ADVERTISEMENT

ಯಾದಗಿರಿ | ಮೈಲಾಪುರ ಜಾತ್ರೆ; ತರಾತುರಿಯ ಸಿದ್ಧತೆ

ಉತ್ತರ ಕರ್ನಾಟಕ ಸೇರಿ ಮೂರು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗಿ

ಮಲ್ಲಿಕಾರ್ಜುನ ನಾಲವಾರ
Published 12 ಜನವರಿ 2026, 8:34 IST
Last Updated 12 ಜನವರಿ 2026, 8:34 IST
ಸಂಕ್ರಮಣದ ಪುಣ್ಯಸ್ನಾನಕ್ಕೆ ತೆರಳುವ ಉತ್ಸವ ಮೂರ್ತಿಗಳು
ಸಂಕ್ರಮಣದ ಪುಣ್ಯಸ್ನಾನಕ್ಕೆ ತೆರಳುವ ಉತ್ಸವ ಮೂರ್ತಿಗಳು   

ಯಾದಗಿರಿ: ಉತ್ತರ ಕರ್ನಾಟಕ ಸೇರಿ ನೆರೆಯ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಲಕ್ಷಾಂತರ ಭಕ್ತರು ಬಂದು ಸಂಗಮವಾಗುವ ಮೈಲಾಪುರದ ಮಲ್ಲಯ್ಯನ ಜಾತ್ರೆಯ ಸಿದ್ಧತೆಗಳನ್ನು ಗಮನಿಸಿದರೆ ‘ಯುದ್ಧ ಕಾಲದಲ್ಲಿ ಶಸ್ರ್ತಾಭ್ಯಾಸ’ ಎನ್ನುವಂತಿದೆ.‌

ಸಣ್ಣ ಪುಟ್ಟ ಮಿಠಾಯಿ, ಬಜ್ಜಿ– ಬೋಂಡಾ, ಬಳೆ ಅಂಗಡಿಗಳು, ತೊಟ್ಟಿಲು, ವಿದ್ಯುತ್ ಜೋಕಾಲಿ, ನೆಲದ ಮೇಲೆ ಕುಳಿತು ತೆಂಗಿನಕಾಯಿ ಮಾರುವವರೂ ತಮ್ಮ ಸರಕುಗಳನ್ನು ಹೊತ್ತು ತಂದು ವ್ಯಾಪಾರಕ್ಕಾಗಿ ಅಣಿಯಾಗುತ್ತಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಜಾತ್ರೆಗೆ ಬೆರಳೆಣಿಕೆಯಷ್ಟು ದಿನಗಳಿವೆ ಎನ್ನುವಾಗ ದಿಗ್ಗನೆದ್ದು ತಡಬಡನೇ ಸಿದ್ಧತೆಗಳನ್ನು ಆರಂಭಿಸಿದಂತೆ ಮೈಲಾಪುರದತ್ತ ಸಾಗುವ ರಸ್ತೆಗಳು, ಗ್ರಾಮದ ಬೀದಿಗಳು, ಹೊನ್ನಕೆರೆಯ ಸುತ್ತಲೂ ಕಾಣಸಿಗುತ್ತಿದೆ.

ಪ್ರತಿ ವರ್ಷ ಸಾಮಾನ್ಯವಾಗಿ ಜನವರಿ 12ರಿಂದಲೇ ಮೈಲಾರಲಿಂಗೇಶ್ವರನ ದೇವಸ್ಥಾನ, ಬೆಟ್ಟದ ಒಡಲಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಆದರೆ, ಈ ವರ್ಷ ಮಲ್ಯಯ್ಯನ ವಾರವಾದ ಭಾನುವಾರ (ಜ.11) ಬಂದಿದ್ದರಿಂದ ಅದೇ ದಿನದಿಂದಲೇ ಧಾರ್ಮಿಕ ಕಾರ್ಯಗಳು ಚುರುಕುಗೊಂಡಿವೆ.

