ADVERTISEMENT

ಯಾದಗಿರಿ | ಓದುವ ಖುಷಿಗೆ ‘ಕಳೆದುಕೊಳ್ಳುವ’ ಆತಂಕ

ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಓದುಗರ ಸ್ವತ್ತುಗಳಿಗೆ ಕನ್ನ

ಮಲ್ಲಿಕಾರ್ಜುನ ನಾಲವಾರ
Published 6 ಫೆಬ್ರುವರಿ 2026, 4:03 IST
Last Updated 6 ಫೆಬ್ರುವರಿ 2026, 4:03 IST
ಯಾದಗಿರಿ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಓದುವಲ್ಲಿ ನಿರತವಾದ ಓದುಗರು 
ಯಾದಗಿರಿ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಓದುವಲ್ಲಿ ನಿರತವಾದ ಓದುಗರು    

ಯಾದಗಿರಿ: ಮೊಬೈಲ್, ಆನ್‌ಲೈನ್ ಗೇಮಿಂಗ್ ಗೀಳು, ಮತ್ತಿತರ ಚಟಗಳಿಗೆ ಬಲಿಯಾಗಿ ಪುಸ್ತಕ ಓದಿನಿಂದ ದೂರಾಗುತ್ತಿರುವವರ ನಡುವೆಯೂ ಓದಿ ಭವಿಷ್ಯ ರೂಪಿಸಿಕೊಳ್ಳುವ ಕನಸಿನೊಂದಿಗೆ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ತಮ್ಮ ಸ್ವತ್ತುಗಳು ಕಳುವಾಗುತ್ತಿರುವುದು ಓದುವ ಖುಷಿಯನ್ನೇ ಕಸಿದುಕೊಳ್ಳುತ್ತಿದೆ.

ನಗರದ ಅಮರ ಲೇಔಟ್‌ನಲ್ಲಿ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ತೆರೆದ ಕಬೋರ್ಡ್‌ಗಳಲ್ಲಿ ಇರಿಸುವ ಬ್ಯಾಗ್‌ಗಳಿಂದ ಸ್ವತ್ತುಗಳು, ಕೆಲವೊಮ್ಮೆ ಬ್ಯಾಗ್‌ ಸಮೇತ ಕಳ್ಳತನ ಆಗುತ್ತಿದೆ. ಇದು, ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಆತಂಕ ತಂದೊಡ್ಡಿದೆ.

ಜ್ಞಾನ ಭಂಡಾರವಾಗಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ನಗರದ ಹೃದಯ ಭಾಗದಲ್ಲಿದೆ. ಹೀಗಾಗಿ, ಬೆಳಿಗ್ಗೆ 8ರಿಂದಲೇ ಓದುಗರ ದಂಡು ಗ್ರಂಥಾಲಯವನ್ನು ಆವರಿಸಿಕೊಂಡಿರುತ್ತದೆ. ಪ್ರವೇಶ ದ್ವಾರದ ಒಳಗೆ ಪಾದರಕ್ಷೆ ಬಿಡಲು ಜಾಗ ಇರದಷ್ಟು, ಕುರ್ಚಿಗಳೂ ಸಾಕಾಗದೆ ನೆಲದ ಮೇಲೆ ಕುಳಿತು ಓದುವ ಆಸಕ್ತಿಯಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ಬರುತ್ತಾರೆ.

ADVERTISEMENT

ಕಾಲೇಜಿನ ಬಿಡುವಿನ ಸಮಯದ ಸದ್ಬಳಕೆ ಮಾಡಿಕೊಳ್ಳುವವರು, ಪತ್ರಿಕೆ ಓದುವವರು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು, ಇಲ್ಲಿಗೆ ಪ್ರತಿದಿನ ಸುಮಾರು 250 ಜನ ಓದುಗರು ಬರುತ್ತಾರೆ. ಅದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹೀಗೆ, ಬಂದವರ ಪೈಕಿ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಲೇಜಿನ ಐಡಿ ಕಾರ್ಡ್, ಪ್ಯಾನ್‌ ಕಾರ್ಡ್, ಆಧಾರ್ ಕಾರ್ಡ್‌, ನಿತ್ಯದ ಖರ್ಚಿಗೆ ಆಗುವಷ್ಟು ಹಣವೂ ಇರಿಸಿಕೊಂಡಿರುತ್ತಾರೆ. ಓದುಗರ ಸೋಗಿನಲ್ಲಿ ಬರುವರು ಅವುಗಳಿಗೆ ಕನ್ನಹಾಕುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಬ್ಯಾಗ್‌ನಲ್ಲಿ ಇರಿಸಿದ್ದ ಹಣ, ವೋಟರ್ ಐಡಿ ಕಾರ್ಡ್, ಕಾಲೇಜು ಐಡಿ ಕಾರ್ಡ್ ಕಳುವಾಗಿತ್ತು. ನನ್ನ ಬ್ಯಾಗ್ ಯಾರು ತೆಗೆದಿದ್ದಾರೆ ಎಂದು ಗ್ರಂಥಾಲಯದ ಸಿಬ್ಬಂದಿಗೆ ಕೇಳಿದರೆ ನಮ್ಮನ್ನೇ ದಬಾಯಿಸಿದರು. ಸಿಬ್ಬಂದಿ ಸಮೀಪದಲ್ಲಿ ಇರಿಸಿದ್ದರೂ ಬ್ಯಾಗ್‌ಗಳ ಮೇಲೆ ನಿಗ ಇರಿಸುತ್ತಿಲ್ಲ. ಗ್ರಂಥಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಇಲ್ಲ. ಖಾಸಗಿ ಸಂಸ್ಥೆಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಓದಲು ಹೋಗುವ ಬದಲು, ಸರ್ಕಾರಿ ಗ್ರಂಥಾಲಯಕ್ಕೆ ಬಂದರೆ ಸ್ವತ್ತುಗಳು ಕಳುವಾಗುತ್ತಿವೆ’ ಎಂದು ವಿದ್ಯಾರ್ಥಿ ಮಹಾಲಕ್ಷ್ಮಿ ಅಲವತ್ತುಕೊಂಡರು.

