಾಯ ಇಲಾಖೆಯ ಸಾಕಷ್ಟು ಹಳೆಯ ಕಡತಗಳು ಹಾಳಾಗುವ ಸ್ಥಿತಿಯಲ್ಲಿದ್ದವು. ಎಷ್ಟೇ ಸಂರಕ್ಷಣೆ ಮಾಡಿದರೂ ಅವುಗಳನ್ನು ಸಂರಕ್ಷಿಸಿ ಇರಿಸುವುದು ಸವಾಲಿನ ಕೆಲಸವಾಗಿತ್ತು. ಜತೆಗೆ ಕಚೇರಿಯಲ್ಲಿ ಸಾಕಷ್ಟ ಸ್ಥಳವೂ ಬೇಡುತ್ತಿದ್ದವು. ದಶಕಗಳ ಹಿಂದಿನ ಕಡತಗಳು ಮುಟ್ಟಿದರೆ ಕಾಗದಗಳು ಪುಡಿಪುಡಿ ಆಗುತ್ತಿದ್ದವು. ಭೂ ಸುರಕ್ಷಾ ಯೋಜನೆ ನೆರವಿನಿಂದ ಅದೆಲ್ಲವೂ ದೂರಾಗಿ, ಭೂದಾಖಲೆಗಳೂ ಡಿಜಿಟಲ್‌ ಸ್ವರೂಪಕ್ಕೆ ಬದಲಾಗಲಿವೆ.

ಸಾರ್ವಜನಿಕರು ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಬೆರಳಿನ ತುದಿಯಲ್ಲಿ ಭೂದಾಖಲೆಗಳು ಲಭ್ಯವಾಗಲಿವೆ. ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳಲ್ಲಿ ವ್ಯಾಜ್ಯ ಪ್ರಕರಣಗಳ ವಿಲೇವಾರಿಗೂ ಸಹಾಯಕ್ಕೆ ಬರಲಿದೆ. ದಾಖಲೆಗಳು ನಕಲು ಮಾಡುವುದೂ ತಪ್ಪಲಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು.

ಹೊಲದ ಪಹಣಿ, ಖಾತೆ ಬದಲಾವಣೆ, ವ್ಯಾಜ್ಯದ ದಾಖಲೆ, ರೈತರ ಹಕ್ಕುಗಳು, ಭೂ ಮಂಜೂರಾತಿ, ಭೂ ಸುಧಾರಣೆಯ ಕಾಯ್ದೆ ದಾಖಲೆಗಳು, ಸರ್ಕಾರಿ ಜಮೀನಿನ ದಾಖಲೆಗಳು, ಕೈಬರಹದ ದಾಖಲೆಗಳು ಸೇರಿದಂತೆ ಹಲವು ಆನ್‌ಲೈನ್‌ ಮುಖೇನ ಸಿಗಲಿವೆ. ದಾಖಲೆಗಳನ್ನು ಪ್ರತಿ ಪುಟಕ್ಕೆ ನಿಗದಿಪಡಿಸಿ ಶುಲ್ಕು ಪಾವತಿಸಿ ನಾಡಕಚೇರಿ, ಕಂದಾಯ ಕಚೇರಿಗಳಲಿ ಅರ್ಜಿದಾರರು ಪಡೆದುಕೊಳ್ಳಬಹುದಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ: 

ಯಾದಗಿರಿ ತಾಲ್ಲೂಕು ಕಚೇರಿಯಲ್ಲಿ ಅತ್ಯಧಿಕ 17.80 ಲಕ್ಷ ಪುಟಗಳನ್ನು ಡಿಜಿಟಲೀಕರಣಕ್ಕೆಒಳಪಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ 1.80 ಲಕ್ಷ, ಸಹಾಯಕ ಆಯುಕ್ತರ ಕಚೇರಿಯಲ್ಲಿ 93 ಸಾವಿರ, ಶಹಾಪುರ ಕಚೇರಿಯಲ್ಲಿ 13.69 ಲಕ್ಷ, ಸುರಪುರ ಕಚೇರಿಯಲ್ಲಿ 10.60 ಲಕ್ಷ, ಗುರುಮಠಕಲ್ ಕಚೇರಿಯಲ್ಲಿ 9.53 ಲಕ್ಷ, ವಡಗೇರಾ ಕಚೇರಿಯಲ್ಲಿ 9.60 ಲಕ್ಷ ಹಾಗೂ ಹುಣಸಿಗಿಯಲ್ಲಿ 8.12 ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಲಾಗಿದೆ. ಒಟ್ಟು 72.16 ಲಕ್ಷ ಪುಟಗಳು ಜಾಲತಾಣದಲ್ಲಿ ಭದ್ರವಾಗಿ ಸೇರಿವೆ.

‘ಪತ್ರಿ ತಾಲ್ಲೂಕಿನಲ್ಲಿ ನಿತ್ಯ 5000 ಪುಟಗಳು ಸ್ಕ್ಯಾನ್’‌

‘ಪ್ರತಿ ತಾಲ್ಲೂಕಿನ ಕಚೇರಿಯಲ್ಲಿ ನಿತ್ಯ ಸುಮಾರು 5 ಸಾವಿರ ಭೂದಾಖಲೆಯ ಪುಟಗಳು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಲಾ ಮೂರು ಓವರ್ ಹೆಡ್ ಮತ್ತು ಡುಪ್ಲೆಕ್ಸ್ ಸ್ಕ್ಯಾನರ್‌ಗಳನ್ನು ಬಳಸಿಕೊಂಡು ಆರು ಮಂದಿ ಡಾಟಾ ಎಂಟ್ರಿ ಆಪರೇಟರ್‌ ಗಣಕೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರಾದರೂ ಕಚೇರಿಗೆ ಬಂದು ಭೂದಾಖಲೆಗಳನ್ನು ಕೇಳಿದರೆ ತಾಲ್ಲೂಕು ಗ್ರಾಮ ವ್ಯಕ್ತಿಯ ಹೆಸರು ಸರ್ವೆ ನಂಬರ್ ನಮೂದಿಸಿದ ತಕ್ಷಣವೇ ದಾಖಲೆಗಳು ಸಿಗುತ್ತವೆ. ಡಿಜಿಟಲ್ ಸಹಿ ಹೊಂದಿರುವುದರಿಂದ ನಕಲಿ ಮಾಡಲು ಆಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.