ADVERTISEMENT

ಭಾನುವಾರದ ಹಿಂದಿನ ದಿನವೂ ಗ್ರಾಮದ ಪ್ರಮುಖ ಬೀದಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕುವುದು, ಬೀದಿ ದೀಪಗಳ ಅಳವಡಿಕೆ ಕಾರ್ಯ ಸಾಗಿತ್ತು. ಸಾರ್ವಜನಿಕ ನಳದ ತೊಟ್ಟಿಯ ಕಟ್ಟೆಗಳಿಗೆ ಸಿಮೆಂಟ್ ಪ್ಲಾಸ್ಟರ್ ಮಾಡುವುದು, ಬೆಟ್ಟದಲ್ಲಿನ ನುಣುಪಾದ ಮೆಟ್ಟಿಲುಗಳ ಕಲ್ಲುಗಳ ಮೇಲೆ ಯಂತ್ರದಿಂದ ಗೆರೆ ಎಳೆಯುವ, ತಿಂಗಳಿಂದ ಅನಾಥವಾಗಿ ಬಿದ್ದಿದ್ದ ಕಸ ವಿಲೇವಾರಿಯಂತಹ ಕೆಲಸಗಳು, ಕೆರೆ ಬಲಬದಿಯ ತಿರುವಿನಲ್ಲಿ ಕಾಂಕ್ರೀಟ್‌ ಹಾಕಿ ನೀರುಣಿಸುವುದು, ಮುರುಂ ಹಾಕುವಂತಹ ಕಾರ್ಯಗಳು ಸಾಗಿದವು.

ಪ್ರತಿ ವರ್ಷ ಜಾತ್ರೆಗೆ ನೆನಪಾಗುವ ಮೈಲಾಪುರ: ‘ಅಧಿಕಾರಿಗಳಿಗೆ ಮಕರ ಸಂಕ್ರಾಂತಿ ಜಾತ್ರೆಗೆ ಮಾತ್ರವೇ ಮೈಲಾಪುರ ನೆನಪಿಗೆ ಬರುತ್ತಿದೆ. ಉಳಿದ ದಿನಗಳಲ್ಲಿ ಕ್ಷೇತ್ರ ಅವ್ಯವಸ್ಥೆಗಳಿಂದ ತುಂಬಿಕೊಂಡಿದ್ದರೂ ಇತ್ತ ಸುಳಿಯುವುದಿಲ್ಲ. ಕಾಟಾಚಾರಕ್ಕೆ ಸಭೆ ಕರೆದು ಗ್ರಾಮಸ್ಥರಿಂದ ಸಲಹೆಗಳನ್ನು ಪಡೆಯುತ್ತಾರೆ. ಕೊನೆಗೆ ನಾವು ಹೇಳಿದ್ದನ್ನು ಬಿಟ್ಟು ತಮ್ಮ ಇಚ್ಛೆಯಂತೆ ಬೇಕಾಬಿಟ್ಟಿಯಾಗಿ ಕೆಲಸ ಮಾಡಿ ಹೋಗುತ್ತಾರೆ’ ಎನ್ನುತ್ತಾರೆ ಗ್ರಾಮಸ್ಥ ಸಿದ್ದಲಿಂಗ ಪೂಜಾರಿ.