‘ನೂರಾರು ಸಂಖ್ಯೆಯಲ್ಲಿ ಓದುಗರು ಬರುತ್ತಾರೆ. ಪ್ರತಿಯೊಬ್ಬರ ಮೇಲೆ ನಿಗ ಇರಿಸುವುದು ಕಷ್ಟವಾಗುತ್ತಿದೆ. ಬೆಳಿಗ್ಗೆ 8ರಿಂದ 12 ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಬ್ಯಾಗ್‌ಗಳು ಇರಿಸುವ ಕಬೋರ್ಡ್‌ಗಳ ಸಮೀಪದಲ್ಲಿ ಯಾರನ್ನೂ ಜಾಸ್ತಿ ಹೊತ್ತು ನಿಲ್ಲಲು ಬಿಡುವುದಿಲ್ಲ. ಆದರೂ ನಮ್ಮ ಕಣ್ಣು ತಪ್ಪಿಸಿ ಕಳ್ಳತನ ಕೃತ್ಯಗಳು ನಡೆಯುತ್ತಿವೆ. ಈ ಬಗ್ಗೆ ಗ್ರಂಥಪಾಲಕರ ಗಮನಕ್ಕೆ ತರಲಾಗಿದೆ’ ಎನ್ನುತ್ತಾರೆ ಗ್ರಂಥಾಲಯದ ನೌಕರ ರಾಯಪ್ಪ.

ಯಾದಗಿರಿ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿನ ತೆರೆದ ಕಬೋರ್ಡ್‌ನಲ್ಲಿನ ಬ್ಯಾಗ್‌ಗಳು

‘ಶೀಘ್ರವೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆ’

‘ಗ್ರಂಥಾಲಯದಲ್ಲಿ ಬ್ಯಾಗ್‌ಗಳಿಂದ ಸ್ವತ್ತುಗಳನ್ನು ಕಳವು ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಓದುಗರು ದೂರು ನೀಡಿ ಗಮನಕ್ಕೆ ತಂದಿದ್ದಾರೆ. ಗ್ರಂಥಾಲಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ ಶೀಘ್ರವೇ ಕಡಿವಾಣ ಹಾಕಲಾಗುವುದು. ಓದುಗರು ಬೆಲೆ ಬಾಳುವ ಸ್ವತ್ತುಗಳನ್ನು ತರಲೇ ಬಾರದು ಎಂದೂ ಸಾಕಷ್ಟು ಬಾರಿ ಹೇಳಿದ್ದರೂ ಕೇಳುತ್ತಿಲ್ಲ’ ಎಂದು ಮುಖ್ಯ ಗ್ರಂಥಪಾಲಕ ಜೈ ಪ್ರಕಾಶ ‘ಪ್ರಜಾವಾಣಿ’ ತಿಳಿಸಿದರು. ‘ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆಯೂ ಇದೆ. ಕಾಂಗ್ರೆಸ್ ಕಚೇರಿ ಸಮೀಪದ ಗ್ರಂಥಾಲಯ ಕಟ್ಟಡ ಶಿಥಿಲವಾಗಿದೆ. ₹ 1 ಕೋಟಿ ಅನುದಾನ ಕೊಡುವಂತೆ ಕೆಕೆಆರ್‌ಡಿಬಿಗೆ ಕೋರಿದ್ದೇವೆ. ಅನುದಾನ ಸಿಕ್ಕರೆ ಅದನ್ನು ಕೆಡವಿ ಮಕ್ಕಳಿಗಾಗಿಯೇ ಸಮುದಾಯ ಮಕ್ಕಳ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು’ ಎಂದರು.