‘ಹುಂಡಿಯಿಂದ ಕೋಟ್ಯಂತರ ರೂಪಾಯಿ ಜಮೆ ಆಗುತ್ತದೆ. ಸರ್ಕಾರದ ಅನುದಾನಕ್ಕೆ ಕಾಯದೆ ಅದೇ ಹಣವನ್ನು ಸರಿಯಾಗಿ ಬಳಸಿದರೆ ಭಕ್ತರಿಗೆ ಉತ್ತಮವಾದ ಸೌಕರ್ಯಗಳನ್ನು ಕೊಡಬಹುದು. ಸರಿಯಾದ ವ್ಯವಸ್ಥೆ ಇಲ್ಲದೆ ತೆಲಂಗಾಣ, ಆಂಧ್ರಪ್ರದೇಶದಿಂದ ಬರುವ ಭಕ್ತರು ಕೆರೆಯ ಎಡಬದಿಯಲ್ಲಿ ಇರುವ ಬೆಟ್ಟದ ಕಲ್ಲು ಬಂಡೆಗಳ ನಡುವೆ ಉಳಿದುಕೊಳ್ಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಯಾದಗಿರಿ ತಾಲ್ಲೂಕಿನ ಮೈಲಾಪುರದ ಜಾತ್ರೆಯ ಅಂಗವಾಗಿ ಸಿದ್ಧವಾಗುತ್ತಿರುವ ಜೋಕಾಲಿ ತೊಟ್ಟಿಲು 
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ– ಮೈಲಾಪುರ ರಸ್ತೆಯ ಗುಂಡಿಗಳಿಗೆ ಮುರುಮ್‌ ಹಾಕಲಾಯಿತು
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ– ಮೈಲಾಪುರ ರಸ್ತೆ ದೂಳುಮಯ
ಯಾದಗಿರಿ ತಾಲ್ಲೂಕಿನ ಮೈಲಾಪುರದ ಜಾತ್ರೆಯ ಅಂಗವಾಗಿ ಸಿದ್ಧವಾಗುತ್ತಿರುವ ಅಂಗಡಿಗಳು

‘ಕೆರೆ ಏರಿಯ ಒಳ ದಡ ದುರಸ್ತಿಯಾಗಲಿ’

‘ಕೆರೆ ಏರಿಯ ಒಳ ದಡದ ಕಲ್ಲುಗಳು ಸಡಿಲವಾಗಿವೆ. ಕಳೆದ ವರ್ಷ ಮಲ್ಲಯ್ಯನ ಪುಣ್ಯಸ್ನಾನ ವೀಕ್ಷಣೆ ಮಾಡಲು ಹಲವು ಜನರು ನಿಂತಿದ್ದರು. ಏಕಾಏಕಿ ಕಲ್ಲುಗಳು ಜಾರಿದ್ದು ಯಾವುದೇ ಅನಾಹುತ ಸಂಭವಿಸಲಿಲ್ಲ. ಕೂಡಲೇ ಒಳ ದಡವನ್ನು ದುರಸ್ತಿ ಮಾಡಬೇಕು’ ಎನ್ನುತ್ತಾರೆ ಮೈಲಾಪುರದ ನಿವಾಸಿ ಬಸವರಾಜ ಪೂಜಾರಿ. ‘ಉತ್ಸವ ಮೂರ್ತಿ ಪಲ್ಲಕ್ಕಿ ಮೆರವಣಿಗೆ ಹಾಗೂ ಪುಣ್ಯಸ್ನಾನವನ್ನು ಕಣ್ತುಂಬಿಕೊಳ್ಳಲು ಕೆರೆ ದಡದ ಕಲ್ಲುಗಳ ಮೇಲೆ ಸಾವಿರಾರು ಜನರು ನಿಲ್ಲುತ್ತಾರೆ. ದೊಡ್ಡ– ದೊಡ್ಡ ಕಲ್ಲುಗಳು ಸಡಿಲವಾಗಿವೆ. ಆದಷ್ಟು ಬೇಗ ದುರಸ್ತಿ ಮಾಡುವುದು ಅವಶ್ಯವಿದೆ. ತಹಶೀಲ್ದಾರರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಪೊಲೀಸರು ಕಲ್ಲುಗಳ ಮೇಲೆ ಜನರು ನಿಲ್ಲದಂತೆ ನೋಡಿಕೊಳ್ಳಬೇಕು’ ಎನ್ನುತ್ತಾರೆ ಅವರು.

25 ಎಕರೆ ಹೊಲದಲ್ಲಿ ವಾಹನ ನಿಲ್ದಾಣ ಜಾತ್ರೆಗೆ ಬರುವ ಭಕ್ತರಿಗೆ ಸರ್ಕಾರಿ ಶಾಲೆಯ ಸಮೀಪದ ಆವರಣದಲ್ಲಿ ಕೆಕೆಆರ್‌ಟಿಸಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿಯಾಗಿ 10 ಸಾವಿರಕ್ಕೂ ಅಧಿಕ ವಾಹನಗಳು ಬರುವ ನಿರೀಕ್ಷೆ ಇದ್ದು ಮೂರು ಕಡೆಗಳಲ್ಲಿ 25ಕ್ಕೂ ಹೆಚ್ಚು ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸಂಚಾರ ಪೊಲೀಸರು. ವಾಹನಗಳ ನಿಲುಗಡೆಗಾಗಿ ಹೊಲದ ಮಾಲೀಕರ ಮನವೊಲಿಸಿ ಸಕಲ ಸಜ್ಜು ಮಾಡಲಾಗಿದೆ. ರಾಯಚೂರು ಮಾರ್ಗದಿಂದ ಬರುವ ವಾಹನಗಳು ವರ್ಕನಳ್ಳಿ ಕ್ರಾಸ್ ಯಾದಗಿರಿ ಗುರುಮಠಕಲ್‌ ಮಾರ್ಗದಿಂದ ಬರುವ ವಾಹನಗಳಿಗೆ ರಾಮಸಮುದ್ರ ರಸ್ತೆ ಬದಿಯಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. 

‘100 ಮೊಬೈಲ್‌ ಶೌಚಾಲಯ 30 ನೀರಿನ ಟ್ಯಾಂಕರ್‌’

‘ಎರಡ್ಮೂರು ಕಡೆಗಳಲ್ಲಿ ಹೊಸದಾಗಿ ಶೌಚಾಲಯಗಳ ನಿರ್ಮಾಣ ಮಾಡಿದ್ದು ಮೂರು ಕಡೆಗಳಲ್ಲಿ 100 ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ್‌ ಸುರೇಶ ರಾಣಪ್ಪ ಅಂಕಲಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆಚ್ಚು ಜನದಟ್ಟಣೆ ಕಂಡುಬರುವ ಬಸ್ ನಿಲ್ದಾಣ ಕಲ್ಯಾಣ ಮಂಟಪ ಸಮೀಪದಲ್ಲಿ ಶೌಚಾಲಯ ವ್ಯವಸ್ಥೆ ಮಾಡುತ್ತೇವೆ. 30 ನೀರಿನ ಟ್ಯಾಂಕರ್‌ಗಳು ನಿರಂತರವಾಗಿ ನೀರು ಪೂರೈಕೆ ಮಾಡಲಿದ್ದು ಅವಶ್ಯ ಇರುವಲ್ಲಿ ತೆರಳಲಿವೆ’ ಎಂದರು. 

ಭಕ್ತರಿಗೆ ಭಂಡಾರವಲ್ಲ ದೂಳಿನ ಮಜ್ಜನ!

ಯಾದಗಿರಿ ಗಂಜ್‌ – ವರ್ಕನಳ್ಳಿ– ಮೈಲಾಪುರ ರಸ್ತೆಯು ವರ್ಕನಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಗುಂಡಿಗಳಿಂದ ಆವೃತ್ತವಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುರುಮ್ ಹಾಕುವ ಕಾರ್ಯ ನಡೆಯಿತು. ಮೊಣಕಾಲುದ್ದ ಅಲ್ಲಲ್ಲಿ ರಸ್ತೆಯ ಉದ್ದಕ್ಕೂ ಬಿದ್ದ ಗುಂಡಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಮುರುಮ್‌ ಹಾಕಿ ಮುಚ್ಚಲಾಗಿದೆ. ಕೆಲವೆಡೆ ಅರ್ಧಂಬರ್ಧ ಮುರುಮ್‌ ಹಾಕಿ ಗುಂಡಿಗಳನ್ನು ಮುಚ್ಚಿದ್ದು ಕಂಡುಬಂತು. ಡಾಂಬರ್ ಕಿತ್ತುಬಂದು ಜಲ್ಲಿ ಕಲ್ಲುಗಳು ಮೇಲೆದ್ದು ಮಣ್ಣಿನ ರಸ್ತೆಯಾಗಿದೆ. ಈಗ ಮುರುಮ್ ಹಾಕಿದ್ದು ಈ ರಸ್ತೆಯಲ್ಲಿ ಸಂಚರಿಸುವ ಭಕ್ತರಿಗೆ ದೂಳಿನ ಅಭಿಷೇಕವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.